ಸರ್ಕಾರಿ ಬಸ್‌ ಡ್ರೈವರ್‌, ಕಂಡಕ್ಟರ್‌ಗೆ ಜನರಿಂದ ಕ್ಲಾಸ್‌

| Published : Sep 11 2025, 01:00 AM IST

ಸರ್ಕಾರಿ ಬಸ್‌ ಡ್ರೈವರ್‌, ಕಂಡಕ್ಟರ್‌ಗೆ ಜನರಿಂದ ಕ್ಲಾಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಆನವಟ್ಟಿ ಬಸ್‌ ನಿಲ್ದಾಣದಲ್ಲಿ ಸರ್ಕಾರಿ ಬಸ್‌ ನಿಲ್ಲಿಸದೆ ನಿಧಾನವಾಗಿ ಚಲಿಸುತ್ತಾ ಹೋಗುತ್ತಿದ್ದು, ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಓಡಿ-ಓಡಿ ಬಂದು ಬಸ್‌ ಹತ್ತುವಾಗ ಒಬ್ಬ ಮಹಿಳೆ ಹಾಗೂ ವಿದ್ಯಾರ್ಥಿ ಕಾಲು ಜಾರಿ ಬೀಳುವ ಹೊತ್ತಿಗೆ ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಕೈ ಹಿಡಿದು ಎಳೆದುಕೊಂಡಿದ್ದರಿಂದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಆನವಟ್ಟಿ

ಆನವಟ್ಟಿ ಬಸ್‌ ನಿಲ್ದಾಣದಲ್ಲಿ ಸರ್ಕಾರಿ ಬಸ್‌ ನಿಲ್ಲಿಸದೆ ನಿಧಾನವಾಗಿ ಚಲಿಸುತ್ತಾ ಹೋಗುತ್ತಿದ್ದು, ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಓಡಿ-ಓಡಿ ಬಂದು ಬಸ್‌ ಹತ್ತುವಾಗ ಒಬ್ಬ ಮಹಿಳೆ ಹಾಗೂ ವಿದ್ಯಾರ್ಥಿ ಕಾಲು ಜಾರಿ ಬೀಳುವ ಹೊತ್ತಿಗೆ ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಕೈ ಹಿಡಿದು ಎಳೆದುಕೊಂಡಿದ್ದರಿಂದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆನವಟ್ಟಿ ಮಾರ್ಗವಾಗಿ ಹಾನಗಲ್‌ನಿಂದ ಮೈಸೂರಿಗೆ ಹೋಗುವ ವಾಯುವ್ಯ ಕರ್ನಾಟಕ ಸಾರಿಗೆ ಬಸ್‌ನ ಈ ದೃಶ್ಯವನ್ನು ಕಂಡ ಸಾರ್ವಜನಿಕರು ತಕ್ಷಣವೇ ದ್ವಿಚಕ್ರ ವಾಹನದಲ್ಲಿ ತೆರಳಿ ನೃಪತುಂಬ ಶಾಲೆ ಬಳಿ ಸರ್ಕಾರಿ ಬಸ್‌ ತಡೆದು, ಬಸ್‌ ನಿಲ್ದಾಣದಲ್ಲಿ ವಾಹನ ನಿಲ್ಲಿಸಿ ಹತ್ತಿಸಿಕೊಂಡು ಹೋಗಿ ಎಂದು ಹೇಳಿದ್ದಾರೆ. ಬಸ್‌ನ ಡೈವರ್‌ ಬಸ್‌ ಪೂರ್ತಿ ತುಂಬಿತ್ತು ಹಾಗಾಗಿ ನಿಲ್ಲಸಲಿಲ್ಲ ಎಂಬ ಉತ್ತರ ನೀಡಿದ್ದಾರೆ.

ಸ್ಥಳೀಯ ನಿವಾಸಿಗಳಾದ ಸಂದೀಪ, ಪುಂಡಲೀಂಕ್‌, ಜನದನಿ ಸೇವಾ ಸಂಸ್ಥೆಯ ತಾಲೂಕು ಘಟಕದ ಅಧ್ಯಕ್ಷ ವಿಜಯ್‌ ಕುಮಾರ್‌ ಅವರು ಹಲವು ಬಾರಿ ನಿಮಗೆ ಬಸ್‌ ನಿಲ್ದಾಣದಲ್ಲಿ ನಿಲ್ಲಿಸುವಂತೆ ಹೇಳಿದ್ದರೂ ನಿಲ್ಲಿಸುತ್ತಿಲ್ಲ. ಪ್ರಯಾಣಿಕರು ಹೆಚ್ಚಾಗಿದ್ದರೆ ಬಸ್‌ ನಿಲ್ದಾಣದಲ್ಲಿ ನಿಲ್ಲಿಸಿ, ಇಳಿಸುವವರನ್ನು ಇಳಿಸಿ ಎಷ್ಟು ಸಾಧ್ಯವೂ ಅಷ್ಟು ಜನರನ್ನು ಹತ್ತಿಸಿಕೊಂಡು ಕಂಡೆಕ್ಟರ್‌ ಬಸ್‌ನ ಬಾಗಿಲನ್ನು ಭದ್ರವಾಗಿ ಮುಚ್ಚಿ ನಂತರ ವಾಹನ ಚಲಾಯಿಸಿಕೊಂಡು ಹೋಗಬೇಕು. ಇದು ನಿಮ್ಮ ಕರ್ತವ್ಯ, ಒಂದು ವೇಳೆ ಬಾಗಿಲು ತೆರೆದಿದೆ ಎಂದು ವಿದ್ಯಾರ್ಥಿಗಳು ಓಡಿ ಬಂದು ಹತ್ತುವಾಗ ಬಿದ್ದು ಪ್ರಾಣಕ್ಕೆ ಕುತ್ತು ಬಂದರೆ ಯಾರು ಹೊಣೆ ಎಂದು ತರಾಟೆಗೆ ತೆಗೆದುಕೊಂಡರು.

ತಮ್ಮದೆ ಸರಿಯೆನ್ನುವಂತೆ ಸಾರ್ವಜನಿಕರೊಂದಿಗೆ ವಾಗ್ವಾದ ಮಾಡಿದ ಡೈವರ್‌ ಹಾಗೂ ಕಂಡೆಕ್ಟರ್‌ ನಡು ರಸ್ತೆಯಲ್ಲಿ ಬಸ್‌ ನಿಲ್ಲಿಸಿ, ಟ್ರಾಫಿಕ್‌ ಸಮಸ್ಯೆ ಸೃಷ್ಟಿ ಮಾಡಿದರು. ಕೊನೆಗೆ ಸಾರ್ವಜನಿಕರು ತೀವ್ರ ತರಾಟೆಗೆ ತೆಗೆದುಕೊಂಡು ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದ ಮೇಲೆ ಬಸ್‌ ಚಲಾಯಿಸಿಕೊಂಡು ಹೋಗಿದ್ದಾರೆ.

----

ಮೈಸೂರಿಗೆ ಹೋಗುವ ಸರ್ಕಾರಿ ಬಸ್‌ ಸಮಯಕ್ಕೆ ಶಿಕಾರಿಪುರ, ಶಿವಮೊಗ್ಗಕ್ಕೆ ಶಾಲಾ –ಕಾಲೇಜು ವಿದ್ಯಾರ್ಥಿಗಳು ಹಾಗೂ ಕೆಲಸಕ್ಕೆ ಹೋಗುವ ಪ್ರಯಾಣಿಕರು ಹೆಚ್ಚಿದ್ದು, ಪ್ರತಿದಿನ ಬಸ್‌ನಲ್ಲಿ ನೂಕುನುಗ್ಗಲು ಆಗುತ್ತದೆ. ಹಾಗಾಗಿ ಈ ಬಸ್‌ ಹೊರಡುವ 5 ನಿಮಿಷ ಮುಂದೆ ಅಥವಾ ಹಿಂದೆ ಇನ್ನೊಂದು ಸರ್ಕಾರಿ ಬಸ್‌ನ್ನು ಅಧಿಕಾರಿಗಳು ಶಿವಮೊಗ್ಗಕ್ಕೆ ಬಿಡಿ.

ದೇವರಾಜ್‌ ಎಂ. ದೊಡ್ಡಮನಿ, ಅಧ್ಯಕ್ಷ, ಕರ್ನಾಟಕ ರಾಜ್ಯ ಗೆಳಯರ ಬಳಗ ತಾಲೂಕು ಘಟಕ