ಸಾರಾಂಶ
೩೦ರ ಪ್ರತಿಭಟನೆ ರಾಜಕೀಯ ಪ್ರೇರಿತ । ಎಸ್‌ಐಟಿ ತನಿಖೆ ಮೇಲೆ ಅನುಮಾನ
ಕನ್ನಡಪ್ರಭ ವಾರ್ತೆ ಹಾಸನರಾಜ್ಯದ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ರಕ್ಷಣೆ ಮಾಡುತ್ತಿದ್ದು, ಪೆನ್‌ಡ್ರೈವ್ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಕಾರ್ತಿಕ್ ಅನ್ನು ತಮ್ಮ ಬಳಿಯೇ ಇಟ್ಟುಕೊಂಡು ಬೇರೆ ರೀತಿ ಆರೋಪ ಮಾಡಿಸಲು ಹುನ್ನಾರ ನಡೆಸುತ್ತಿದ್ದಾರೆ ಎನ್ನುವ ಅನುಮಾನ ಇದ್ದು, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಒತ್ತಾಯಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ‘ಮೇ ೩೦ ರಂದು ನಡೆಸುತ್ತಿರುವ ಪ್ರಗತಿಪರ ಸಂಘಟನೆಗಳ ಹೆಸರಿನ ಹೋರಾಟ ರಾಜಕೀಯ ಪ್ರೇರಿತವಾಗಿದೆ. ದೇವರಾಜೇಗೌಡರ ಸಿಡಿ ಬಿಡುಗಡೆ ಮಾಡಿ ಅವರು ಕೂಡ ಹೇಳಿಕೆ ಕೊಟಿದ್ದು, ಡಿ.ಕೆ.ಶಿವಕುಮಾರ್ ಮೇಲೆ ನೇರವಾಗಿ ಆರೋಪ ಮಾಡುತ್ತಾರೆ. ಈತನ ಸದ್ದನ್ನು ಅಡಗಿಸಲು ಬೇರೆ ಬೇರೆ ಕೇಸುಗಳನ್ನು ಅವರ ಮೇಲೆ ಹಾಕಿ ಅವರನ್ನು ಜೈಲಿಗೆ ಕಳುಹಿಸಿದ್ದಾರೆ. ಇವೆಲ್ಲಾ ಗಮನಿಸಿದರೇ ಎಸ್‌ಐಟಿ ಮೇಲೆ ಅನುಮಾನ ಮೂಡಿದೆ’ ಎಂದು ಶಂಕೆ ವ್ಯಕ್ತಪಡಿಸಿದರು.‘ಕರ್ನಾಟಕದ ಪೊಲೀಸ್ ಬಗ್ಗೆ ನಮಗೆ ಗೌರವವಿದೆ. ಎಸ್‌ಐಟಿ, ಪೊಲೀಸ್ ಇಲಾಖೆಗಳು ಸಿಎಂ, ಡಿಸಿಎಂ ಕೈಕೆಳಗೆ ಇದೆ. ಉಪ ಮುಖ್ಯಮಂತ್ರಿ ಅವರಡಿ ಈ ಸಂಸ್ಥೆ ಬರುವುದರಿಂದ ನ್ಯಾಯ ಸಿಗುವುದಿಲ್ಲ. ಸರಿಯಾಗಿ ತನಿಖೆ ಆಗುವುದಿಲ್ಲ. ಮೊಬೈಲ್‌ನಿಂದ ವಿಡಿಯೋ, ಪೋಟೋ ಕದ್ದಿರುವ ಕಾರ್ತಿಕ್‌ಗೌಡನನ್ನು ಇದುವರೆಗೂ ಬಂಧಿಸಿಲ್ಲ. ಇದರಿಂದ ಎಸ್‌ಐಟಿ ಮೇಲೆ ಅನುಮಾನ ಮೂಡುತ್ತಿದೆ. ಪೊಲೀಸ್‌ಗೆ ಸಿಗದ ವೀರಪ್ಪನ್, ನಕ್ಕೀರನ್ ಪತ್ರಿಕೆಯ ಪತ್ರಕರ್ತರೊಬ್ಬರಿಗೆ ಮಾತ್ರ ಸಿಗುತ್ತಿದ್ದರು. ಅದೇ ರೀತಿ ಕಾರ್ತಿಕ್ ಒಂದು ಮಾಧ್ಯಮಕ್ಕೆ ಮಾತ್ರ ಸಿಗುತ್ತಾರೆ. ಎಸ್‌ಐಟಿಗೆ ಮಾತ್ರ ಸಿಗಲ್ಲ’ ಎಂದು ಲೇವಡಿ ಮಾಡಿದರು.
‘ದೇವರಾಜೇಗೌಡರು ಡಿ.ಕೆ. ಶಿವಕುಮಾರ್ ಮೇಲೆ ಆರೋಪ ಮಾಡಿದರು. ಆಡಿಯೋಗಳನ್ನು ಬಿಡುಗಡೆ ಮಾಡಿದರು. ಈ ಕಾರಣಕ್ಕಾಗಿ ದೇವರಾಜೇಗೌಡರ ಧ್ವನಿಯನ್ನು ಅಡಗಿಸಿಲು ಇಲ್ಲಸಲ್ಲದ ಕೇಸ್‌ಗಳನ್ನು ಹಾಕಿಸಿ ಜೈಲಿಗೆ ಕಳುಹಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸೇಫ್ ಮಾಡುತ್ತಿದ್ದಾರೆ. ಗೃಹಮಂತ್ರಿ ಇದರ ಬಗ್ಗೆ ಚಕಾರ ಎತ್ತಲ್ಲ. ಎಸ್‌ಐಟಿ ಅವರ ಕಂಟ್ರೋಲ್‌ನಲ್ಲಿ ಇದೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಈ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಹೆಸರು ಕೇಳಿ ಬಂದಿದ್ದು ಕೂಡಲೇ ಅವರ ರಾಜೀನಾಮೆ ಪಡೆಯಬೇಕು. ಅವರ ಮೇಲೆಯೂ ಎಸ್‌ಐಟಿ ತನಿಖೆ ನಡೆಸಲಿ’ ಎಂದು ಆಗ್ರಹಿಸಿದರು.‘ಇನ್ನು ನ್ಯಾಯಾಲಯದಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರಿಗೆ ಎರಡು ಪ್ರಕರಣಗಳಲ್ಲಿ ಜಾಮೀನು ಸಿಕ್ಕಿರುವುದು ಪಕ್ಷದ ಕಾರ್ಯಕರ್ತರಿಗೆ ಮತ್ತು ಅಭಿಮಾನಿಗಳಿಗೆ ಸಮಾಧಾನ ತಂದಿದೆ. ಆದರೆ ಈ ಕೇಸ್‌ಗಳಿಂದ ರೇವಣ್ಣ ಅವರು ಕ್ಲೀನ್‌ಚಿಟ್ ಸಿಕ್ಕಿದಾಗ ಹಾಗೂ ಮುಕ್ತರಾಗಿ ಬಂದ ನಂತರ ಖುಷಿ ಆಗುತ್ತದೆ. ನಮಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಪ್ರಗತಿಪರ ಹೆಸರಿನಲ್ಲಿ ಮೇ ೩೦ ರಂದು ಹಾಸನಕ್ಕೆ ಮುತ್ತಿಗೆ ಎಂದು ಗಮನಿಸಿದ್ದೇವೆ. ಮಾತನಾಡುವ, ಪ್ರತಿಭಟಿಸುವ ಸ್ವಾತಂತ್ರ್ಯವಿದೆ. ನಮ್ಮ ಪಕ್ಷವು ಅಂಬೇಡ್ಕರ್ ಸಂವಿಧಾನದ ಬಗೆ ನಂಬಿಕೆ ಇಟ್ಟುಕೊಂಡಿರುವ ಪಕ್ಷವಾಗಿದೆ. ಆದರೆ ಪಜ್ವಲ್ ಬಗ್ಗೆ ಏನಾದರೂ ಮಾತನಾಡಲಿ, ಸುಮ್ಮನೆ, ದೇವೇಗೌಡರನ್ನಾಗಲಿ, ಕುಮಾರಣ್ಣರನ್ನಾಗಲಿ, ರೇವಣ್ಣನರನ್ನಾಗಲಿ ಅಪವಾದ, ಆಪಾಧನೆ ಮಾಡಿದರೆ ನಾವು ಸಹಿಸುವುದಿಲ್ಲ’ ಎಂದು ಕಿಡಿಕಾರಿದರು.ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು, ನಿರ್ದೇಶಕ ಬಿದರಿಕೆರೆ ಜಯರಾಮ್, ನಗರಸಭೆ ಸದಸ್ಯ ಕ್ರಾಂತಿ ಪ್ರಸಾದ್ ತ್ಯಾಗಿ, ಜಿಲ್ಲಾ ಮಾಧ್ಯಮ ವಕ್ತಾರ ಹೊಂಗೆರೆ ರಘು, ವಕೀಲ ಶೇಷಾದ್ರಿ ಇದ್ದರು.