ಸಾರಾಂಶ
ಸಂಬಳ ಹೆಚ್ಚಳ, ಬಾಕಿ ವೇತನ ಸೇರಿದಂತೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನಿಗಮದ ನೌಕರರು ಮಂಗಳವಾರ ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಾರಿಗೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಂಬಳ ಹೆಚ್ಚಳ, ಬಾಕಿ ವೇತನ ಸೇರಿದಂತೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನಿಗಮದ ನೌಕರರು ಮಂಗಳವಾರ ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಾರಿಗೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮಧ್ಯಾಹ್ನದ ನಂತರ ಬಸ್‌ಗಳ ಓಡಾಟ ಸಹಜ ಸ್ಥಿತಿಗೆ ಮರಳಿತಾದರೂ, ಬೆಳಗ್ಗೆ ರಾಜ್ಯದ ಬಹುತೇಕ ಕಡೆ ಪ್ರಯಾಣಿಕರು ಪರದಾಡುವಂತಾಯಿತು. ಇದನ್ನೇ ಬಂಡವಾಳ ಮಾಡಿಕೊಂಡ ಆಟೋ ಚಾಲಕರು, ಖಾಸಗಿ ಬಸ್ಸುಗಳು ಕೆಲವೆಡೆ ಹೆಚ್ಚಿನ ಹಣ ವಸೂಲು ಮಾಡುತ್ತಿದ್ದದು ಕಂಡು ಬಂತು. ಇದೇ ವೇಳೆ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.ಚಾಮರಾಜನಗರ, ಕೊಡಗು, ಹಾಸನ, ಯಾದಗಿರಿ, ಕೊಡಗು, ಬೆಳಗಾವಿ ಸೇರಿ ಹಲವೆಡೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತಗಳು ಖಾಸಗಿ ಬಸ್‌ಗಳ ಓಡಾಟಕ್ಕೆ ವ್ಯವಸ್ಥೆ ಮಾಡಿದ್ದವು. ಮುಷ್ಕರದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಸೇರಿ ಹೊರರಾಜ್ಯಗಳ ಬಸ್‌ಗಳ ಚಾಲಕರು ರಾಜ್ಯದೊಳಕ್ಕೆ ಬರಲು ಹಿಂದೇಟು ಹಾಕಿದ ಘಟನೆಗಳೂ ನಡೆದವು.ಈ ಮಧ್ಯೆ, ಮುಷ್ಕರದ ಹಿನ್ನೆಲೆಯಲ್ಲಿ ತುಮಕೂರು-ಬೆಂಗಳೂರು ನಡುವೆ ವಿಶೇಷ ಪ್ಯಾಸೆಂಜರ್ ರೈಲು ಸಂಚಾರಕ್ಕೆ ನೈಋತ್ಯ ರೈಲ್ವೆ ವ್ಯವಸ್ಥೆ ಮಾಡಿತ್ತು. ತುಮಕೂರು-ಬೆಂಗಳೂರು ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರ ಓಡಾಟ ಇದ್ದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಈ ಕ್ರಮಕ್ಕೆ ಮುಂದಾಯಿತು. (ಬಾಕ್ಸ್):
ವಿದ್ಯಾರ್ಥಿಗಳ ಪರದಾಟ:ಮುಷ್ಕರದಿಂದಾಗಿ ಮಕ್ಕಳು ಬಸ್ಸಿಲ್ಲದೆ, ಶಾಲಾ-ಕಾಲೇಜುಗಳಿಗೆ ತೆರಳಲು ಪರದಾಡಿದರು. ತುಮಕೂರು ವಿ.ವಿ.ಯಡಿ ಮಂಗಳವಾರ ನಡೆಯಬೇಕಾಗಿದ್ದ ಎಲ್ಲಾ ಸ್ನಾತಕ ಹಾಗೂ ಸ್ನಾತಕೋತ್ತರ ಪರೀಕ್ಷೆಗಳನ್ನು ಮುಂದೂಡಲಾಯಿತು.
(ಬಾಕ್ಸ್):ಕಲ್ಲು ತೂರಾಟ:
ಕೋಲಾರ ಡಿಪೋದಿಂದ ಬಸ್ ನಿಲ್ದಾಣಕ್ಕೆ ಬರುವಾಗ ಕೆಎಸ್‌ಆರ್‌ಟಿಸಿ ಬಸ್‌ಗೆ ದುಷ್ಕರ್ಮಿಗಳು ಕಲ್ಲು ಎಸೆದಿದ್ದು, ನಿರ್ವಾಹಕ ಕುಳಿತುಕೊಳ್ಳುವ ಸೀಟಿನ ಪಕ್ಕದ ಗ್ಲಾಸ್ ಪುಡಿ ಪುಡಿಯಾಗಿದೆ. ಗದಗದಲ್ಲಿ ಹುಬ್ಬಳ್ಳಿ ಬೈಪಾಸ್ ಬಳಿ ಹುಬ್ಬಳ್ಳಿಯಿಂದ ಹೊಸಪೇಟೆಗೆ ಹೊರಟಿದ್ದ ಬಸ್‌ಗೆ ಮುಸುಕುಧಾರಿಗಳು ಕಲ್ಲು ಎಸೆದ ಘಟನೆ ನಡೆದಿದೆ. ಇದರಿಂದಾಗಿ ಸಾರಿಗೆ ಬಸ್‌ನ ಮುಂದಿನ ಗ್ಲಾಸ್ ಪುಡಿಪುಡಿಯಾಗಿದೆ. ಕೊಪ್ಪಳದ ಕುಕನೂರು ಬಳಿಯೂ ಬಸ್‌ಗೆ ಕಲ್ಲು ತೂರಿದ ಘಟನೆ ವರದಿಯಾಗಿದೆ.(ಬಾಕ್ಸ್):
ಫ್ರೀ ಬಸ್ ನಂಬಿ ಬಂದಮಹಿಳೆಯರಿಗೆ ಆಘಾತ!
‘ಫ್ರೀ ಬಸ್’ ನಂಬಿಕೊಂಡು ದುಡ್ಡಿಲ್ಲದೆ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಮಹಿಳೆಯರು ಮುಷ್ಕರದಿಂದಾಗಿ ಪರಿತಪಿಸುವಂತಾಯಿತು. ಮಹಿಳೆಯರು ಎಂದಿನಂತೆ ಫ್ರೀ ಅಂತ ಬಸ್ ಏರಿ ಕುಳಿತಿದ್ದರು. ದುಡ್ಡು ಕೊಡಿ ಎನ್ನುತ್ತಿದ್ದಂತೆ ಇಳಿದೇ ಬಿಟ್ಟರು. ಖಾಸಗಿ ವಾಹನಗಳು ಆಧಾರ್ ಕಾರ್ಡ್ ತೋರಿಸಿದರೂ, ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಿಲ್ಲ. ಹೀಗಾಗಿ, ಮಹಿಳೆಯರು ದುಡ್ಡು ಕೊಟ್ಟೇ ಪ್ರಯಾಣಿಸುವಂತಾಯಿತು. ದುಡ್ಡಿಲ್ಲದವರು ಬಸ್ ನಿಲ್ದಾಣದಲ್ಲೇ ಊಟ, ನೀರು ಇಲ್ಲದೇ ಕೂರುವಂತಾಯಿತು ಈ ಮಧ್ಯೆ, ಶ್ರಾವಣ ಮಂಗಳವಾರದ ಹಿನ್ನೆಲೆಯಲ್ಲಿ ಸವದತ್ತಿ ಯಲ್ಲಮ್ಮ ಸೇರಿ ರಾಜ್ಯದ ಶಕ್ತಿ ದೇವಾಲಯಗಳಿಗೆ ಭೇಟಿ ನೀಡಲು ಮಹಿಳಾ ಪ್ರಯಾಣಿಕರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರು. ಆದರೆ ದೇವಿಯ ದರ್ಶನಕ್ಕೆ ತೆರಳಲಾಗದೆ ನಿರಾಶರಾದರು.