ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ತಾಲೂಕಿನ ಗ್ರಾಮವೊಂದರ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಈ ಕೂಡಲೇ ಬಂಧಿಸಿ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಹಾಗೂ ವಿವಿಧ ಬಂಜಾರ ಸಮಾಜ ಸಂಘಟನೆಗಳ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಬಲರಾಮ ಕಟ್ಟಿಮನಿ ಅವರಿಗೆ ಮನವಿ ಸಲ್ಲಿಸಿದರು.ಈ ಪ್ರತಿಭಟನೆ ವೇಳೆ ಸಮಾಜದ ಮುಖಂಡರು ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ದೇಶಕ್ಕೆ ಸ್ವಾತಂತ್ರ್ಯಸಿಕ್ಕು ಇಷ್ಟು ದಿನಗಳು ಕಳೆದರೂ ಅತ್ಯಾಚಾರದ ಪ್ರಕರಣಗಳು ನಿತ್ಯ ನಡೆಯುತ್ತಲೇ ಇವೆ. ತಾಲೂಕಿನ ಗ್ರಾಮವೊಂದರ ಮಹಿಳೆ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ಧಾರೆ. ಇದು ಇಡೀ ಮಾನವ ಕುಲವೇ ತಲೆ ತಗ್ಗಿಸುವಂತಾಗಿದೆ. ಇದೇ ರೀತಿಯಲ್ಲಿ ಮಂಡ್ಯ ಜಿಲ್ಲೆ, ಮುದ್ದೇಬಿಹಾಳ ತಾಲೂಕಿನ ಹುಲ್ಲೂರು ತಾಂಡಾ, ಲಿಂಗಸೂರು ಸೇರಿದಂತೆ ಇನ್ನೂ ಅನೇಕ ಬಂಜಾರ ಸಮಾಜದ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಗಳು ನಡೆದಿವೆ. ಮಹಿಳೆಯರ ರಕ್ಷಣೆಯೇ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ರೀತಿಯ ಘಟನೆಗಳು ಮುಂದೆ ಎಂದಿಗೂ ನಡೆಯದಂತೆ ಕಾನೂನು ರೂಪಿಸಬೇಕು. ದುಷ್ಕರ್ಮಿಗಳನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು. ಜೊತೆಗೆ ಈಗಾಗಲೇ ದೌರ್ಜನ್ಯಕ್ಕೊಳಗಾದ ಮಹಿಳೆ ಕುಟುಂಬಕ್ಕೆ ₹10 ಲಕ್ಷಗಳ ವಿಶೇಷ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.ಈ ವೇಳೆ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಅಧ್ಯಕ್ಷ ಬಹಾದ್ದೂರ ರಾಠೋಡ, ದಲಿತ ಮುಖಂಡ ಹರೀಷ ನಾಟಿಕಾರ, ರವಿ ನಾಯಕ, ಲಕ್ಷ್ಮಣ ಲಮಾಣಿ, ರಾಜು ಜಾಧವ, ಬಿ.ಬಿ.ಲಮಾಣಿ, ಸಿ.ಜಿ.ವಿಜಯಕರ, ಎಸ್.ಪಿ.ಸೇವಾಲಾಲ್, ಬಿ.ಎಸ್.ಜಾಧವ, ಸಂತೋಷ ಚವ್ಹಾಣ, ಥಾವರಪ್ಪ ಜಾಧವ, ಶಿವಾನಂದ ರಾಠೋಡ, ಲಕ್ಷ್ಮೀಬಾಯಿ ನಾಯಕ, ದೇವಕಿ ನಾಯಕ, ಕಮಲಾಬಾಯಿ ನಾಯಕ ಸೇರಿ ಹಲವರು ಇದ್ದರು.-------------
ಪೋಟೋ ಕ್ಯಾಪ್ಶನ್:ಮುದ್ದೇಬಿಹಾಳ ತಾಲೂಕಿನ ಮುದ್ನಾಳ ಗ್ರಾಮದ ಲಂಬಾಣಿ ಸಮಾಜದ ಶೋಭಾ ಕಲ್ಯಾಣಕುಮಾರ ಲಮಾಣಿ ಎನ್ನುವ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆ ಮಾಡಿವ ದುಶ್ಕರ್ಮಿಗಳನ್ನು ಈ ಕೂಡಲೇ ಬಂಧಿಸಿ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘ, ಹಾಗೂ ವಿವಿಧ ಬಂಜಾರ ಸಮಾಜ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ತಹಶಿಲ್ದಾರ ಬಲರಾಮ ಕಟ್ಟಿಮನಿಯವರಿಗೆ ಮನವಿಸಲ್ಲಿಸಿದರು.
ಬಾಕ್ಸ್.....ಕುಟುಂಬಕ್ಕೆ ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ: ನಾಡಗೌಡ
ಮುದ್ದೇಬಿಹಾಳ: ಮಹಿಳೆ ಮೇಲೆ ಅತ್ಯಾಚಾರ ನಡೆದು, ಕೊಲೆಯಾಗಿರುವುದು ಮನುಕುಲವೇ ತಲೆ ತಗ್ಗಿಸುವಂತಾಗಿದೆ. ಯಾವುದೇ ಜಾತಿ, ಧರ್ಮದವರಾಗಿರಲಿ ಈ ರೀತಿ ಘಟನೆಗಳು ಮತಕ್ಷೇತ್ರದಲ್ಲಿ ನಡೆಯಕೂಡದು. ಸದ್ಯ ಈ ಪ್ರಕರಣದ ಕುರಿತು ಸಂಪೂರ್ಣ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಕೊಲೆಯಾದ ಮಹಿಳೆಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ತಿಳಿಸಿದ್ದಾರೆ.ಈ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೂರು ವಿಧಾನಸಭಾ ಮತಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿರುವುದರಿಂದ ಚುನಾವಣೆ ಉಸ್ತುವಾರಿಯಾಗಿ ನನ್ನನ್ನು ನೇಮಕ ಮಾಡಿದ್ದಾರೆ. ಜೊತೆಗೆ ಈ ಪ್ರಕರಣ ಬಗ್ಗೆ ತಡವಾಗಿ ನನಗೆ ತಿಳಿದು ಬಂದಿರುವ ಕಾರಣ ನನಗೆ ಬರಲು ಸಾಧ್ಯವಾಗಿಲ್ಲ. ನ.14 ರಂದು ಮುದ್ದೇಬಿಹಾಳಕ್ಕೆ ಬರುತ್ತೇನೆ. ಬಳಿಕ, ಪೊಲೀಸ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಆ ಗ್ರಾಮಕ್ಕೆ ತೆರಳಿ ಮೃತ ಕುಟುಂಬವನ್ನು ಭೇಟಿಯಾಗುತ್ತೇನೆ. ಮೃತಳ ಕುಟುಂಬದವರು ಧೈರ್ಯ ತಂದುಕೊಳ್ಳಬೇಕು. ಇಡೀ ಬಂಜಾರ ಸಮಾಜ ಬಾಂಧವರ ಜೊತೆಗೆ ಸದಾ ನಿಲ್ಲುತ್ತೇನೆ. ಮೃತಳ ಕುಟುಂಬಕ್ಕೆ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.