ಸಾರಾಂಶ
- ತುಂಬಿದ ಈಶ್ವರಹಳ್ಳಿ ಕೆರೆ, ಬಾಗಿನ ಅರ್ಪಣೆ ।
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಕುಂಟಿತವಾಗಿಲ್ಲ. ಐದೂ ಗ್ಯಾರಂಟಿಗಳಿಂದ ಜನ ಖುಷಿಯಾಗಿದ್ದಾರೆ. ವಿರೋಧ ಪಕ್ಷಗಳಿಗೆ ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದ್ದಾರೆ.ತಾಲೂಕಿನ ಈಶ್ವರಹಳ್ಳಿ ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಭಾನುವಾರ ಬಾಗಿನ ಅರ್ಪಿಸಿ ನಂತರ ಮಾತನಾಡಿದ ಅವರು, ಪ್ರತಿ ಗ್ರಾಮ ಪಂಚಾಯ್ತಿಗಳಿಗೆ ₹30 ರಿಂದ 40 ಲಕ್ಷ ದಂತೆ ಒಟ್ಟು ₹15 ಕೋಟಿ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಬಿಡುಗಡೆ ಮಾಡಿದ್ದಾರೆ. ಈಶ್ವರಹಳ್ಳಿ ಗ್ರಾಮ ಪಂಚಾಯ್ತಿ ಒಂದಕ್ಕೆ ₹2 ಕೋಟಿ ಅನುದಾನ ನೀಡಲಾಗಿದೆ ಎಂದರು.ಕ್ಷೇತ್ರದ 34 ಗ್ರಾ.ಪಂ.ಗೆ ₹ 25 ಕೋಟಿ ಅನುದಾನವನ್ನು ಮಂಜೂರು ಮಾಡಿಸಲಾಗಿದೆ. ಮುಂದಿನ ದಿನದಲ್ಲಿ ನಗರದಲ್ಲೂ ರಸ್ತೆಗಳ ದುರಸ್ತಿ ಕಾರ್ಯ ನಡೆಯಲಿದೆ. ಯುಜಿಡಿ ಮತ್ತು ಅಮೃತ್ ಕಾಮಗಾರಿಗಳಿಂದಾಗಿ ರಸ್ತೆಗಳು ಹದಗೆಟ್ಟಿವೆ ಅದನ್ನು ಸರಿಪಡಿಸಲು ನಮಗೊಂದಿಷ್ಟು ಸಮಯ ಬೇಕಾಗುತ್ತದೆ. ಅವರು 20 ವರ್ಷದಲ್ಲಿ ಹಾಳು ಮಾಡಿರುವುದನ್ನು ನಾವು 18 ತಿಂಗಳಲ್ಲಿ ಸರಿಪಡಿಸಲಿಲ್ಲ ಎಂದರೆ ಹೇಗೆ ಎಂದರು.ನಮಗೆ ಇನ್ನೂ ಮೂರೂವರೆ ವರ್ಷ ಅವಧಿ ಇದೆ. ಅವರು ಯುಜಿಡಿ, ಅಮೃತ್ ಕಾಮಗಾರಿ ಮುಗಿಸಿಲ್ಲ. ಅದನ್ನು ಪೂರ್ಣಗೊಳಿಸುವ ಕೆಲಸವನ್ನೂ ನಾವು ಮಾಡೇ ಮಾಡುತ್ತೇವೆ. ಹಿಂದಿನ ಸರ್ಕಾರ ₹70 ಸಾವಿರ ಕೋಟಿ ಸಾಲ ಮಾಡಿ ನಮ್ಮ ಮೇಲೆ ಹೊರಿಸಿ ಹೋಗಿದೆ. ಅದನ್ನು ತೀರಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಹೇಳಿದರು.ರೈತರಿಗೆ ಮೊದಲು ಕೆರೆ ತುಂಬಿಸುವ ಜೊತೆಗೆ ನಿರಂತರ ವಿದ್ಯುತ್ ನೀಡುವ ಕಾರ್ಯಕ್ಕೆ ರಾಜ್ಯ ಸರ್ಕಾರ ಒತ್ತು ನೀಡುತ್ತಿದೆ. ಶೋಷಿತರು, ಬಡವರು ಸಮಾಜದ ಮುನ್ನೆಲೆಗೆ ಬರಬೇಕು ಎನ್ನುವ ಸದುದ್ದೇಶ ಹೊಂದಿದೆ ಎಂದರು. ಎತ್ತಿನ ಹೊಳೆ ಯೋಜನೆಯಲ್ಲಿ ದೇವನೂರು, ಮಾಚೇನಹಳ್ಳಿ, ಬೆಳವಾಡಿ ಕೆರೆಗಳು ಇರಲಿಲ್ಲ. ಆದರೆ, ಎತ್ತಿನ ಹೊಳೆ ಉದ್ಘಾಟನೆ ಸಂದರ್ಭದಲ್ಲಿ ಹಳೇ ಬೀಡು ಭಾಗದಲ್ಲಿ ಸ್ವಲ್ಪ ತೊಂದರೆ ಆದ ಕಾರಣ ನಮ್ಮೆಲ್ಲರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಹಳೇಬೀಡು ಕೆರೆಗೆ ನೀರು ಹರಿಸಲು ಒಪ್ಪಿದ ಪರಿಣಾಮ ಇಂದು ಬೆಳವಾಡಿ ಕೆರೆ ತುಂಬಿದೆ ಎಂದು ಹೇಳಿದರು. ಕರಗಡ ಯೋಜನೆ ಕೆಲವು ಅಡೆತಡೆಗಳನ್ನು ನಿವಾರಿಸಿದ ಪರಿಣಾಮ ಇಂದು ತಿಮ್ಮಪ್ಪರಾಯನ ಕೆರೆ, ಈಶ್ವರಹಳ್ಳಿ ಕೆರೆ ಹಾಗೂ ಕಳಸಾಪುರ ಕೆರೆಗಳು ಭರ್ತಿಯಾಗಿದೆ. ಈ ಯೋಜನೆಗಾಗಿ ಹೋರಾಟ ಮಾಡಿದವರನ್ನೆಲ್ಲಾ ಈ ಸಂದರ್ಭದಲ್ಲಿ ನೆನಪಿಸಿ ಕೊಳ್ಳುತ್ತೇವೆ ಎಂದರು.ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಹಿಂದೆ 2013 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಂದಿನ ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಹೆಚ್ಚು ಅನುದಾನ ಕೊಟ್ಟು ಕರಗಡ ಯೋಜನೆಯನ್ನು ಪೂರ್ಣಗೊಳಿಸಬೇಕೆನ್ನುವ ಕಾಳಜಿ ತೋರಿದ್ದರ ಫಲವಾಗಿ ಇಂದು ಈ ಭಾಗದ ಕೆರೆಗಳಿಗೆ ನೀರು ಹರಿದು ಬರುತ್ತಿದೆ. 63 ಹಳ್ಳಿಗಳಿಗೆ ಇದರಿಂದ ಅನುಕೂಲವಾಗುತ್ತಿದೆ ಎಂದರು.ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಕರಗಡ ಯೋಜನೆ ಕಾಮಗಾರಿ ನಿಗದಿತ ಸಮಯದಲ್ಲಿ ಪೂರ್ಣಗೊಂಡಿದ್ದರೆ ಈ ಭಾಗದ ರೈತರೆಲ್ಲರೂ ಶ್ರೀಮಂತರಾಗಿರುತ್ತಿದ್ದರು. ಆದರೆ ಅದು ಸಾಧ್ಯವಾಗದೆ ರೈತರು ಕಣ್ಣೀರಿಡುವಂತಾಗಿತ್ತು. ಈಗ ತಡವಾಗಿಯಾದರೂ ನೀರು ಹರಿದು ಕೆರೆಗಳು ತುಂಬುವಂತಾಗಿದೆ. ಈ ಭಾಗದ ರೈತರು ನೆಮ್ಮದಿ ನಿಟ್ಟುಸಿರು ಬಿಡುವಂತಾಗಿದೆ ಎಂದು ತಿಳಿಸಿದರು.ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣಾ ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್ ಮಾತನಾಡಿ ಕೆರೆ, ಕಟ್ಟೆಗಳು ಬರಿದಾದ ಪರಿಣಾಮ ಬೆಳವಾಡಿ, ಕಳಸಾಪುರದ ಭಾಗದ ಜನರು ಬೆಂಗಳೂರು ಇನ್ನಿತರೆ ಭಾಗಕ್ಕೆ ಕೆಲಸ ಅರಸಿ ಹೋಗಿದ್ದರು. ಇದೀಗ ಕೆರೆಗಳು ತುಂಬಿರುವುದರಿಂದ ಮತ್ತೆ ಹಿಂತಿರುಗಿ ಬರುವಂತಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಗರ್‌ಹುಕ್ಕುಂ ಸಮಿತಿ ಸದಸ್ಯ ಕೆಂಗೇಗೌಡ, ಶಂಕರ್ ನಾಯಕ್, ಜಿ.ಪಂ. ಮಾಜಿ ಸದಸ್ಯ ಕೆ.ವಿ.ಮಂಜುನಾಥ್, ಯೋಗೀಶ್, ಅಚ್ಚುತರಾವ್ ಇದ್ದರು.27 ಕೆಸಿಕೆಎಂ 1ಚಿಕ್ಕಮಗಳೂರು ತಾಲೂಕಿನ ಈಶ್ವರಹಳ್ಳಿ ಕೆರೆಗೆ ಶಾಸಕ ಎಚ್.ಡಿ. ತಮ್ಮಯ್ಯ ಭಾನುವಾರ ಬಾಗಿನ ಅರ್ಪಿಸಿದರು. ಮಾಜಿ ಎಂಎಲ್‌ಸಿ ಗಾಯತ್ರಿ ಶಾಂತೇಗೌಡ, ರೇಖಾ ಹುಲಿಯಪ್ಪಗೌಡ, ಬಿ.ಎಚ್. ಹರೀಶ್ ಇದ್ದರು.