ಸಾರಾಂಶ
ಸಾಗರ: ತಾಲೂಕು ಬಿಜೆಪಿ ವತಿಯಿಂದ ಪಟ್ಟಣದ ಉಪ ವಿಭಾಗಾಧಿಕಾರಿ ಕಚೇರಿ ಎದುರು ಮಂಗಳವಾರ ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಪ್ರತಿಭಟನೆ ನಡೆಯಿತು.
ಸಾಗರ: ತಾಲೂಕು ಬಿಜೆಪಿ ವತಿಯಿಂದ ಪಟ್ಟಣದ ಉಪ ವಿಭಾಗಾಧಿಕಾರಿ ಕಚೇರಿ ಎದುರು ಮಂಗಳವಾರ ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಚ್.ಹಾಲಪ್ಪ ಮಾತನಾಡಿ, ಗಂಡನಿಂದ ಕಿತ್ತು ಹೆಂಡತಿಗೆ ಕೊಡುವ ಕೆಟ್ಟ ಆಡಳಿತ ವ್ಯವಸ್ಥೆಯಲ್ಲಿ ನಾವಿದ್ದೇವೆ. ರಾಜ್ಯ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಶ್ರೀಸಾಮಾನ್ಯನ ಬದುಕನ್ನು ಸಂಕಷ್ಟಕ್ಕೆ ನೂಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರೈತರಿಗೆ ಪ್ರೋತ್ಸಾಹಧನ ನೀಡುತ್ತೇವೆ ಎಂದು ಹಾಲಿನದರ ಏರಿಸಿದ್ದಾರೆ. ಹಾಲಿನಿಂದ ಮೂರು ಲಕ್ಷ ನಲವತ್ತೊಂದು ಸಾವಿರ ಕೋಟಿ ರುಪಾಯಿ ಆದಾಯ ಬರುತ್ತಿದೆ. ಅದರಲ್ಲಿ ರೈತರಿಗೆ ೫೦೦ ರು. ಪ್ರೋತ್ಸಾಹಧನ ಕೊಡುವುದನ್ನು ಬಿಟ್ಟು ಪದೇಪದೇ ಹಾಲಿನ ದರ ಏರಿಸಿ ಗ್ರಾಹಕರ ಶೋಷಣೆ ನಡೆಸುತ್ತಿರುವುದು ಖಂಡನೀಯ ಎಂದರು.
ಪರಿಶಿಷ್ಟಜಾತಿ ಪರಿಶಿಷ್ಟ ವರ್ಗದ ಹಣವನ್ನು ಉಪಯೋಗಿಸಿದ್ದಾರೆ. ಎಲ್ಲಾ ಹಂತದಲ್ಲಿಯೂ ರಾಜ್ಯ ಸರ್ಕಾರ ಸಂಪೂರ್ಣ ವೈಫಲ್ಯವಾಗಿದ್ದು, ಇದು ಎಲ್ಲ ವರ್ಗದ ಜನರ ವಿರೋಧಿ ಸರ್ಕಾರ ಎಂದು ದೂರಿದರು.ಸಾಗರ ಕ್ಷೇತ್ರವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸವಾಗುತ್ತಿಲ್ಲ. ಆಡಳಿತ ಯಂತ್ರ ನಿಂತು ಹೋಗಿದೆ. ಕಳೆದ ಒಂದು ತಿಂಗಳಿನಿಂದ ಉಪ ವಿಭಾಗಾಧಿಕಾರಿಗಳು ಇಲ್ಲ. ಕೈತುಂಬ ಹಣ ಕೊಟ್ಟು ಇಲ್ಲಿಗೆ ಉಪವಿಭಾಗಾಧಿಕಾರಿಯಾಗಿ ಬರಲು ಯಾವುದೇ ಐಎಎಸ್ ಅಧಿಕಾರಿಗಳು ಸಿದ್ಧರಿಲ್ಲ. ಹೊಸನಗರ ತಹಸೀಲ್ದಾರ್ ಅವರನ್ನು ಕೆಲವು ಕಡತಗಳ ಸಹಿಗಾಗಿ ಪ್ರಭಾರಿ ಉಪ ವಿಭಾಗಾಧಿಕಾರಿಯಾಗಿ ನೇಮಿಸಲಾಗಿದೆ. ಪ್ರಭಾರಿ ಉಪ ವಿಭಾಗಾಧಿಕಾರಿಗಳು ಎಚ್ಚರಿಕೆಯಿಂದ ಇರಬೇಕು. ಆಮಿಷಕ್ಕಾಗಿ ಯಾವುದಾದರೂ ಕಡತಕ್ಕೆ ಸಹಿ ಹಾಕಿದರೆ ಉದ್ಯೋಗವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಶಾಸಕರು ಸಾಗರಕ್ಕೆ ಬಾರ್ ಭಾಗ್ಯ ನೀಡಿದ್ದಾರೆ. ಗಲ್ಲಿಗಲ್ಲಿಯಲ್ಲಿ ಮದ್ಯದಂಗಡಿ ತೆರೆಯಲಾಗುತ್ತಿದೆ. ಎರಡು ವರ್ಷದಲ್ಲಿ ಬಡ ಜನರಿಗೆ ಒಂದು ಮನೆ ಕೊಟ್ಟಿಲ್ಲ ಎಂದು ಕಿಡಿಕಾರಿದರು.ಜಿಪಂ ಮಾಜಿ ಸದಸ್ಯ ರತ್ನಾಕರ ಹೊನಗೋಡು, ಡಾ.ರಾಜನಂದಿನಿ ಕಾಗೋಡು, ಟಿ.ಡಿ.ಮೇಘರಾಜ್, ಶ್ರೀನಿವಾಸ್ ಮೇಸ್ತ್ರಿ, ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಮಾತನಾಡಿದರು.
ಪಕ್ಷದ ಪ್ರಮುಖರಾದ ದೇವೇಂದ್ರಪ್ಪ, ಗಣೇಶಪ್ರಸಾದ್, ಸವಿತಾವಾಸು, ಭಾವನಾ ಸಂತೋಷ್, ಬಿ.ಸಿ.ಲಕ್ಷ್ಮೀನಾರಾಯಣ, ಸತೀಶ್.ಆರ್., ರಮೇಶ್.ಎಚ್.ಎಸ್, ಪರಶುರಾಮ್, ಪ್ರೇಮ ಸಿಂಗ್, ಭರ್ಮಪ್ಪ ಅಂದಾಸುರ ಇನ್ನಿತರರು ಹಾಜರಿದ್ದರು.