ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು ಪಟ್ಟಣದಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಶಾಲಾ ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಹಿಂಡುಗಟ್ಟಿ ಜೋರಾಗಿ ಬೊಗಳುವ ನಾಯಿಗಳ ಮಧ್ಯೆ ಕೈಯಲ್ಲಿ ಜೀವ ಹಿಡಿದು ಹಾದುಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಜೀವಭಯದಲ್ಲಿ ನಾಗರಿಕರು:
ಪಟ್ಟಣದ ಬೀದಿಬೀದಿಗಳಲ್ಲಿ ನಾಯಿಗಳು ಗುಂಪು ಕಟ್ಟಿಕೊಂಡು ರಾಜಾರೋಷವಾಗಿ ಓಡಾಡುತ್ತಿವೆ. ದಿನದಿಂದ ದಿನಕ್ಕೆ ನಾಯಿಗಳ ಸಂಖ್ಯೆ ಹೆಚ್ಚುತ್ತಿರುವುದು ನಾಗರಿಕರಲ್ಲಿ ಆತಂಕ ಉಂಟುಮಾಡಿದೆ. ಕೆಲವು ನಾಯಿಗಳು ಬೈಕ್ ಸವಾರರನ್ನು ಬೆನ್ನಟ್ಟಿ ಕೆಳಗೆ ಬೀಳಿಸುತ್ತಿವೆ. ಇತ್ತೀಚೆಗೆ ಜಾತಿಗಣತಿ ಸಂದರ್ಭದಲ್ಲಿ ಶಿಕ್ಷಕಿಯ ಮೇಲೆ ಮಾರಣಾಂತಿಕ ದಾಳಿ ಮಾಡಿರುವ ಘಟನೆ ನಡೆದಿದೆ. ಬೆಳಗ್ಗೆ ಶಾಲೆಗೆ ಹೋಗುವ ಮಕ್ಕಳು, ವಾಕಿಂಗ್‌ಗೆ ಹೋದವರು, ಪಾದಚಾರಿಗಳು, ಮಹಿಳೆಯರು, ವೃದ್ಧರು ಜೀವಭಯದಲ್ಲಿ ನಡೆದಾಡುತ್ತಿದ್ದಾರೆ.ಕರುವನ್ನೂ ಬಿಡದ ನಾಯಿಗಳು:ಬೀದಿನಾಯಿಗಳನ್ನು ಪಟ್ಟಣ ಪಂಚಾಯಿತಿಯವರು ಸಾಕುತ್ತಿದ್ದಾರೇನೋ ಎಂಬ ಮಟ್ಟಿಗೆ ಯಾವುದೇ ಭಯವಿಲ್ಲದೇ ಹಿಂಡುಗಟ್ಟಿ ರಾಜಾರೋಷವಾಗಿ ಓಡಾಡುತ್ತಿವೆ. ಎಲ್ಲೆಂದರಲ್ಲಿ ಬಿಸಾಡಿದ , ಹೋಟೆಲ್, ತಿಂಡಿ ಗಾಡಿ, ಕೋಳಿ, ಕುರಿ, ಮೀನು, ಮಾಂಸ ತ್ಯಾಜ್ಯದ ರುಚಿ ನಾಯಿಗಳನ್ನು ಸೆಳೆಯುತ್ತಿವೆ. ಪಟ್ಟಣದ ಕಸದ ನಿರ್ವಹಣೆ ಸರಿಯಾಗಿ ನಡೆಯದೆ ಇರುವುದು ನಾಯಿಗಳ ಸಂಖ್ಯಾವೃದ್ಧಿಗೆ ಕಾರಣ ಎಂದು ನಾಗರಿಕರು ದೂರುತ್ತಾರೆ. ಮಾಂಸ ರುಚಿ ಕಂಡ ನಾಯಿಗಳು ಜೀವಂತ ಕರುಗಳ ಮೇಲು ದಾಳಿ ಮಾಡಿ ತಿಂದು ತೇಗುವ ಹಂತಕ್ಕೆ ಬಂದಿದ್ದು ಇತ್ತೀಚೆಗೆ ಪುಟ್ಟ ಕರುವಿನ ಮೇಲೆ ದಾಳಿ ಮಾಡಿರುವುದು ಸಾಕ್ಷಿಯಾಗಿದೆ. ಸಂತಾನಹರಣ ಚಿಕಿತ್ಸೆಗೆ ಬೇಡಿಕೆ :
ನಾಯಿಗಳ ಕಾಟದಿಂದ ಮುಕ್ತಿ ಕೊಡಿಸುವಂತೆ ಸ್ಥಳೀಯರು ಪುರಸಭೆಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಸಮಸ್ಯೆಗೆ ಪರಿಹಾರ ದೊರಕಿಲ್ಲ. ಬೀದಿನಾಯಿಗಳ ಹಾವಳಿ ತಡೆಯಲು ಮುಂದಾದರೆ, ಪ್ರಾಣಿ ದಯಾ ಸಂಘಗಳು ನಾನಾ ರೀತಿಯಲ್ಲಿ ದೂರು ನೀಡುತ್ತಿವೆ. ನಿಯಮಗಳಿಂದಾಗಿ ನಾಯಿಗಳ ವಿರುದ್ಧ ಏಕಾಏಕಿ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಮಾಡಿಸಲು ಇಲ್ಲಿ ಪುರಸಭೆ ಮುಂದಾಗಬೇಕು ಎಂಬುದು ನಾಗರಿಕರ ಬೇಡಿಕೆಯಾಗಿದೆ.ನಾಯಿಕಾಟಕ್ಕೆ ಕಡಿವಾಣ ಹಾಕಿ:ಈ ಬಗ್ಗೆ ಬಿಕ್ಕೋಡು ರಸ್ತೆ ನಿವಾಸಿ ಹೇಮ ಗಿರೀಶ್, ಬಾಳೆಹಣ್ಣು ರಮೇಶ್ ಮಾತನಾಡಿ, ಬೆಳಿಗ್ಗೆ ನಮ್ಮ ಮಕ್ಕಳು ಶಾಲೆಗೆ ಹೋಗುವಾಗ ರಸ್ತೆಯ ಮಧ್ಯೆ ಗುಂಪಾಗಿ ನಿಂತು ನಾಯಿಗಳು ಬೊಗಳುತ್ತವೆ. ಕೆಲವೊಮ್ಮೆ ಬೈಕ್ ಸವಾರರನ್ನು ಬೆನ್ನಟ್ಟಿ ಬೀಳಿಸಿದ ಘಟನೆ ನೋಡಿದ್ದೇವೆ. ಕಸ ವಿಲೇವಾರಿ ಸರಿಯಾಗಿ ಆಗದಿರುವುದು. ಕೋಳಿ ತ್ಯಾಜ್ಯಗಳ ಹಸಿ ಮಾಂಸ ಇದಕ್ಕೆ ಪ್ರಮುಖ ಕಾರಣ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ನಾಯಿಗಳ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಕಾಲಹರಣ:
ಬೀದಿನಾಯಿ ನಿಯಂತ್ರಣಕ್ಕೆ ಸಂಘಸಂಸ್ಥೆ, ಸಂಘಟನೆಗಳಿಂದ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಪುರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ. ತಾಲೂಕಾಡಳಿತ ಕೂಡ ಜವಾಬ್ದಾರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಒಬ್ಬರ ಮೇಲೆ ಒಬ್ಬರು ಹೇಳುತ್ತಾ ಜನರಿಗಾಗುತ್ತಿರುವ ಸಮಸ್ಯೆಯನ್ನೇ ಮರೆಮಾಚುತ್ತಿದ್ದಾರೆ. ನಾಯಿಗಳ ದಾಳಿಯಿಂದ ಮುಂದೆ ದೊಡ್ಡ ಅನಾಹುತ ಆಗುವ ಮೊದಲು ಎಚ್ಚೆತ್ತುಕೊಳ್ಳಬೇಕು ಎಂದು ಕರವೇ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷ ವಿ.ಎಸ್ ಬೋಜೇಗೌಡ ಆಗ್ರಹಿಸಿದ್ದಾರೆ.;Resize=(128,128))
;Resize=(128,128))
;Resize=(128,128))