ಸಾರಾಂಶ
ಬಳ್ಳಾರಿ, ವಿಜಯನಗರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಗಣಿ ಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಆ. 16ರಂದು ಬಳ್ಳಾರಿಯಲ್ಲಿ ಗಣಿಬಾಧಿತ ಪ್ರದೇಶಗಳ ಜನರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ತಿಳಿಸಿದರು.
ಹೊಸಪೇಟೆ: ಬಳ್ಳಾರಿ, ವಿಜಯನಗರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಗಣಿ ಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಆ. 16ರಂದು ಬಳ್ಳಾರಿಯಲ್ಲಿ ಗಣಿಬಾಧಿತ ಪ್ರದೇಶಗಳ ಜನರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ವಿಶ್ರಾಂತ ಲೋಕಾಯುಕ್ತರಾದ ನ್ಯಾ. ಸಂತೋಷ್ ಹೆಗ್ಡೆ ಭಾಗವಹಿಸಲಿದ್ದಾರೆ ಎಂದು ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಾಲ್ಕು ಜಿಲ್ಲೆಗಳ ಪ್ರದೇಶಗಳ ಪುನಶ್ಚೇತನ ಮತ್ತು ಪುನರ್ವಸತಿಗಾಗಿ ಮೀಸಲಾಗಿರುವ ಹಣವನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು. ಗಣಿಗಾರಿಕೆಯಿಂದ ಗಣಿ ಬಾಧಿತ ಪ್ರದೇಶದ ಜನರು ಕಂಗಾಲಾಗಿದ್ದಾರೆ. ಹಾಗಾಗಿ ಅವರ ಪುನಶ್ಚೇತನಕ್ಕಾಗಿ ಹೋರಾಟ ಆಯೋಜಿಸಲಾಗುತ್ತಿದೆ. ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ) ಸುಮಾರು ₹30 ಸಾವಿರ ಕೋಟಿ ವೆಚ್ಚ ಮಾಡಬೇಕಿದೆ. ಈ ನಿಗಮ ಸ್ಥಾಪನೆಯಾಗಿ 11 ವರ್ಷಗಳಾದರೂ ಪ್ರಮುಖ ಯೋಜನೆಗಳನ್ನು ಅನುಷ್ಠಾನ ಮಾಡಿಲ್ಲ. ಸರ್ಕಾರ ಕೂಡ ಕೆಎಂಇಆರ್‌ಸಿ ನಿಧಿ ಮೇಲೆ ಕಣ್ಣಿಟ್ಟಿದೆ. ಈ ಹಣವನ್ನು ದೋಚುವ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಮಾನವ ಅಭಿವೃದ್ಧಿಗೆ ಪೂರಕವಾದ ಶಿಕ್ಷಣ, ಆರೋಗ್ಯ, ಪೌಷ್ಟಿಕತೆ, ನೈರ್ಮಲ್ಯ, ಪರಿಸರದಂತಹ ವಿಚಾರಗಳ ಬಗ್ಗೆ ಸಂಪೂರ್ಣವಾಗಿ ನಿರ್ಲಕ್ಷ್ಯ ತೋರಲಾಗುತ್ತಿದೆ. ಈ ವಿಚಾರವಾಗಿ ಸರ್ಕಾರಕ್ಕೆ ನಿರಂತರ ಮನವಿ ನೀಡಿದರೂ ಪ್ರಯೋಜನ ಆಗಿಲ್ಲ. ಹಾಗಾಗಿ ಬಳ್ಳಾರಿಯಲ್ಲಿ ಜನರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಗಣಿಬಾಧಿತ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನ ಸಮಿತಿ ಎಂಬ ವಿಶಾಲ ವೇದಿಕೆ ಆರಂಭಿಸಲಾಗಿದೆ. ಈ ವೇದಿಕೆಯಲ್ಲಿ ಅನೇಕ ಸಮಾನ ಮನಸ್ಕ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಒಟ್ಟುಗೂಡಿ ಕೆಲಸ ಮಾಡಲು ಮುಂದಾಗಿವೆ ಎಂದರು.ಈ ಸಮಾವೇಶದಲ್ಲಿ ಗಣಿಗಾರಿಕೆ ಮಿತಿಗೊಳಿಸಬೇಕು. ಹೊಸ ಗಣಿಗಾರಿಕೆಗೆ ಅವಕಾಶ ನೀಡಬಾರದು. ಅರಣ್ಯ ಪ್ರದೇಶಗಳನ್ನು ಗಣಿಗಾರಿಕೆಗೆ ನೀಡಬಾರದು. ಈ ಹಿಂದೆ ಅಕ್ರಮ ಗಣಿಗಾರಿಕೆಯಿಂದ ಆಗಿರುವ ನಷ್ಟವನ್ನು ವಸೂಲಿ ಮಾಡಬೇಕು. ಶೀಘ್ರ ವಿಚಾರಣೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಕೆಆರ್‌ಎಸ್ ರವಿಕೃಷ್ಣ ರೆಡ್ಡಿ, ಮುಖಂಡರಾದ ಶಿವಕುಮಾರ, ದೀಪಕ, ಎಂಎಲ್‌ಕೆ ನಾಯ್ಡು, ಗಂಟೆ ಸೋಮಶೇಖರ ಮತ್ತಿತರರಿದ್ದರು.