ಸಾರಾಂಶ
ಚಿತ್ರದುರ್ಗ: ಚರ್ಮ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಡಾ.ಮಿತಾಕ್ಷರಿ ಎಂ.ಹೂಗಾರ ಕರೆ ನೀಡಿದರು.
ನಗರದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಭಾರತೀಯ ಚರ್ಮರೋಗ ತಜ್ಞರ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿರುವ ಕ್ಯೂಟಿಕಾನ್ ಕರ್ನಾಟಕ - 24ರ 15ನೇ ವಾರ್ಷಿಕ ರಾಜ್ಯಮಟ್ಟದ ಚರ್ಮರೋಗ ತಜ್ಞರ ಸಮ್ಮೇಳನದಲ್ಲಿ ಅವರು ಮಾತನಾಡಿದರು.ಚಿತ್ರದುರ್ಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ನಮಗೆ ಸಂತಸ ತಂದಿದೆ. ಈ ಸಮ್ಮೇಳನ ಯಶಸ್ವಿಯಾಗುತ್ತದೆ ಎಂಬ ನಂಬಿಕೆ ನನ್ನದು. ಬರೀ ದೊಡ್ಡ ನಗರಗಳಲ್ಲಿ ಮಾತ್ರವಲ್ಲ ಇಂಥ ನಗರಗಳಲ್ಲೂ ಸಮ್ಮೇಳನಗಳನ್ನು ಮಾಡುವುದರ ಜತೆಗೆ ಜನರಲ್ಲಿ ಚರ್ಮರೋಗದ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು.
ಚರ್ಮರೋಗಕ್ಕೆ ಸಂಬಂಧಿಸಿದಂತೆ ಇಲ್ಲಿ ಸಾಕಷ್ಟು ಸಂಶೋಧನೆಗಳು ನಡೆದಿವೆ. ನಾವು ಚಿಕ್ಕ ಚಿಕ್ಕ ಶಾಲೆ, ಕಾನ್ವೆಂಟ್‍ಗಳನ್ನು ತಲುಪಿ ಅವರಿಗೆ ಜಾಗೃತಿ ಮೂಡಿಸಬೇಕು. ಈ ಸಮ್ಮೇಳನಕ್ಕೆ ಉತ್ತಮ ಚರ್ಮರೋಗ ತಜ್ಞರು ಆಗಿಮಿಸಿದ್ದಾರೆ. ಜಾಗೃತಿ ಬಗ್ಗೆ ಉತ್ತಮ ಪ್ರಬಂಧಗಳು ಮಂಡನೆಯಾಗುತ್ತಿವೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭಾರತೀಯ ಚರ್ಮರೋಗ ತಜ್ಞರ ಸಂಘದ ಅಧ್ಯಕ್ಷ ಡಾ.ಮಂಜುನಾಥ ಶೆಣೈ, ಐಎಡಿವಿಎಲ್‍ನ ರಾಷ್ಟ್ರೀಯ ಅಧ್ಯಕ್ಷನಾಗಿರುವುದು ನನಗೆ ಹೆಮ್ಮೆ. ಅನೇಕರು ನನಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಕರ್ನಾಟಕ ಐಎಡಿವಿಎಲ್ ನ ಪ್ರಮುಖ ಶಾಖೆಯಾಗಿದ್ದು ಯಶಸ್ವಿಯಾಗಿ ಕೆಲಸ ಮಾಡುತ್ತಿದೆ. ನಮ್ಮ ರಾಜ್ಯ ಶಾಖೆಯು ಚರ್ಮರೋಗಕ್ಕೆ ಸಂಬಂಧಿಸಿದಂತೆ ಉತ್ತಮ ಸಂಶೋಧನಾ ಲೇಖನಗಳನ್ನು ಪ್ರಕಟಿಸುತ್ತಿದೆ. ರಾಷ್ಟ್ರೀಯ ಐಎಡಿವಿಎಲ್ ಸಂಖ್ಯಾ ಆಧಾರದ ಮೇಲೆ ಪ್ರಪಂಚದಲ್ಲಿ ಎರಡನೇ ದೊಡ್ಡ ಸಂಘವಾಗಿದೆ. ಶೈಕ್ಷಣಿಕ ಬೆಳವಣಿಗೆಗೆ ನಮ್ಮ ಕೊಡುಗೆ ದೊಡ್ಡದು ಎಂದು ತಿಳಿಸಿದರು.
ಚರ್ಮ ರೋಗದ ವಿಷಯದಲ್ಲಿ ಸಾಕಷ್ಟು ಸುಧಾರಣೆ ಮಾಡಲಾಗಿದೆ. ಡಿಜಿಟಲ್ ಡೆರ್ಮಟಾಲಜಿ ಬಗ್ಗೆ ಸಾಕಷ್ಟು ಕೊಡುಗೆ ಕೊಟ್ಟಿದ್ದೇವೆ. ಇದಕ್ಕೆ ಕ್ಯೂಟಿಕಾನ್ ಕರ್ನಾಟಕದ ಸದಸ್ಯರ ಕೊಡುಗೆ ಅಪಾರವಾದುದು ಎಂದರು.ಡಾ.ಪಿ.ಎಸ್.ಶಂಕರ್ ಮಾತನಾಡಿ, ನಮ್ಮ ಜ್ಞಾನವನ್ನು ಇಂದು ಹೆಚ್ಚಿಸಿಕೊಳ್ಳಬೇಕಿದೆ. ಬದಲಾದ ಹವಾಮಾನದಲ್ಲಿ ಅನೇಕ ರೀತಿಯ ಚರ್ಮರೋಗಗಳು ಬರುತ್ತಿವೆ. ಅದಕ್ಕೆ ಸರಿಯಾಗಿ ವೈದ್ಯಲೋಕ ಎಲ್ಲ ಸಮಸ್ಯೆಗಳನ್ನು ಎದುರಿಸುವ ಶಕ್ತಿಯನ್ನು ಬೆಳೆಸಿಕೊಂಡಿದೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಎಂದು ಹೇಳಿದರು.
ಇದೇ ವೇಳೆ ಕೆ.ಸಿದ್ದಪ್ಪ ಸ್ಮರಣಾರ್ಥ ಜೀವಮಾನ ಸಾಧನೆಗಾಗಿ ಐಎಡಿವಿಎಲ್ ರಾಜ್ಯ ಪ್ರಶಸ್ತಿಯನ್ನು ಡಾ.ಜಯದೇವ ಬೆಟ್ಕರೂರ್ ಅವರಿಗೆ ಹಾಗೂ ಬೆಂಗಳೂರು ಮೆಡಿಕಲ್ ಕಾಲೇಜಿನ ಡಾ.ಶಿಲ್ಪರವರಿಗೆ ಐಎಡಿವಿಎಲ್ ಚರ್ಮ ವಿಭಾಗದ ಉತ್ತಮ ವೈದ್ಯೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.ಈ ಸಂದರ್ಭದಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮಿಗಳು, ಡಾ.ಮಹೇಶ್‍ಕುಮಾರ್, ಡಾ.ಎನ್.ಆನಂದಪ್ಪ, ಡಾ.ಮಂಜುನಾಥ ಹುಲಮನೆ, ಕಾಲೇಜಿನ ಡೀನ್ ಡಾ.ಪ್ರಶಾಂತ್.ಜಿ, ಡಾ.ಎಂ.ಯೋಗೇಂದ್ರ, ಡಾ.ರಘು, ವರ್ಷಿಣಿ, ಅಮೃತ.ಎಂ, ಅಶ್ವಿನಿ ಮತ್ತಿತರರಿದ್ದರು.