ಕನ್ನಡಪ್ರಭ ವಾರ್ತೆ ದಾವಣಗೆರೆ

ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನತೆ ಮೆಚ್ಚಿದ್ದಾರೆ. ಬಿಜೆಪಿ ಏನೇ ಹೇಳಿದರೂ ಜನ ನಮ್ಮ ಗ್ಯಾರಂಟಿ ಯೋಜನೆಗಳನ್ನು ಮೆಚ್ಚಿಕೊಂಡಿದ್ದಾರೆ. ಗ್ಯಾರಂಟಿಗೆ ಓಟು ಹಾಕುತ್ತಾರೆ. ನಮ್ಮ ಕಾನ್ಫಿಂಡೆನ್ಸ್ ಇಂಪ್ರೂವ್ ಆಗಿದ್ದು, ನೂರಕ್ಕೆ ನೂರು ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದಾವಣಗೆರೆಯಲ್ಲಿ ಸೋಮವಾರ ಕಾಂಗ್ರೆಸ್‌ ಅಭ್ಯರ್ಥಿ ಸಮರ್ಥ ಪರ ಬೃಹತ್ ಪ್ರಚಾರ ನಡೆಸಿದ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು. ಬಡವರ ಗ್ಯಾರಂಟಿಗಳನ್ನು ಬಿಜೆಪಿ ವಿರೋಧಿಸುತ್ತಿದೆ. ಹೀಗೆ ಬಡವರ ವಿರೋಧಿ, ರೈತವಿರೋಧಿ, ಸಂವಿಧಾನ ವಿರೋಧಿ ಆಗಿರುವ ಬಿಜೆಪಿಯನ್ನು ಬೆಂಬಲಿಸಲು ಜನರಿಗೆ ಯಾವುದೇ ಕಾರಣ ಇಲ್ಲ. ಬಿಜೆಪಿಯವರು ನಾವು ಸೋಲುತ್ತೇವೆ ಅಂತಾ ಹೇಳುತ್ತಾರೆ. ಆದರೆ, ನೂರಕ್ಕೆ ನೂರು ಎರಡೂ ಕಡೆ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮಗೆ ಗ್ಯಾರಂಟಿ ಇದೆ. ಬಿಜೆಪಿಯವರಿಗೆ ಏನಿವೆ?. ಯಾವ ಆಧಾರದಲ್ಲಿ ಮತದಾರರ ಬಳಿ ಹೋಗಿ ಅವರು ಓಟು ಕೇಳುತ್ತಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಏನು ಮಾಡಿದ್ದಾರೆ?. ನಾವು ಬಡವರ ಪರವಿರುವ ಪಕ್ಷದವರು. ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಪಕ್ಷ ನಮ್ಮದು. ಆದರೆ, ಬಿಜೆಪಿಯವರು ಸಮಾಜ, ಜಾತಿ ಹೆಸರಿನಲ್ಲಿ ಸಮಾಜ ಒಡೆಯುವ ಪಕ್ಷದವರು. ನಾವು ಎಲ್ಲ ಅಹಿಂದ, ಮಧ್ಯಮ ವರ್ಗ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವವರು ಎಂದು ಪ್ರತಿಪಾದಿಸಿದರು.

ನಾವು ಮಾಡಿದ ಜನಪರ ಕೆಲಸಗಳ, ಅಭಿವೃದ್ದಿ ಕೆಲಸಗಳ ಆಧಾರದಲ್ಲಿ ಮತ ಕೇಳುತ್ತಿದ್ದೇವೆ. ಆದರೆ, ನನಗೆ ವೈಯಕ್ತಿಕವಾಗಿ ಬೈದು ಮತ ಕೇಳುವ ದಾರಿದ್ರ್ಯ ಬಿಜೆಪಿಗೆ ಬಂದಿದೆ ಎಂದು ಅವರು ಟೀಕಿಸಿದರು.


ಒಂಬತ್ತು ವರ್ಷ ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಅಭಿವೃದ್ಧಿ ಮಾಡಲಿಲ್ಲ. ಹೀಗಾಗಿ, ತಾವು ಮಾಡಿದ ಕೆಲಸಗಳ ಆಧಾರದಲ್ಲಿ ಮತ ಕೇಳಲು ಸಾಧ್ಯವಾಗದೆ ನನಗೆ ಬಯ್ಯುತ್ತಾ ಮತ ಕೇಳುತ್ತಿದ್ದಾರೆ. ನಾನು ದುರ್ಬಲರ, ಬಡವರ ಪರವಾಗಿ ಕಾರ್ಯಕ್ರಮ ರೂಪಿಸಿ ಜಾರಿ ಮಾಡಿದ್ದೇನೆ ಎನ್ನುವ ಕಾರಣದಿಂದಲೇ ನನ್ನನ್ನು ಬೈಯ್ದು ಓಟು ಕೇಳುತ್ತಿದ್ದಾರೆ ಎಂದರು.ಕಾಂಗ್ರೆಸ್ ಎಲ್ಲಾ ಜಾತಿ, ಧರ್ಮದವರನ್ನೂ ಜೊತೆಗೆ ಕೊಂಡೊಯ್ಯುವ ಪಕ್ಷ. ಜಾತಿ-ಜಾತಿಗಳ ನಡುವೆ, ಧರ್ಮ-ಧರ್ಮಗಳ ನಡುವೆ ವೈಷಮ್ಯ ಹುಟ್ಟಿಸಿ, ಓಟು ಕೇಳುವ ಕೆಟ್ಟ ರಾಜಕಾರಣವನ್ನು ನಾವು ಮಾಡುವುದಿಲ್ಲ. ಕೋಮು ಗಲಭೆಗಳನ್ನು ಸಂಘಟಿಸಿ ರಾಜಕಾರಣ ಮಾಡುವುದು ಬಿಜೆಪಿಯ ಜಾಯಮಾನ ಎಂದು ಟೀಕಿಸಿದರು.

ನಮ್ಮ ಗ್ಯಾರಂಟಿಗಳ ಫಲವನ್ನು ಎಲ್ಲಾ ಪಕ್ಷದವರೂ, ಎಲ್ಲಾ ಜಾತಿ, ಎಲ್ಲಾ ಧರ್ಮದವರೂ ಪಡೆಯುತ್ತಿದ್ದಾರೆ. ಆದ್ದರಿಂದ ನಮ್ಮದು ‘ಸರ್ವ ಜನಾಂಗದ ಶಾಂತಿಯ ತೋಟ’. ಕಾಂಗ್ರೆಸ್ ಮಹಾತ್ಮಗಾಂಧಿ, ಅಂಬೇಡ್ಕರ್, ಬಸವಣ್ಣನವರ ಆಶಯದ ಹಾದಿಯಲ್ಲಿ ನಡೆದರೆ, ಬಿಜೆಪಿ ಗೋಡ್ಸೆ, ಮನುವಾದಿಗಳ ಮಾತಿನಂತೆ ನಡೆಯುತ್ತದೆ ಎಂದು ಅವರು ಕುಟುಕಿದರು.

ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ಅವರು 25 ಸಾವಿರ ಕೋಟಿ ಹಣ ಲೂಟಿ ಮಾಡಿರುವ ಭ್ರಷ್ಟರು ಎಂದು ಬಿಜೆಪಿಯವರೇ ಆಗಿದ್ದ ಬಸವನಗೌಡ ಪಾಟೀಲ್ ಯತ್ನಾಳ್ ಅವರು ನೇರವಾಗಿ ಆರೋಪಿಸಿದ್ದಾರೆ. ಈಗ ಈ ಯಡಿಯೂರಪ್ಪ ಮತ್ತು ವಿಜಯೇಂದ್ರ ನಾಚಿಕೆ ಬಿಟ್ಟು ನನ್ನ ಬಗ್ಗೆ ಆರೋಪ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.ನಾವು ನುಡಿದಂತೆ ನಡೆದು‌, ಕೊಟ್ಟ ಭರವಸೆಗಳನ್ನು ಈಡೇರಿಸಿ ನಿಮ್ಮ ಮುಂದೆ ನಿಂತಿದ್ದೇವೆ. ಕೆಲಸ ಮಾಡಿ ಬಂದು ನಿಮ್ಮಿಂದ ಅಭಿವೃದ್ಧಿ ಪರವಾಗಿ ಮತ ಕೇಳುತ್ತಿದ್ದೇವೆ. ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಈ ಕಾರಣದಿಂದ ನಮ್ಮ ಕೆಲಸಕ್ಕೆ ಕೈ ಹಿಡಿದು ಸಹಕರಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.