ಸಾರಾಂಶ
ಕೇವಲ ಪೊಲೀಸರಿಂದ ಅಪರಾಧ ತಡೆ ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರ ಸಹಕಾರ ಮತ್ತು ಮಾಹಿತಿ ಅತ್ಯಗತ್ಯ. ಈ ಹಿನ್ನಲೆಯಲ್ಲಿ ಶಾಲಾ, ಕಾಲೇಜುಗಳಲ್ಲಿ ಇಂತಹ ಜಾಗೃತಿ ಮೂಡಿಸಲು ನಿರಂತರ ಕಾರ್ಯಾಗಾರಗಳ ಅವಶ್ಯಕತೆ ಇದೆ.
ಹುಬ್ಬಳ್ಳಿ:
ಅಪರಾಧಗಳು ನಡೆದ ಮೇಲೆ ತನಿಖೆ ನಡೆಸುವುದಕ್ಕಿಂತ ಅಪರಾಧ ಪ್ರಕರಣಗಳು ಆಗದಂತೆ ನೋಡಿಕೊಳ್ಳುವುದು ಉತ್ತಮ ಎಂದು ಪಿಐ ಪ್ರವೀಣ ನೀಲಮ್ಮನವರ ಹೇಳಿದರು.ಅವರು ಇಲ್ಲಿನ ಗೋಕುಲ್ ರಸ್ತೆಯ ಪ್ರಿಯದರ್ಶಿನಿ ಕಾಲನಿ ಬಳಿ ಇರುವ ಎನ್‌ಎಲ್‌ಇ ಸೊಸೈಟಿಯ ಡಾ. ಆರ್.ಬಿ. ಪಾಟೀಲ ಮಹೇಶ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಅಪರಾಧ ತಡೆ ಹಾಗೂ ಸೈಬರ್ ಕ್ರೈಂ ಕುರಿತು ಜಾಗೃತಿ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿದ್ಯಾರ್ಥಿ ದೆಸೆಯಿಂದಲೇ ಕಾನೂನಿನ ಅರಿವು ಮೂಡಿಸುವುದು ಅನಿವಾರ್ಯ. ಅಪರಾಧಗಳ ಬಗೆಗೆ ಜನರಿಗೆ ಜಾಗೃತಿ ಮೂಡಿಸುವುದು, ಅಪರಾಧಗಳು ಆಗದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅರಿವು ಮೂಡಿಸಲು ಇಲಾಖೆಯಿಂದ ಅಪರಾಧಾ ಮಾಸಾಚರಣೆ ಆಚರಿಸಲಾಗುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ರಾಮಮೋಹನ್ ಎಚ್.ಕೆ, ಕೇವಲ ಪೊಲೀಸರಿಂದ ಅಪರಾಧ ತಡೆ ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರ ಸಹಕಾರ ಮತ್ತು ಮಾಹಿತಿ ಅತ್ಯಗತ್ಯ. ಈ ಹಿನ್ನಲೆಯಲ್ಲಿ ಶಾಲಾ, ಕಾಲೇಜುಗಳಲ್ಲಿ ಇಂತಹ ಜಾಗೃತಿ ಮೂಡಿಸಲು ನಿರಂತರ ಕಾರ್ಯಾಗಾರಗಳ ಅವಶ್ಯಕತೆ ಇದೆ ಎಂದು ಹೇಳಿದರು.
ಉಪಪ್ರಾಂಶುಪಾಲ ರಮೇಶ ಹೊಂಬಾಳಿ, ಕಾಲೇಜಿನ ಸಾಂಸ್ಕ್ರತಿಕ ವಿಭಾಗದ ಮುಖ್ಯಸ್ಥ ನೀಲ್ ಪ್ರತಾಪನ, ವಿದ್ಯಾರ್ಥಿಗಳು, ಕಾಲೇಜಿನ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ಮತ್ತು ಠಾಣೆಯ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಐ.ಎಸ್. ಹಿರೇಮಠ ಸ್ವಾಗತಿಸಿ, ವಂದಿಸಿದರು.