ಸಾರಾಂಶ
ಪರಿಸರ ಸ್ವಚ್ಛತೆಯಿಂದ ಮನುಷ್ಯನ ಆರೋಗ್ಯ ಉತ್ತಮವಾಗುತ್ತದೆ. ಹಾಗಾಗಿ ಎಲ್ಲರೂ ತಮ್ಮ ಸುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡಲು ಒತ್ತು ನೀಡಬೇಕು.
ನರಗುಂದ: ಪ್ರಕೃತಿಗೆ ವಿರುದ್ಧವಾಗಿ ಪ್ರತಿಕ್ರಿಯಿಸಿದಾಗ, ಅದು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಪರಿಸರವನ್ನು ನಾಶ ಮಾಡದೆ ಅದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ. ಇನಾಮದಾರ ಹೇಳಿದರು.
ತಾಲೂಕಿನ ಖಾನಾಪುರ ಗ್ರಾಮದಲ್ಲಿ ಗಾಂಧಿ ಭವನದ ಮುಂಭಾಗ ಮತ್ತು ಕೆರೆ ದಂಡೆಯಲ್ಲಿ ತಾಪಂ, ಗ್ರಾಪಂ ರಡ್ಡೇರನಾಗನೂರ ಹಾಗೂ ಸ್ವಯಂಸ್ಫೂರ್ತಿ ಗ್ರಾಮೀಣಾಭಿವೃದ್ಧಿ ಸೇವಾ ಸಂಘದ ಸಹಯೋಗದಲ್ಲಿ ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. ಪರಿಸರ ಸ್ವಚ್ಛತೆಯಿಂದ ಮನುಷ್ಯನ ಆರೋಗ್ಯ ಉತ್ತಮವಾಗುತ್ತದೆ. ಹಾಗಾಗಿ ಎಲ್ಲರೂ ತಮ್ಮ ಸುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡಲು ಒತ್ತು ನೀಡಬೇಕು ಎಂದರು.ನಮ್ಮ ಮನೆಯ ಸುತ್ತಮುತ್ತಲ ಪ್ರದೇಶ ಹಾಗೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಕೇವಲ ಒಬ್ಬಿಬ್ಬರಿಂದ ಸಾಧ್ಯವಿಲ್ಲ. ಪ್ರತಿಯೊಬ್ಬರೂ ಕೈಜೋಡಿಸಿದಾಗ ಬದಲಾವಣೆ ಸಾಧ್ಯ. ಸ್ವಚ್ಛತಾ ಕಾರ್ಯಕ್ರಮ ನಿರಂತರವಾಗಿ ನಡೆದಾಗ ಗ್ರಾಮ ಸ್ವಚ್ಛವಾಗಲು ಸಾಧ್ಯ ಎಂದು ಹೇಳಿದರು.
ಸ್ವಯಂಸ್ಫೂರ್ತಿ ಗ್ರಾಮೀಣಾಭಿವೃದ್ಧಿ ಸೇವಾ ಸಂಘದ ಅಧ್ಯಕ್ಷೆ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷೆ ಪ್ರೇಮಾ ತಿಮ್ಮನಗೌಡ್ರ ಮಾತನಾಡಿ, ಗಾಂಧೀಜಿ ಸದಾ ಸ್ವಚ್ಛತೆಗೆ ಒತ್ತು ನೀಡುತ್ತಿದ್ದರು. ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂದು ಹೇಳುತ್ತಿದ್ದರು. ಬಾಹ್ಯ ಸ್ವಚ್ಛತೆ ಜತೆಗೆ ನಮ್ಮ ಮನಸ್ಸು, ಭಾವನೆಗಳೂ ಸ್ವಚ್ಛವಾಗಿರಬೇಕು ಎಂದು ಹೇಳಿದರು.ಗ್ರಾಮದ ಸ್ವಚ್ಛತೆಗಾಗಿ ನಮ್ಮ ಸಂಸ್ಥೆಯ ವತಿಯಿಂದ ಪ್ರತಿ ವಾರದಲ್ಲಿ ಒಂದು ದಿನ ಸ್ವಯಂ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇಲ್ಲಿ ಸ್ವಯಂಪ್ರೇರಿತರಾಗಿ ಗ್ರಾಮದ ಜನರು ಶ್ರಮದಾನದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಗ್ರಾಪಂ ಉಪಾಧ್ಯಕ್ಷ ಮೈಲಾರಪ್ಪ ಮದಗುಣಕಿ, ಸದಸ್ಯರಾದ ವೆಂಕನಗೌಡ ಮಲ್ಲನಗೌಡ್ರ, ಮಲ್ಲನಗೌಡ ತಿಮ್ಮನಗೌಡ್ರ, ಮಾದೇವಪ್ಪ ಮೆಣಸಿನಕಾಯಿ, ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರು, ಗ್ರಾಮದ ಸ್ವಯಂ ಸೇವಕರು, ಗ್ರಾಪಂ ಸಿಬ್ಬಂದಿ, ಒಕ್ಕೂಟದ ಸಿಬ್ಬಂದಿ ಇದ್ದರು.