ಸಾರಾಂಶ
ಸರ್ಕಾರ ಕಾನೂನು ಮಾಡಲಿ, ಅದು ಎಲ್ಲರಿಗೂ ಅನ್ವಯ ಆಗುವಂತೆ ಇರಬೇಕು
ಕನ್ನಡಪ್ರಭ ವಾರ್ತೆ ಬೆಳಗಾವಿ
ಹಿಜಾಬ್ ಧಾರಣೆ ನಿಷೇಧ ಹಿಂಪಡೆಯುವುದಾಗಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಸರ್ಕಾರ ಕಾನೂನು ಮಾಡಲಿ, ಅದು ಎಲ್ಲರಿಗೂ ಅನ್ವಯ ಆಗುವಂತೆ ಇರಬೇಕು. ಒಂದು ಪಂಗಡ, ಒಂದು ಸಮಾಜ ಗುರಿಯಾಗಿಸಿಕೊಂಡು ಕಾನೂನು ಮಾಡುವುದು ಸರಿಯಲ್ಲ. ಒಬ್ಬರಿಗೊಂದು ನ್ಯಾಯ, ಮತ್ತೊಬ್ಬರಿಗೊಂದು ನ್ಯಾಯ. ಒಬ್ಬರಿಗೊಂದು ಕಾನೂನು ಇನ್ನೊಬ್ಬರಿಗೆ ಮತ್ತೊಂದು ಕಾನೂನು ಮಾಡಯವುದು ಸರಿಯಲ್ಲ ಎಂದರು.
ಸರ್ಕಾರ, ಮುಖ್ಯಮಂತ್ರಿ ಅವರ ವರ್ತನೆ ಸಮಾಜದಲ್ಲಿ ಶೋಭೆ ತರುವಂಥದ್ದು ಅಲ್ಲ. ಸಿದ್ದರಾಮಯ್ಯ ಕರ್ನಾಟಕದ ಎಲ್ಲ ಸಮುದಾಯಗಳ ಸಿಎಂ ಆಗಿದ್ದಾರೆ. ಯಾವುದೇ ಒಂದು ಪಂಗಡಗಳ ಸಿಎಂ ಅವರಲ್ಲ. ಹೀಗಾಗಿ ಇಂಥ ನಡುವಳಿಕೆ ಸರಿಯಲ್ಲ. ಇತ್ತೀಚೆಗೊಂದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮಂಗಳಸೂತ್ರ, ಕಾಲುಂಗುರ ಹಾಗೂ ಕಿವಿಯೊಲೆ ತೆಗೆದಿಡಬೇಕು ಎಂದು ರೂಲ್ಸ್ ಬಂತು ಎಂದರು.ಒಂದು ಪಂಗಡವರಿಗೆ ಹೀಗೆ ಕಾನೂನು ಮಾಡಲಾಗಿದೆ. ಆದರೆ, ಮತ್ತೊಂದು ಪಂಗಡಕ್ಕೆ ಹಿಜಾಬ್ ಧರಿಸಿ ಎಂದು ಹೇಳುವುದು ಎಷ್ಟು ಸರಿ? ಸಿದ್ದರಾಮಯ್ಯ ಹೀಗೆ ಆಡಳಿತ ಮಾಡಬಾರದು ಎಂದರು.