ಗೋಪಾಲ ಕಾಲೋನಿ ಗ್ರಂಥಾಲಯದಲ್ಲಿ ಜ್ಞಾನದ ಔತಣ

| Published : Jul 04 2024, 01:11 AM IST

ಸಾರಾಂಶ

ತರೀಕೆರೆ, ಗ್ರಾಮ ಭಾರತ ಗಾಂಧಿ ಕಂಡ ಕನಸು, ಹಳ್ಳಿಗಳ ಪ್ರಗತಿಯೇ ದೇಶದ ಅಭಿವೃದ್ಧಿ, ಹಳ್ಳಿಗಳಲ್ಲೇ ಶಿಕ್ಷಣ, ಕೈಗಾರಿಕೆಗಳು ಸ್ಥಾಪನೆ ಯಾಗಬೇಕು, ಹಳ್ಳಿಗಳಲ್ಲೇ ಉದ್ಯೋಗ ದೊರೆಯಬೇಕು. ಆಗ ಮಾತ್ರವೇ ಹಳ್ಳಿಗಳ ಉದ್ಧಾರವಾಗುತ್ತದೆ. ದೇಶದ ಭವಿಷ್ಯ ಹಳ್ಳಿಗಳಲ್ಲಿದೆ ಎಂದು ಗಾಂಧೀಜಿ ಹೇಳಿದ್ದರು.

- ತಂದೆ ಸ್ಮರಣಾರ್ಥ ವಕೀಲರಿಂದ ಸಾರ್ವಜನಿಕ ಗ್ರಂಥಾಲಯ ಸ್ಥಾಪನೆಕನ್ನಡಪ್ರಭ ವಾರ್ತೆ, ತರೀಕೆರೆ

ಗ್ರಾಮ ಭಾರತ ಗಾಂಧಿ ಕಂಡ ಕನಸು, ಹಳ್ಳಿಗಳ ಪ್ರಗತಿಯೇ ದೇಶದ ಅಭಿವೃದ್ಧಿ, ಹಳ್ಳಿಗಳಲ್ಲೇ ಶಿಕ್ಷಣ, ಕೈಗಾರಿಕೆಗಳು ಸ್ಥಾಪನೆ ಯಾಗಬೇಕು, ಹಳ್ಳಿಗಳಲ್ಲೇ ಉದ್ಯೋಗ ದೊರೆಯಬೇಕು. ಆಗ ಮಾತ್ರವೇ ಹಳ್ಳಿಗಳ ಉದ್ಧಾರವಾಗುತ್ತದೆ. ದೇಶದ ಭವಿಷ್ಯ ಹಳ್ಳಿಗಳಲ್ಲಿದೆ ಎಂದು ಗಾಂಧೀಜಿ ಹೇಳಿದ್ದರು.ಅದರಂತೆ ತರೀಕೆರೆ ತಾಲೂಕು ಗೋಪಾಲ ಕಾಲೋನಿ ಹಳ್ಳಿಯಲ್ಲಿ ಮಹನೀಯರೊಬ್ಬರು. ಈ ಮಾತನ್ನು ಅಕ್ಷರಶಃ ಕಾರ್ಯರೂಪಕ್ಕೆ ತಂದಿದ್ದಾರೆ. ಓದುಗರಿಗಾಗಿ ಜ್ಞಾನದ ತೃಷೆ ಇಂಗಿಸಲು ಗೋಪಾಲ ಕಾಲೋನಿಯಂತಹ ಒಂದು ಚಿಕ್ಕ ಗ್ರಾಮದಲ್ಲಿ ಸಾರ್ವಜನಿಕರಿಗೆ ವಿಶಾಲವಾದ ದೊಡ್ಡ ಗ್ರಂಥಾಲಯ ಕಟ್ಟಿಸಿಕೊಟ್ಟಿದ್ದಾರೆ. ಗೋಪಾಲ ಕಾಲೋನಿ ಗ್ರಾಮದ ವಕೀಲ ಬಿ.ವಿ.ದಿನೇಶ್ ಕುಮಾರ್ ತಮ್ಮ ತಂದೆ ದಿ. ಭಾಗಸಾಲೆ ವೀರಭದ್ರಪ್ಪ ಸ್ಮರಣಾರ್ಥ ಓದುಗರಿಗೆ ಹಾಗೂ ಅಧ್ಯಯನ ಮಾಡಲಿಚ್ಚಿಸುವವರಿಗೆ ಸಾರ್ವಜನಿಕ ಗ್ರಂಥಾಲಯ ನಿರ್ಮಿಸಿ ಕೃತಾರ್ಥ ರಾಗಿದ್ದಾರೆ.ವಕೀಲ ಬಿ.ವಿ.ದಿನೇಶ ಕುಮಾರ್ ತಂದೆ ಮೂಲತಃ ಶರಾವತಿ ಮುಳುಗಡೆ ಪ್ರದೇಶದ ಸಂತ್ರಸ್ಥರ ಗ್ರಾಮವಾದ ಗೋಪಾಲ ಕಾಲೋನಿಯಲ್ಲಿ ಕೃಷಿಕ ಕುಟುಂಬದ ಬಿ.ವೀರಭದ್ರಪ್ಪ ಪುಸ್ತಕ ಓದುವ ಮತ್ತು ಅಧ್ಯಯನ ಆಶಯ ಹೊಂದಿದವರು, ಅವರ ಮಹತ್ವಾಕಾಂಕ್ಷೆಯಂತೆ ಗ್ರಾಮೀಣ ಭಾಗದವರಿಗೆ, ಓದುಗರು ಮತ್ತು ಅಧ್ಯಯನ ಮಾಡಲಿಚ್ಚಿಸುವವರಿಗೆ ತಮ್ಮ ಮನೆ ಬಾಗಿಲಲ್ಲೇ, ತಮ್ಮ ಹಳ್ಳಿಯಲ್ಲೇ ನಿಯತಕಾಲಿಕೆಗಳು, ದಿನಪತ್ರಿಕೆಗಳು, ಕಥೆ ಕಾದಂಬರಿ, ಖ್ಯಾತ ಪ್ರಖ್ಯಾತ ಲೇಖಕರ ಪುಸ್ತಕಗಳು, ಗ್ರಂಥ ಕಾವ್ಯ ಪುಸ್ತಕಗಳು ಹಳ್ಳಿಗಳಲ್ಲೇ ದೊರೆಯಬೇಕು, ಅವುಗಳನ್ನು ನಮ್ಮ ಗ್ರಾಮೀಣ ಪ್ರದೇಶದ ಯುವ ಸಮೂಹ ದಿನನಿತ್ಯ ಓದಬೇಕು. ಪುಸ್ತಕಗಳನ್ನು ಅರ್ಥಮಾಡಿಕೊಂಡು ಜ್ಞಾನಪಡೆಯಬೇಕು ಎಂಬ ತಮ್ಮ ತಂದೆಯವರ ಮಹದಾಸೆಯನ್ನು ವಕೀಲ ದಿನೇಶ್ ಕುಮಾರ್ ಕಾರ್ಯಗತಗೊಳಿಸಿದ್ದಾರೆ.ದಾನಿಗಳ ಕೊಡುಗೆಃ ಗೋಪಾಲ ಗ್ರಾಪಂ ಉದಾರವಾಗಿ ನೀಡಿರುವ ನಿವೇಶನದಲ್ಲಿ ನಿರ್ಮಿಸಿರುವ ಗ್ರಂಥಾಲಯ ಕಟ್ಟಡದಲ್ಲಿ ದಿನನಿತ್ಯದ ಪತ್ರಿಕೆಗಳ ಜೊತೆಗೆ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ ಅನೇಕ ಪುಸ್ತಕಗಳು, ನಾಡಿನ ಪ್ರಖ್ಯಾತ ಲೇಖಕರು ನೀಡಿರುವ ಪುಸ್ತಕಗಳು, ಅಲ್ಲದೇ ದಾನಿಗಳು ಪುಸ್ತಕಗಳ ಖರೀದಿಗೆ ಉದಾರವಾಗಿ ನೆರವು ನೀಡಿದ್ದಾರೆ ಎಂದು ಬಿ.ವಿ.ದಿನೇಶ್ ಕುಮಾರ್ ತಿಳಿಸಿದ್ದು, ಈ ಗ್ರಂಥಾಲಯವನ್ನು ಗೋಪಾಲ ಗ್ರಾಪಂಗೆ ಹಸ್ತಾಂತರಗೊಳಿಸಲಾಗುವುದು ಎಂದು ತಿಳಿಸಿದ್ದು ಗೋಪಾಲ ಕಾಲೋನಿ ಗ್ರಾಮದ ಓದುಗರಿಗಾಗಿ ತಂದೆಯವರ ಹೆಸರಿನಲ್ಲಿ ನಿರ್ಮಿಸಿರುವ ಈ ಗ್ರಂಥಾಲಯ ಎಲ್ಲರಿಗೂ ಉಪಯೋಗವಾಗಲಿ ಎಂಬ ಆಶಯ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.ಶಾಸಕ ಜಿ.ಎಚ್.ಶ್ರೀನಿವಾಸ್, ಗ್ರಾಪಂ ಅಧ್ಯಕ್ಷ ದರ್ಶನ್, ಗ್ರಾಪಂ ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಗೋಪಾಲ ಕಾಲೋನಿ ಬಾಗಸಾಲೆ ವೀರಭದ್ರಪ್ಪ ಸ್ಮರಣಾರ್ಥ ಸಾರ್ವಜನಿಕ ಗ್ರಂಥಾಲಯ ಉದ್ಘಾಟನೆ ಆಗಿರುವುದು ಎಲ್ಲರಿಗೂ ಸಂತೋಷ ತಂದಿದೆ ಎಂದು ತಿಳಿಸಿದ್ದಾರೆ.3ಕೆಟಿಆರ್.ಕೆ.10ಃ

ತರೀಕೆರೆ ತಾಲೂಕು ಗೋಪಾಲ ಕಾಲೋನಿಯಲ್ಲಿ ವಕೀಲ ಬಿ.ವಿ.ದಿನೇಶ್ ಕುಮಾರ್ ನಿರ್ಮಿಸಿರುವ ಸಾರ್ವಜನಿಕ ಗ್ರಾಮೀಣ ಗ್ರಂಥಾಲಯ ಕಟ್ಟಡ