ಹಾಲು, ದಿನಸಿ ಬೆಲೆ ಏರಿಕೆ ಖಂಡಿಸಿ ಬಿಜೆಪಿ ರೈತಮೋರ್ಚಾ ಪ್ರತಿಭಟನೆ

| Published : Jul 04 2024, 01:11 AM IST

ಹಾಲು, ದಿನಸಿ ಬೆಲೆ ಏರಿಕೆ ಖಂಡಿಸಿ ಬಿಜೆಪಿ ರೈತಮೋರ್ಚಾ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರವು ಹಾಲಿನ ದರ ಏರಿಕೆ ಪೆಟ್ರೋಲ್ ಡೀಸೆಲ್ ಹಾಗೂ ರೈತರ ಪಂಪ್‌ಸೆಟ್‌ಗಳಿಗೂ ಉಪಯೋಗಿಸುತ್ತಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು೨೫,೦೦೦ರಿಂದ ೨ ಲಕ್ಷಗಳವರೆಗೂ ಏರಿಕೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಜಿಲ್ಲಾ ರೈತ ಮೋರ್ಚಾ, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಖಾಲಿ ಹಾಲಿನ ಕ್ಯಾನ್‌ಗಳ ಜೊತೆ ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ ಹಾಸನ

ರಾಜ್ಯ ಸರ್ಕಾರವು ನಡೆಸುತ್ತಿರುವ ಭ್ರಷ್ಟಾಚಾರ, ಹಾಲಿನ ಮೇಲೆ ಬೆಲೆ ಏರಿಕೆ ಹಾಗೂ ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬುಧವಾರ ಡಿಸಿ ಕಚೇರಿ ಮುಂದೆ ಬಿಜೆಪಿ ಜಿಲ್ಲಾ ರೈತ ಮೋರ್ಚದಿಂದ ಗೋವುಗಳು, ಖಾಲಿ ಹಾಲಿನ ಕ್ಯಾನ್‌ಗಳ ಜೊತೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಬಿಜೆಪಿ ಜಿಲ್ಲಾ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಿ.ಎಚ್. ನಾರಾಯಣಗೌಡ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯ ಸರ್ಕಾರವು ಹಾಲಿ ದರ ಏರಿಕೆ ಪೆಟ್ರೋಲ್ ಡೀಸೆಲ್ ಹಾಗೂ ರೈತರ ಪಂಪ್‌ಸೆಟ್‌ಗಳಿಗೂ ಉಪಯೋಗಿಸುತ್ತಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು೨೫,೦೦೦ರಿಂದ ೨ ಲಕ್ಷಗಳವರೆಗೂ ಏರಿಸಿರುತ್ತಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ವರ್ಷಕ್ಕೆ ೪ ಸಾವಿರಗಳನ್ನು ಕೊಡುತ್ತಿದ್ದ ಹಾಲಿ ಹಣವನ್ನು ಸಹ ಸರ್ಕಾರ ತಡೆದಿರುತ್ತದೆ. ಭ್ರಷ್ಟಾಚಾರವು ಮಿತಿ ಮೀರಿದ್ದು ಪರಿಶಿಷ್ಟ ಪಂಗಡ ನಿಗಮಕ್ಕೆ ನೀಡಿದ್ದ ರೂ. ೧೮೭ ಕೋಟಿಗಳನ್ನು ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳು ಗುಳುಂ ಮಾಡಿರುತ್ತಾರೆ. ಮತ್ತು ಅಂಬೇಡ್ಕರ್ ನಿಗಮಕ್ಕೆ ನೀಡಿದ್ದ ರೂ. ೧೧ ಸಾವಿರ ಕೋಟಿಗಳನ್ನು ಸಹ ಸರ್ಕಾರವೇ ವಾಪಸ್ಸು ಪಡೆದಿರುತ್ತದೆ ಎಂದು ದೂರಿದರು.

ರೈತರ ಜಮೀನಿನ ಪಹಣಿಯನ್ನು ರು. ೧೦ರಿಂದ ೪೦ ರು.ವರೆಗೆ ಏರಿಸಿದ್ದಾರೆ. ಜಮೀನಿನ ಮುದ್ರಾಂಕ ಶುಲ್ಕವನ್ನು ಶೇಕಡ ೩೦%ರಷ್ಟು ಏರಿಸಿದ್ದು, ಈ ಏರಿಕೆಯಿಂದ ರೈತರು ಮಾರಲು ಹಾಗೂ ಕೊಂಡುಕೊಳ್ಳಲು ಆಗದೆ ಪರಿತಪಿಸುತ್ತಿದ್ದಾರೆ. ಕೂಡಲೇ ಸರ್ಕಾರದ ಈ ನೀತಿಯ ವಿರುದ್ಧ ಹಾಸನ ಜಿಲ್ಲಾ ರೈತ ಮೋರ್ಚಾ ಹಾಗೂ ಜಿಲ್ಲಾ ಬಿ.ಜೆ.ಪಿ ಕಾರ್ಯಕರ್ತರು ಜುಲೈ ೨ರ ಮಂಗಳವಾರದಂದು ಪ್ರತಿಭಟನಾ ಧರಣಿ ನಡೆಸಲಿದ್ದಾರೆ. ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸರ್ಕಾರಕ್ಕೆ ತಮ್ಮ ಮೂಲಕ ಮನವಿಯನ್ನು ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ ಮಾಧ್ಯಮದೊಂದಿಗೆ ಮಾತನಾಡಿ, ರೈತರಿಗೆ ಹಣವನ್ನು ಕಡಿಮೆಕೊಟ್ಟು ಗ್ರಾಹಕರಿಂದ ಅರ್ಧ ಲೀಟರ್ ಹಾಲಿನ ದರ ಎರಡು ರು.ಗಳ ಹೆಚ್ಚು ವಸೂಲಿ ಮಾಡುವ ಸರಕಾರ ಜನರಿಗೆ ಗ್ಯಾರಂಟಿ ಕೊಡುವುದಾಗಿ ಹೇಳಿ ಜನರಿಂದಲೇ ಕೊಳ್ಳೆ ಹೊಡೆದು ಜನರ ಜೇಬಿಗೆ ಕತ್ತರಿ ಹಾಕಿ ಸ್ಟಾಂಪ್ ಪೇಪರ್ ಬೆಲೆ ಈಗ ಗಗನಕ್ಕೆ ಏರಿಕೆ ಮಾಡಿದೆ. ರೈತ ಟ್ರಾನ್ಸ್ ಫಾರಂ ಹಾಕಬೇಕು ಎಂದರೇ ೨೦ ಸಾವಿರ ಹಣದಲ್ಲಿ ಮುಗಿಯುವಂತಹ ಈಗ ಲಕ್ಷಾಂತರ ರೂಗಳ ಕೊಡಬೇಕಾಗಿದೆ ಎಂದರು. ದಿನನಿತ್ಯದ ವಸ್ತುಗಳೆಲ್ಲದರ ಬೆಲೆಗಳ ದರಗಳು ದುಪ್ಪಟ್ಟು ಹೆಚ್ಚಾಗಿದೆ. ಈಗಾಗಲೇ ರಾಜ್ಯ ಸರಕಾರವು ಹಲವಾರು ಹಗರಣಗಳಲ್ಲಿ ಮುಳುಗಿ ಹೋಗಿದೆ ಎಂದು ದೂರಿದರು. ವಾಲ್ಮೀಕಿ ನಿಗಮ, ಎಸ್.ಸಿ. ಎಸ್.ಟಿ. ನಿಗಮದಲ್ಲಿ ಭ್ರಷ್ಟಾಚಾರ ನಡೆಸಿದೆ ಎಂದು ಖಂಡಿಸಿದರು. ರಾಜ್ಯದಲ್ಲಿ ಯಾವ ಅಭಿವೃದ್ಧಿಗಳು ನಡೆಯುತ್ತಿಲ್ಲ. ಕೂಡಲೇ ಮುಖ್ಯಮಂತ್ರಿಗಳು ರಾಜೀನಾಮೆ ಕೊಟ್ಟು ಈ ಸರಕಾರ ಶೀಘ್ರ ತೊಲಗಲಿ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಯುವ ಮೋರ್ಚದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್, ಈಶ್ವರ್, ಕಾರ್ಯಾಧ್ಯಕ್ಷ ಶಕುನಿಗೌಡ, ಪಾಪಣ್ಣ, ಪ್ರಧಾನ ಕಾರ್ಯದರ್ಶಿ ನಾಗರಾಜು, ಮುಖಂಡರಾದ ಡಿ.ವೈ. ಗೋಪಾಲ್, ಪ್ರೀತಿವರ್ಧನ್, ಮೋಹನ್, ಪುನೀತ್, ವಿಜಯಲಕ್ಷ್ಮಿ ಅಂಜನಪ್ಪ, ಇತರರು ಉಪಸ್ಥಿತರಿದ್ದರು.