ಯಲಹಂಕ ಸಂಭ್ರಮಕ್ಕೆ ಜನವೋ ಜನ!

| Published : Jul 14 2024, 01:36 AM IST

ಸಾರಾಂಶ

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ ಯಲಹಂಕ ನ್ಯೂಟೌನ್‌, ಹೊಯ್ಸಳ ಮೈದಾನ ಬಸ್‌ ನಿಲ್ದಾಣದ ಹಿಂಭಾಗದಲ್ಲಿ ಬೆಂಗಳೂರಿನ ಅತಿದೊಡ್ಡ ಫುಡ್‌, ಫನ್‌ ಆ್ಯಂಡ್‌ ಫ್ಯಾಷನ್‌ ಫೆಸ್ಟಿವಲ್‌ ‘ಯಲಹಂಕ ಸಂಭ್ರಮ’ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ ಯಲಹಂಕ ನ್ಯೂಟೌನ್‌, ಹೊಯ್ಸಳ ಮೈದಾನ ಬಸ್‌ ನಿಲ್ದಾಣದ ಹಿಂಭಾಗದಲ್ಲಿ ನಡೆಯುತ್ತಿರುವ ಬೆಂಗಳೂರಿನ ಅತಿದೊಡ್ಡ ಫುಡ್‌, ಫನ್‌ ಆ್ಯಂಡ್‌ ಫ್ಯಾಷನ್‌ ಫೆಸ್ಟಿವಲ್‌ ‘ಯಲಹಂಕ ಸಂಭ್ರಮ’ದ ಎರಡನೇ ದಿನವೋ ಜನವೋ ಜನ.

ವೀಕೆಂಡ್‌ ಜೊತೆಗೆ ಮಳೆ ಬರದ ಕಾರಣ ಮಧ್ಯಾಹ್ನದಿಂದಲೇ ಯಲಹಂಕ ಸಂಭ್ರಮ ನಡೆಯುತ್ತಿರುವ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಮಸ್ತಿಯಲ್ಲಿ ತೊಡಗಿದ್ದರು. ಮಕ್ಕಳು ಆಟಿಕೆಗಳೊಂದಿಗೆ ಚಿನ್ನಾಟವಾಡುತ್ತಿದ್ದರೆ, ಗೃಹಿಣಿಯರು ಗೃಹೋಪಯೋಗಿ ವಸ್ತುಗಳು, ಲೈಫ್‌ಸ್ಟೈಲ್‌ ಮಳಿಗೆಗಳಿಗೆ ನುಗ್ಗಿ ಖರೀದಿಯಲ್ಲಿ ತೊಡಗಿದ್ದರು.

ಯಶಸ್ವಿ ಕಾರ್ಯಕ್ರಮ:

ನಿಗದಿಯಂತೆ ಮುದ್ದುಮಗು ಮತ್ತು ವೇಷಭೂಷಣ(ಮಕ್ಕಳಿಗೆ), ಮಹಿಳೆಯರಿಂದ ಅಡುಗೆ ಮಹಾರಾಣಿ ಮೊದಲ ಹಂತದ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು. ಓಪನ್‌ ಸ್ಟೇಜ್‌ ಮತ್ತು ಗಾಯನ, ಬೊಂಬಾಟ್‌ ಜೋಡಿ, ಕಿಡ್ಸ್‌ ಮತ್ತು ಫ್ಯಾಮಿಲಿ ಫ್ಯಾಶನ್‌ ಶೋಗಳಲ್ಲಿ ಸ್ಥಳೀಯ ದಂಪತಿಗಳು ಪಾಲ್ಗೊಂಡು ಸಂತಸ ಪಟ್ಟರು. ಮಿಮಿಕ್ರಿ ಗೋಪಿ ಅವರು ವಿವಿಧ ರಾಜಕೀಯ ನಾಯಕರು, ಸಿನಿಮಾ ನಟರ ಧ್ವನಿ ಅನುಕರಿಸಿ ಜನರನ್ನು ನಗೆಗಡಲಲ್ಲಿ ತೇಲಿಸಿದರೆ, ಕನ್ನಡ ಕೋಗಿಲೆ ಖ್ಯಾತಿಯ ಡ್ಯೂಯಲ್‌ ವಾಯ್ಸ್‌ ಸಿಂಗರ್‌ ಮಂಜು ಹಾಸನ್‌ ಸುಮಧುರ ಗಾಯನದಲ್ಲಿ ತೇಲಿಸಿದರು. ಇಂಡಿಯನ್‌ ಫೋಕ್‌ ಮ್ಯೂಸಿಕ್‌ ಬ್ಯಾಂಡ್‌ ‘ಜಂಬೆ ಝಲಕ್‌’ ಬಾಲು ಅವರಿಂದ ಮನರಂಜನಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು.ಇಂದಿನ ಕಾರ್ಯಕ್ರಮ

ಭಾನುವಾರ ಬೆಳಗ್ಗೆ 11ಕ್ಕೆ ಮುದ್ದು ಮಗು ಮತ್ತು ವೇಷಭೂಷಣ(ಮಕ್ಕಳಿಗೆ ), ಮಧ್ಯಾಹ್ನ 12ಕ್ಕೆ ಬೆಂಕಿರಹಿತ ಅಡುಗೆ(ಮಕ್ಕಳಿಗೆ), 2ಕ್ಕೆ ಅಡುಗೆ ಮಹಾರಾಣಿ ಫಿನಾಲೆ, ಸಂಜೆ 4ಕ್ಕೆ ಚಿತ್ರಕಲಾ ಸ್ಪರ್ಧೆ(ವಿಷಯ: ಸ್ವಾತಂತ್ರ್ಯೋತ್ಸವ), 5ಕ್ಕೆ ಓಪನ್‌ ಸ್ಟೇಜ್‌ ಮತ್ತು ಗಾಯನ, ರಾತ್ರಿ 7ಕ್ಕೆ ಬಹುಮಾನ ವಿತರಣೆ, 8.30ಕ್ಕೆ ಕಿಡ್ಸ್‌ ಮತ್ತು ಫ್ಯಾಮಿಲಿ ಫ್ಯಾಶನ್‌, 9ಕ್ಕೆ ನೃತ್ಯ ಮತ್ತು ಮನೋರಂಜನಾ ಕಾರ್ಯಕ್ರಮ. ಈ ‘ಯಲಹಂಕ ಸಂಭ್ರಮ’ ಇಂದು(ಭಾನುವಾರ) ಮುಕ್ತಾಯವಾಗಲಿದೆ.