ಹಾಲಿನ ದರವನ್ನು ಲೀಟರ್‌ಗೆ ಎಂಟು ರು. ಏರಿಕೆ ಮಾಡಿರುವುದು ಜನವಿರೋಧಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಏಕಾಏಕಿ ಹಾಲಿನ ದರವನ್ನು ಹೆಚ್ಚಿಸಿದೆ.

ಬೆಂಗಳೂರು : ಹಾಲಿನ ದರವನ್ನು ಲೀಟರ್‌ಗೆ ಎಂಟು ರು. ಏರಿಕೆ ಮಾಡಿರುವುದು ಜನವಿರೋಧಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಏಕಾಏಕಿ ಹಾಲಿನ ದರವನ್ನು ಹೆಚ್ಚಿಸಿದೆ.

ಈ ಹಿಂದೆ ಮೂರು ಸಲ ಹಾಲಿನ ದರ ಏರಿಕೆ

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಹಿಂದೆ ಮೂರು ಸಲ ಹಾಲಿನ ದರ ಏರಿಕೆ ಮಾಡಲಾಗಿದೆ ಎಂದರು. ಆದರೆ, ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಹಾಲಿನ ಸಬ್ಸಿಡಿಯನ್ನು ₹5ರಿಂದ ₹7ಕ್ಕೆ ಹೆಚ್ಚಿಸುವುದಾಗಿ, ಪಶುಭಾಗ್ಯ ಯೋಜನೆಯಡಿ ಹಸು ಮತ್ತು ಎಮ್ಮೆ ಖರೀದಿಗೆ ₹3 ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವುದಾಗಿ, ಕ್ಷೀರ ಕ್ರಾಂತಿ ಹಾಗೂ ಕ್ಷೀರ ಕ್ರೆಡಿಟ್‌ ಕಾರ್ಡ್‌ ಯೋಜನೆ, ಪುಣ್ಯ ಕೋಟಿ ನಂದಿನಿ ನಮ್ಮದು, ಎಲ್ಲ ಕಂದಾಯ ಭಾಗದಲ್ಲಿ ಪಾಲಿಟೆಕ್ನಿಕ್ ಸ್ಥಾಪನೆ ಜಾರಿಗೊಳಿಸುವುದಾಗಿ ಭರವಸೆ ನೀಡಿತ್ತು. ಇವುಗಳಲ್ಲಿ ಎಷ್ಟು ಭರವಸೆಗಳನ್ನು ಈಡೇರಿಸಲಾಗಿದೆ ಖಾರವಾಗಿ ಪ್ರಶ್ನಿಸಿದರು.

ರೈತರಿಗೆ ನೀಡಬೇಕಾದ ಪ್ರೋತ್ಸಾಹಧನವನ್ನು ನೀಡದೆ, ಅದರ ಹೊರೆಯನ್ನು ನೇರವಾಗಿ ಗ್ರಾಹಕರ ಮೇಲೆ ಹಾಕಲಾಗುತ್ತಿದೆ. ಹಾಲಿನ ದರ ಏರಿಕೆಯಿಂದ ಮೊಸರು, ತುಪ್ಪ, ಕಾಫಿ, ಟೀ ಸೇರಿದಂತೆ ಹಾಲಿನ ಉತ್ಪನ್ನಗಳ ಬೆಲೆಯೂ ಹೆಚ್ಚಾಗಲಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ತೀವ್ರ ಹೊರೆ ಬೀಳಲಿದೆ. ತಮಿಳುನಾಡಿನಲ್ಲಿ ಹಾಲಿನ ದರ ಪ್ರತಿ ಲೀಟರ್‌ಗೆ ₹41 ಇದ್ದರೂ, ಅಲ್ಲಿನ ಸರ್ಕಾರ ರೈತರಿಗೆ 4 ರೂ. ಪ್ರೋತ್ಸಾಹಧನ ನೀಡುತ್ತಿದೆ.

ಜನಸಾಮಾನ್ಯರ ಮೇಲೆ ಹೊರೆ ಹಾಕದೆ ರೈತರ ಹಿತ ಕಾಯುವ ಕ್ರಮ ಕೈಗೊಂಡಿದೆ. ಕರ್ನಾಟಕ ಸರ್ಕಾರವೂ ರೈತರಿಗೆ ನೀಡಬೇಕಾದ ಸಬ್ಸಿಡಿಯನ್ನು ನೀಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.ಕಾಂಗ್ರೆಸ್‌ ಸರ್ಕಾರ ಒಂದೆಡೆ ಗ್ಯಾರಂಟಿಗಳ ಹೆಸರಿನಲ್ಲಿ ಪ್ರಚಾರ ಮಾಡುತ್ತಿದ್ದು, ಮತ್ತೊಂದೆಡೆ ತೆರಿಗೆ ಮತ್ತು ಬೆಲೆ ಏರಿಕೆಯ ಮೂಲಕ ಜನರನ್ನು ಶೋಷಿಸುತ್ತಿದೆ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ಒಂದು ಸುತ್ತಿನ ಬೆಲೆ ಏರಿಕೆಯಾಗಿದ್ದರೆ, ಈಗ ಡಿ.ಕೆ.ಶಿವಕುಮಾರ್‌ ಅವರ ಅವಧಿಯಲ್ಲಿ ಮತ್ತೊಂದು ಸುತ್ತಿನ ಬೆಲೆ ಏರಿಕೆ ನಡೆಯುತ್ತಿದೆ.

ಹಾಲಿನ ದರವನ್ನು ₹8 ಹೆಚ್ಚಿಸಿರುವುದು ಜನವಿರೋಧಿ

ಹಾಲಿನ ದರವನ್ನು ₹8 ಹೆಚ್ಚಿಸಿರುವುದು ಜನವಿರೋಧಿ ನಿರ್ಧಾರ. ಇಂತಹ ಜನವಿರೋಧಿ ನೀತಿಗಳ ಪರಿಣಾಮವಾಗಿಯೇ ವಿಧಾನಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಲ್ಕೂ ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದೆ. ಇದೇ ಧೋರಣೆ ಮುಂದುವರಿದರೆ 2028ರ ಚುನಾವಣೆಯಲ್ಲೂ ಜನರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅಶೋಕ್‌ ಎಚ್ಚರಿಸಿದರು.