₹5 ಸಾವಿರ ಠೇವಣಿ ನೀಡದ ಬ್ಯಾಂಕಿಗೆ ದಂಡ

| Published : Dec 19 2023, 01:45 AM IST

ಸಾರಾಂಶ

ಠೇವಣಿ ಇಟ್ಟಿದ್ದ ಹಣ ಅವಧಿ ಮುಗಿದರೂ ಮರಳಿಸದ ಬ್ಯಾಂಕ್‌ಗೆ ಠೇವಣಿ ಹಣ, ದಂಡ ಸೇರಿದಂತೆ ₹97 ಸಾವಿರ ನೀಡುವಂತೆ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ. ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ, ಬ್ಯಾಂಕಿನಲ್ಲಿ ಸೇವಾ ನ್ಯೂನ್ಯತೆ ಆಗಿದೆ ಎಂದು ಅಭಿಪ್ರಾಯಪಟ್ಟು ದಂಡ ವಿಧಿಸಿ ಆದೇಶಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಧಾರವಾಡ

ಠೇವಣಿ ಇಟ್ಟಿದ್ದ ಹಣ ಅವಧಿ ಮುಗಿದರೂ ಮರಳಿಸದ ಬ್ಯಾಂಕ್‌ಗೆ ಠೇವಣಿ ಹಣ, ದಂಡ ಸೇರಿದಂತೆ ₹97 ಸಾವಿರ ನೀಡುವಂತೆ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪೂರ ತಾಲೂಕಿನ ಹೊಸಳ್ಳಿ ಗ್ರಾಮದ ಮಂಜುನಾಥ ಕಾಂಬಳೆ ಎಂಬುವವರು ಆಗಿನ ದೇನಾ ಬ್ಯಾಂಕ್‌ನಲ್ಲಿ 1999ರ ಮಾರ್ಚ್‌ 3ರಂದು ₹5 ಸಾವಿರ ಖಾಯಂ ಠೇವಣಿ ಇಟ್ಟಿದ್ದರು. ಅದು 2010ರ ಮಾರ್ಚ್‌ 26ಕ್ಕೆ ಅವಧಿ ಮುಗಿದಿತ್ತು. ಈ ನಡುವೆ ಬ್ಯಾಂಕ್‌ ಆಫ್‌ ಬರೋಡಾದಲ್ಲಿ ದೇನಾ ಬ್ಯಾಂಕ್‌ ವಿಲೀನವಾಗಿತ್ತು. ಠೇವಣಿಗೆ ಶೇ. 10.5ರಷ್ಟು ಬಡ್ಡಿ ವಿಧಿಸಿ ನೀಡಬೇಕಿತ್ತು. ಮುಕ್ತಾಯದ ಮೌಲ್ಯವೂ ₹15635 ಆಗಿತ್ತು. 2010ರಲ್ಲಿ ಅವಧಿ ಮುಗಿದರೂ ನಂತರ ಆ ಹಣವನ್ನು ಮಾತ್ರ ಬ್ಯಾಂಕ್‌ ಆಫ್‌ ಬರೋಡಾ ನೀಡಿರಲಿಲ್ಲ.

ಹೀಗಾಗಿ 2023ರ ಮೇ 16ರಂದು ಗ್ರಾಹಕರ ರಕ್ಷಣಾ ಕಾಯ್ದೆಯಡಿ ಸೇವಾ ನ್ಯೂನ್ಯತೆಯಾಗಿದೆ ಎಂದು ಆರೋಪಿಸಿ ಗ್ರಾಹಕ ಆಯೋಗಕ್ಕೆ ಠೇವಣಿದಾರ ದೂರು ಸಲ್ಲಿಸಿದ್ದರು. ಈ ದೂರನ್ನು ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ, ಬ್ಯಾಂಕಿನಲ್ಲಿ ಸೇವಾ ನ್ಯೂನ್ಯತೆ ಆಗಿದೆ ಎಂದು ಅಭಿಪ್ರಾಯಪಟ್ಟರು.

ದೂರುದಾರರ ಠೇವಣಿ ಹಣ ₹15635, ಅದರ ಮೇಲೆ 2023ರ ನವೆಂಬರ್‌ 30ರ ವರೆಗಿನ ಬಡ್ಡಿ ಹಣ ₹22299 ಸೇರಿ ₹37934 ತೀರ್ಪು ನೀಡಿದ ಒಂದು ತಿಂಗಳೊಳಗೆ ನೀಡಬೇಕು. ಬ್ಯಾಂಕಿನ ನಿರ್ಲಕ್ಷ್ಯ ಧೋರಣೆ ಮತ್ತು ಅದರಿಂದ ದೂರುದಾರರಿಗೆ ಆಗಿರುವ ತೊಂದರೆಗೆ ₹50 ಸಾವಿರ ಪರಿಹಾರ ಹಾಗೂ ₹10 ಸಾವಿರ ಪ್ರಕರಣದ ವೆಚ್ಚ ಸೇರಿ ಒಟ್ಟು ₹97934 ನೀಡಬೇಕೆಂದು ಬ್ಯಾಂಕ್‌ ಆಫ್‌ ಬರೋಡಾದ ಧಾರವಾಡ ಶಾಖೆಗೆ ಆದೇಶಿಸಿದೆ.