ಕನ್ನಡಪ್ರಭ ವಾರ್ತೆ ತುರುವೇಕೆರೆ
ಜನ ಕೇವಲ ಅಕ್ಷರಸ್ಥರಾದರೇ ಹೊರತು ಸಾಕ್ಷರ ನಾಗರಿಕರಾಗಲಿಲ್ಲ ಎಂದು ತುಮಕೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥ ಸ್ವಾಮಿ ವೀರೇಶಾನಂದ ಸರಸ್ವತಿ ವಿಷಾದಿಸಿದರು.ಪಟ್ಟಣದ ಯೋಗಮಂದಿರದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ, ಧೇನುಪುರಿ ರೀಜನಲ್ ಟ್ರಸ್ಟ್, ಲಯನ್ಸ್ ಕ್ಲಬ್ ಹಾಗು ಇನ್ನಿತರ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗುರು ಎಂದರೆ ಲಘು ಅಲ್ಲ ಸ್ವರಚಿತ ಕೃತಿ ಕುರಿತು ವಿಶೇಷ ಉಪನ್ಯಾಸ ನೀಡಿದರು.ಪ್ರಾಚೀನ ಭಾರತದ ಶಿಕ್ಷಣದ ಅದ್ಭುತವಾದ ಸ್ವರೂಪ. ಅದು ಶಿಕ್ಷಣದ ಉದ್ದೇಶ ಮತ್ತು ಮಹತ್ವವನ್ನು ಅನಾವರಣಗೊಳಿಸಿದೆ. ಮನುಷ್ಯನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವುದೇ ಶಿಕ್ಷಣ. ದುರಂತವೆಂದರೆ ಶಿಕ್ಷಣದ ವ್ಯಾಪ್ತಿ ಹೆಚ್ಚುತ್ತಾ ಹೋದಂತೆಲ್ಲಾ ಮೌಲ್ಯಗಳು ಮತ್ತು ಗುಣಮಟ್ಟ ಕುಸಿಯುತ್ತಾ ಹೋಗಿವೆ. ಸಮಗ್ರ ಜೀವನ ದರ್ಶನ ನೀಡಬೇಕಾದ ಶಿಕ್ಷಣ ಓದು ಬರಹಕ್ಕೆ ಸೀಮಿತವಾಗಿದೆ. ಯಾವ ದೇಶ ಶೈಕ್ಷಣಿಕವಾಗಿ ಅಭ್ಯುದಯ ಸಾಧಿಸುವುದಿಲ್ಲವೋ ಅಲ್ಲಿ ಪ್ರಜಾಪ್ರಭುತ್ವ ದೊಡ್ಡ ವೈಫಲ್ಯ ಕಾಣುತ್ತದೆ. ಎಲ್ಲಿಯವರೆಗೆ ನಮಗೆ ಜವಾಬ್ದಾರಿ ಬರುವುದಿಲ್ಲವೋ ಅಲ್ಲಿಯವರೆಗೆ ನಾವು ಪ್ರಜೆಗಳಲ್ಲ. ಬರೀ ರೇಷನ್ ಕಾರ್ಡ್, ಓಟರ್ ಕಾರ್ಡ್ ಎಣಿಕೆಯ ಜನಗಳಾಗಿ ಉಳಿಯುತ್ತೇವೆ. ಶಿಕ್ಷಣ ಇಲಾಖೆಯೂ ಇತರೆ ಇಲಾಖೆಗಳಂತೆ ಅಕ್ಷರದ ಗುತ್ತಿಗೆ ನೀಡುವ ಇಲಾಖೆಯಾಗದೆ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣ ಮಾಡಬೇಕು. ಗುರುವನ್ನು ಉನ್ನತವಾದ, ಉದಾತ್ತವಾದ ಮನಸ್ಥಿತಿಯಲ್ಲಿ ಗುರುತಿಸಬೇಕು. ಗುರುವನ್ನು ಸಾಮಾನ್ಯೀಕರಿಸಬಾರದು. ‘ಆಚಾರ್ಯ ದೇವೋಭವ’ ಇದ್ದಂತೆ ‘ವಿದ್ಯಾರ್ಥಿ ದೇವೋಭವ’ ಎಂಬುದು ಕೂಡ ಇಂದಿನ ಸಾಮಾಜಿಕ ಮೌಲ್ಯದ ಹೊಸ ಪರಿಕಲ್ಪನೆಯಾಗಿದೆ. ಯುವಶಕ್ತಿಯಿಂದಷ್ಟೇ ಸಧೃಢ ರಾಷ್ಟ್ರನಿರ್ಮಾಣ ಸಾಧ್ಯ. ಮುಂದಿನ ಮಕ್ಕಳೇ ರಾಷ್ಟ್ರದ ಅಮೂಲ್ಯ ಸಂಪನ್ಮೂಲ. ಆ ಮಕ್ಕಳೇ ದೈವಸ್ವರೂಪಿಗಳೆಂಬ ಭಾವನೆಯಿಂದ ಶ್ರದ್ಧೆ, ಪ್ರಾಮಾಣಿಕತೆಯಿಂದ ಸಂಸ್ಕಾರಯುತ ಶಿಕ್ಷಣ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಪೂಜ್ಯರ ‘ಗುರು ಎಂದರೆ ಲಘು ಅಲ್ಲ’ ಕೃತಿಯ ಎರಡನೇ ಆವೃತ್ತಿಯನ್ನು ಲೋಕಾರ್ಪಣೆಗೊಳಿಸಲಾಯಿತು. ಧೇನುಪುರಿ ರೀಜನಲ್ ಟ್ರಸ್ಟ್ ನ ಟಿ.ಆರ್. ಶ್ರೀಧರ್, ಟಿ.ಆರ್.ಶ್ರೀನಿವಾಸ್, ಚಿದಂಬರೇಶ್ವರ ಗ್ರಂಥಾಲಯದ ಸಂಸ್ಥಾಪಕ ಟಿ. ರಾಮಚಂದ್ರು, ಲಯನ್ಸ್ ಕ್ಲಬ್ ಅಧ್ಯಕ್ಷ ಟಿ.ಸಿ.ಸುನಿಲ್ ಬಾಬು, ವಿಶ್ವಾರಾಧ್ಯ, ನಾಗರತ್ನಮ್ಮ, ವಿಶ್ವಾರಾಧ್ಯ, ಕೈಲಾಸ್, ಮುನಿಯೂರು ಗ್ರಾಮದ ಯೋಗಬಂಧುಗಳು ಭಾಗವಹಿಸಿದ್ದರು. ಬರಹಗಾರ ತುರುವೇಕೆರೆ ಪ್ರಸಾದ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ವಕೀಲ ಡಿ.ಟಿ. ರಾಜಶೇಖರ್ ವಂದಿಸಿದರು. ಯೋಗ ಶಿಕ್ಷಕರಾದ ಕೆ.ಎಚ್.ಆನಂದರಾಜ್ ನಿರೂಪಿಸಿದರು.