ವಿಜ್ಞಾನ ವಸ್ತು ಪ್ರದರ್ಶನ ಮಕ್ಕಳ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಜೊತೆಗೆ ತಂತ್ರಜ್ಞಾನಗಳನ್ನು ಅರಿತುಕೊಳ್ಳಲು ಪ್ರೇರಣೆಯಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ವಿಜ್ಞಾನ ರಂಗದಲ್ಲಿ ಪ್ರಗತಿ ಸಾಧಿಸಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ವಿಜ್ಞಾನ ಮಾನವನ ಬಳಕೆಯ ವಿಧಾನವನ್ನು ಅವಲಂಬಿಸಿದೆ. ಇದು ಆರೋಗ್ಯ, ಶಿಕ್ಷಣ ಮತ್ತು ಸಾರಿಗೆಯಲ್ಲಿ ತಾಂತ್ರಿಕತೆ ತರಲು ಕಾರಣವಾಗಿದೆ ಎಂದು ಬೆಂಗಳೂರಿನ ಇಸ್ರೋ ಉಪ ನಿರ್ದೇಶಕ ಡಾ.ಎಸ್.ವೆಂಕಟೇಶ್ ಶರ್ಮ ಶುಕ್ರವಾರ ಹೇಳಿದರು.

ಪಟ್ಟಣದ ಶಿವಪುರದ ಪೂರ್ಣ ಪ್ರಜ್ಞಾ ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಇಸ್ರೋ ವಿಜ್ಞಾನಿಗಳು ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಪ್ರಮುಖ ಭಾಗವಾಗಿದ್ದಾರೆ. ದೇಶದ ವೈಚಾರಿಕತೆಗೆ ಮತ್ತು ತಾಂತ್ರಿಕ ಪ್ರಗತಿಗೆ ಕೊಡುಗೆ ನೀಡುತ್ತಿದ್ದಾರೆ. ಸಂಸ್ಥೆಯ ಬಹುತೇಕ ಉದ್ಯೋಗಿಗಳು ಹಳ್ಳಿಗಾಡಿನಿಂದ ಬಂದವರಾಗಿದ್ದಾರೆ. ಅವರೆಲ್ಲರೂ ವಿಜ್ಞಾನದ ಸಂಶೋಧನೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದರು.

ಸಾವಿರಾರು ವರ್ಷಗಳ ಇತಿಹಾಸವಿರುವ ವಿಜ್ಞಾನ ಕ್ಷೇತ್ರಕ್ಕೆ ಭಾರತೀಯರ ಕೊಡುಗೆ ಅಪಾರವಾಗಿದೆ. ಇದು ಮಾನವನ ಜೀವನಕ್ಕೆ ತುಂಬಾ ಅತ್ಯಗತ್ಯ. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ವಿಜ್ಞಾನ ಬಳಸುವ ವೈಜ್ಞಾನಿಕ ಮನೋಭಾವ ವೃದ್ಧಿ ಆಗಬೇಕು. ಇದರಿಂದ ಯುವ ವಿಜ್ಞಾನಿಗಳು ಹೆಚ್ಚು ಹೆಚ್ಚಾಗಿ ಹೊರಹೊಮ್ಮಲು ಅವಕಾಶವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಾನ್ನಿಧ್ಯ ವಹಿಸಿದ್ದ ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದ ಸ್ವಾಮೀಜಿ ಮಾತನಾಡಿ, ವಿಜ್ಞಾನಿಗಳು ಮತ್ತು ರೈತರ ಶ್ರಮದ ಫಲವಾಗಿ ನಮ್ಮ ದೇಶದಲ್ಲಿ ನಾಲ್ಕು ವರ್ಷಗಳಿಗೆ ಸಾಕಾಗುವಷ್ಟು ಆಹಾರ ದಾಸ್ತಾನಿದೆ. ಇದರಲ್ಲಿ ವಿಜ್ಞಾನ ತಂತ್ರಜ್ಞಾನದ ಚಂದ್ರಯಾನದ- 3 ಯಶಸ್ವಿ ವಿಜ್ಞಾನಿಗಳ ಶ್ರಮ ಅಪಾರವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಹೊರ ದೇಶದವರು ಭಾರತದ ವಿಜ್ಞಾನಿಗಳಿಗೆ ತಂತ್ರಜ್ಞಾನದ ಬಗ್ಗೆ ಗೊತ್ತಿಲ್ಲ, ಮೂಢರು ಮತ್ತು ಮೂರ್ಖರು ಎಂದು ತಿಳಿದುಕೊಂಡಿದ್ದರು. ಆದರೆ, ಇಂದು ಎಲ್ಲಾ ಅಪವಾದಗಳನ್ನು ಮೆಟ್ಟಿ ಎಲ್ಲಾ ದೇಶಗಳ ಸಾಲಿನಲ್ಲಿ ಭಾರತದ ವಿಜ್ಞಾನಿಗಳು ನಿಂತಿದ್ದಾರೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಂ.ಉದಯ್ ಮಾತನಾಡಿ, ವಿಜ್ಞಾನ ವಸ್ತು ಪ್ರದರ್ಶನ ಮಕ್ಕಳ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಜೊತೆಗೆ ತಂತ್ರಜ್ಞಾನಗಳನ್ನು ಅರಿತುಕೊಳ್ಳಲು ಪ್ರೇರಣೆಯಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ವಿಜ್ಞಾನ ರಂಗದಲ್ಲಿ ಪ್ರಗತಿ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.

2024, 25ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಹಾಗೂ ಪೂರ್ಣ ಪ್ರಜ್ಞ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಬಿ.ಧನಂಜಯ ಹಾಗೂ ನಿವೃತ್ತ ಶಿಕ್ಷಣಾಧಿಕಾರಿ ಮರಿಗೌಡ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಇಂಜಿನಿಯರ್ ಎಸ್.ವಿ.ರಮೇಶ್, ನಿವೃತ್ತ ಪ್ರಾಂಶುಪಾಲ ಡಾ.ಬಿ.ಕೃಷ್ಣ, ಕ್ಷೇತ್ರ ಸಮನ್ವಯ ಅಧಿಕಾರಿ ಕೆ.ಪಿ.ನಾಗೇಶ್, ಉಪನ್ಯಾಸಕಿ ರಾಧಾ ಎಂ.ರಾಜೇಂದ್ರ, ಪುಟ್ಟರಾಜು, ಶಿವಲಿಂಗೇಗೌಡ, ಶಿಕ್ಷಣ ಸಂಸ್ಥೆ ಟ್ರಸ್ಟಿ ಚಂದ್ರಶೇಖರ ಘೋರ್ಪಡೆ, ವಿದ್ಯಾಸಂಸ್ಥೆ ಅಧ್ಯಕ್ಷೆ ಕಸ್ತೂರಿ ಅನಂತೇಗೌಡ ಹಾಗೂ ಕಾರ್ಯದರ್ಶಿ ಎಚ್.ಆರ್.ಅನಂತೇಗೌಡ ಭಾಗವಹಿಸಿದ್ದರು.