ಸಾರಾಂಶ
ನೂತನ ಪಡಿತರ ಚೀಟಿ, ಸೇರ್ಪಡೆ ಹಾಗೂ ಮಾಹಿತಿ ತಿದ್ದುಪಡಿಗೆ ನೀಡಿರುವ ಅವಕಾಶ ಕೇವಲ ಎರಡು ದಿನ ಮಾತ್ರ. ಈಗಾಗಲೇ ಒಂದು ದಿನ ಕಳೆದು ಹೋಗಿದೆ. ಒಂದು ದಿನವಷ್ಟೇ ಬಾಕಿ ಇದೆ.
ಸುಂಟಿಕೊಪ್ಪ : ಸರ್ಕಾರ ಪಡಿತರ ಚೀಟಿಯನ್ನು ಹೊಸದಾಗಿ ಪಡೆಯುವ ಮತ್ತು ಅದರಲ್ಲಿ ತಿದ್ದುಪಡಿ, ಸೇರ್ಪಡೆಗಳಿಗೆ ಕೇವಲ 2 ದಿನಗಳ ಅವಕಾಶ ನೀಡಿದ್ದು, ಸೂಕ್ತ ವ್ಯವಸ್ಥೆ ಇಲ್ಲದೆ ಜನತೆ ಪರದಾಡುವಂತಾಗಿದೆ.
ಸರ್ಕಾರದ ಒಂದು ಕೈಯಲ್ಲಿ ನೀಡಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವ ನೀತಿಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಈ ವ್ಯವಸ್ಥೆಗೆ ಜನತೆ ಹಿಡಿಶಾಪ ಹಾಕುತ್ತಿದೆ.
ನೂತನ ಪಡಿತರ ಚೀಟಿ, ಸೇರ್ಪಡೆ ಹಾಗೂ ಮಾಹಿತಿ ತಿದ್ದುಪಡಿಗೆ ನೀಡಿರುವ ಅವಕಾಶ ಕೇವಲ ಎರಡು ದಿನ ಮಾತ್ರ. ಈಗಾಗಲೇ ಒಂದು ದಿನ ಕಳೆದು ಹೋಗಿದೆ. ಒಂದು ದಿನವಷ್ಟೇ ಬಾಕಿ ಇದೆ. ಅದೂ ಲೆಕ್ಕಕ್ಕೆ ಎರಡು ದಿನವಾದರೂ ಸಮಯಾವಕಾಶ ನೀಡಿರುವುದು ದಿನಕ್ಕೆ ಕೇವಲ 2 ಗಂಟೆಗಳು ಮಾತ್ರ.
ಹೊಸ ಕಾರ್ಡ್ ಪಡೆಯಲು, ತಪ್ಪಾಗಿರುವುದನ್ನು ಸರಿಪಡಿಸಲು ಮತ್ತು ಕಾರ್ಡಿಗೆ ಸದಸ್ಯರ ಸೇರ್ಪಡೆ ಮಾಡಲು ಹಲವು ತಿಂಗಳುಗಳಿಂದ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ಗ್ರಾಹಕರು ಒಮ್ಮೆಯೇ ಗ್ರಾಮ ಒನ್ ಕೇಂದ್ರಗಳು ಹಾಗೂ ಸೈಬರ್ ಸೆಂಟರ್ ಗಳ ಬಳಿ ಮುಗಿಬಿದ್ದರು. ಆದರೆ ಸರ್ವರ್ ಸಮಸ್ಯೆಯಿಂದ ಸಾಲುಗಟ್ಟಿ, ಕಾದು ನಿಂತಿದ್ದವರ ಪೈಕಿ ಒಂದಿಬ್ಬರು ಹೊರತು ಪಡಿಸಿ, ಉಳಿದ ಎಲ್ಲರೂ ಕೆಲಸ ಆಗದೇ ಮರಳಬೇಕಾಯಿತು. ಬೆಳಗ್ಗಿನಿಂದ ಪುಟ್ಟ ಕಂದಮ್ಮಗಳೊಂದಿಗೆ ಬಂದವರು ಮಧ್ಯಾಹ್ನವಾದರೂ ಮಳೆಯ ನಡುವೆಯೇ ಕಾಯಬೇಕಾಯಿತು.
ಸರ್ವರ್ ಸಮಸ್ಯೆಗೆ ಹಿಡಿಶಾಪ:
ಗ್ರಾಹಕರ ಸಂಖ್ಯೆ ಹೆಚ್ಚಿದ್ದರೂ, ಕಡಿಮೆ ಸಮಯ ನೀಡಿರುವುದು ಸರಿಯಲ್ಲ. ಈ ನಡುವೆ ಸರ್ವರ್ ಸಮಸ್ಯೆ ಮಾಮೂಲಿ ಇದೆ ಎಂದು ಸಾಲುಗಟ್ಟಿದ್ದ ಅದರಲ್ಲೂ ವಿಶೇಷವಾಗಿ ಮಹಿಳೆಯರು ತೀವ್ರ ಆಕ್ರೋಶ ಹೊರ ಹಾಕಿದರು. ಕೆಲವು ಕಡೆ ಹೊಸ ರೇಷನ್ ಕಾರ್ಡ್ ಆಸೆಯಿಂದ ಹಾಗೂ ತಿದ್ದುಪಡಿ ಮಾಡಿಸಿಕೊಳ್ಳಲು ಗ್ರಾಹಕರ ಸಾಲೇ ನೆರೆದಿತ್ತು.
ಕೊಡಗಿನಲ್ಲಿ ಮಳೆಗಾಲ ಪ್ರಾರಂಭವಾಗಿದ್ದು ವಿದ್ಯುತ್ ಕಣ್ಣಾಮುಚ್ಚಾಲೆ ಆರಂಭವಾಗಿದೆ. ಹಳ್ಳಿ ಮತ್ತು ಗುಡ್ಡ ಪ್ರದೇಶ ವಿದ್ಯುತ್ ಕೈಕೊಟ್ಟರೆ ಪರ್ಯಾಯ ವ್ಯವಸ್ಥೆ ಇಲ್ಲದೆ ಗುಡ್ಡಗಾಡು ಪ್ರದೇಶದ ಜನತೆ ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ರೇಷನ್ ಕಾರ್ಡ್ ಸರಿಪಡಿಸುವ ನಿಟ್ಟಿನಲ್ಲಿ ಪಟ್ಟಣಕ್ಕೆ ಮುಗಿಬಿದ್ದ ಜನತೆ ಸರ್ವರ್ ಕೈಕೊಟ್ಟ ಹಿನ್ನಲೆಯಲ್ಲಿ ಬಂದ ದಾರಿಗೆ ಸುಂಕವಿಲ್ಲವೆಂದು ಹಿಡಿಶಾಪ ಹಾಕಿಕೊಂಡು ಹಿಂತಿರುಗಿದ್ದಾರೆ.
ಸರ್ಕಾರದ ಯಾವುದೇ ರೀತಿಯ ಯೋಜನೆಗಳಿಗೆ ಫಲಾನುಭವಿಯಾಗಬೇಕೆಂದರೆ ಪಡಿತರ ಚೀಟಿ ಹೊಂದಿರಲೇಬೇಕು. ಕೇವಲ 2 ದಿನಗಳ ಕಾಲಾವಕಾಶವನ್ನು ನೀಡಿರುವುದು ಸರಿಯಾದ ಕ್ರಮವಲ್ಲ. ಸರ್ಕಾರವು ಪಡಿತರ ಚೀಟಿ ಹೊಂದಿಕೊಳ್ಳಲು ಗ್ರಾಮೀಣ ಪ್ರದೇಶದ ಜನತೆಗೆ ಹೆಚ್ಚಿನ ಕಾಲಾವಕಾಶ ನೀಡುವುದು ಒಳಿತು.
-ಪಿ.ಆರ್.ಸುನಿಲ್ ಕುಮಾರ್, ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷ.