ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಮರದೊಳಗೆ ಬೆಂಕಿಯಿದೆ, ನೊರೆ ಹಾಲಿನಲ್ಲಿ ತುಪ್ಪವಿದೆ, ಶರೀರದಲ್ಲಿ ಆತ್ಮವಿದೆ ಆದರೆ ಕಾಣಲು ಸಾಧ್ಯವಿಲ್ಲ. ಅದೇ ರೀತಿ ನಮ್ಮಲ್ಲಿರುವ ಪ್ರತಿಭೆ ಅಥವಾ ಯಶಸ್ಸು ಕಾಣಬೇಕಾದರೆ ನಿರಂತರ ಅಭ್ಯಾಸ, ಗುರು ಹಿರಿಯರಲ್ಲಿ ಗೌರವ ಮತ್ತು ಸಂಸ್ಕೃತಿಯ ಪಾಲನೆ ಮಾಡುವ ಜತೆಗೆ ಕರ್ತವ್ಯದಲ್ಲಿ ನಂಬಿಕೆ, ಶ್ರದ್ಧೆ ಮತ್ತು ಛಲವಿದ್ದಲ್ಲಿ ಯಶಸ್ಸು ನಮ್ಮಲ್ಲಿಗೇ ಬರುತ್ತದೆ ಎಂದು ನಿವೃತ್ತ ಪ್ರಾಂಶುಪಾಲ ಪ್ರಭುಶಂಕರ್ ತಿಳಿಸಿದರು. ಪಟ್ಟಣದ ಶ್ರೀ ಕೊನೇರಿ ರಾಮಶೆಟ್ಟರ ಛತ್ರದಲ್ಲಿ ತಾಲೂಕು ವಿತರಕರ ಸಂಘ ಆಯೋಜನೆ ಮಾಡಿದ್ದ ಪ್ರತಿಭಾ ಪುರಸ್ಕಾರ, ನಿವೃತ್ತ ವರ್ತಕರಿಗೆ ಸನ್ಮಾನ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬಸವಣ್ಣನವರು ಕಾಯಕವೇ ಕೈಲಾಸವೆಂದರು, ಕೈಲಾಸ ಕಾಣಬೇಕಾದರೇ ಶಿಸ್ತು, ಸಮಯ ಪ್ರಜ್ಞೆ, ನಿಷ್ಟೆ ಹಾಗೂ ತಾಳ್ಮೆ ಮುಖ್ಯವಾಗಿದೆ, ಇತ್ತೀಚಿನ ದಿನಗಳಲ್ಲಿ ಹಣದ ಹಿಂದೆ ಓಡುವವರ ಸಂಖ್ಯೆ ಹೆಚ್ಚಿದೆ. ಆದರೆ ಸೇವಾ ಮನೋಭಾವ ಕಾಣದಾಗಿದೆ. ಇಂದು ದುಡ್ಡಿಗೆ ಜನರಲ್ಲಿ ಸಮಸ್ಯೆ ಇಲ್ಲ, ಆದರೆ ನಗುವಿನ ಸಮಸ್ಯೆ, ನೆಮ್ಮದಿಯ ಬದುಕಿನ ಸಮಸ್ಯೆ ಹಾಗೂ ಅಸೂಯೆ ಸಮಸ್ಯೆ ಬಹಳವಾಗಿ ಕಾಡುತ್ತಿದೆ. ಇದು ತೊಲಗಬೇಕಿದೆ ಎಂದು ಸಲಹೆ ನೀಡಿದರು.
ವಿತರಕರು ಯಶಸ್ವಿಯಾಗಲು ಅವರ ಮೊಗದಲ್ಲಿ ಸದಾ ನಗು, ಮಾತನಾಡುವ ಕಲೆ, ವ್ಯಾವಹಾರಿಕ ಜಾಣ್ಮೆ ಮತ್ತು ತಾಳ್ಮೆ ಮುಖ್ಯವಾಗಿದೆ. ವಿತರಕರು ಆಯೋಜನೆ ಮಾಡಿರುವ ಇಂದಿನ ಕಾರ್ಯಕ್ರಮವು ಅವರಲ್ಲಿನ ಬದ್ಧತೆ ಮತ್ತು ಸಮಾಜಮುಖಿ ಕಾರ್ಯದಲ್ಲಿ ಅವರು ತೊಡಗಿಸಿಕೊಳ್ಳುವ ಮನಸ್ಥಿತಿಗೆ, ನಿಮ್ಮ ಒಗ್ಗಟ್ಟು ಮತ್ತು ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು. ಸರ್ವಜ್ಞರ ಹಲವಾರು ವಚನಗಳನ್ನು ತಿಳಿಸಿ, ಅದರ ಅರ್ಥವನ್ನು ಸ್ವಾರಸ್ಯಕರವಾಗಿ ವಿವರಿಸಿ, ಸಭಿಕರನ್ನು ಚಿಂತನೆಗೆ ದೂಡಿದರು.ಪುರಸಭೆ ಪ್ರಭಾರ ಮುಖ್ಯಾಧಿಕಾರಿ ನಾಗೇಂದ್ರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಎಸ್‌ಎಸ್‌ಎಲ್‌ಸಿ ಹೆಚ್ಚು ಅಂಕ ಪಡೆದ ೪ ವಿದ್ಯಾರ್ಥಿಗಳಾದ ಎಸ್.ವರುಣ್, ರಿಹಾನ್ ಖಾನ್, ತಹುರ ಕೌನೇನ್ ಹಾಗೂ ಕಾವ್ಯ ಮತ್ತು ೪೦ಕ್ಕೂ ಹೆಚ್ಚು ವರ್ಷಗಳು ವ್ಯಾಪಾರ ವಹಿವಾಟು ನಡೆಸಿ, ವಯೋಸಹಜ ನಿವೃತ್ತಿ ಪಡೆದ ಹಿರಿಯ ವರ್ತಕರಾದ ಎಚ್.ಆರ್.ಮಂಜುನಾಥ್, ಎಸ್.ನಾಗೇಶ್ ಶೆಟ್ಟಿ ಹಾಗೂ ನಾಗರಾಜಶೆಟ್ಟಿ ಅವರನ್ನು ಗೌರವಿಸಲಾಯಿತು ಹಾಗೂ ಲೋಕಸಭಾ ಚುನಾವಣೆ ಸಂಬಂಧಿಸಿದಂತೆ ಸಾರ್ವಜನಿಕರಿಗಾಗಿ ಏರ್ಪಡಿಸಿದ ಪ್ರಶ್ನಾವಳಿಗೆ ಉತ್ತರಿಸಿದ ನಾಗರೀಕರಿಗೆ ನಗದು ಬಹುಮಾನ ನೀಡಿ ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ.ಸುರೇಶ್ ಕುಮಾರ್, ವಿತರಕರ ಸಂಘದ ಅಧ್ಯಕ್ಷ ಅಬ್ದುಲ್ ವಫಾ, ಕಾರ್ಯದರ್ಶಿ ವಾಸುದೇವಮೂರ್ತಿ, ಶ್ರೀನಿವಾಸ್, ಎಚ್.ಪಿ.ರಮೇಶ್, ಚಂದ್ರು, ಅರುಣ್, ವಿಜೇತ್, ಯೋಗೇಶ್, ಇತರರು ಇದ್ದರು.