ಗಣೇಶೋತ್ಸವದಲ್ಲಿ ತೇಲಿದ ಗುಂಡ್ಲುಪೇಟೆ ಜನ!

| Published : Sep 24 2024, 01:45 AM IST

ಸಾರಾಂಶ

ಹಾಸ್ಯೋತ್ಸವದಲ್ಲಿ ತೇಲಿ ಬಂದ ನಗು, ಚಲನ ಚಿತ್ರಗಳ ಗೀತೆಗಳ ಭರ್ಜರಿ ಸೌಂಡಿಗೆ ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರಾರು ಯುವಕರು ಕುಣಿದು ಕುಪ್ಪಳಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಟ್ಟಣದ ಶ್ರೀ ವಿನಾಯಕ ಸೇವಾ ಸಮಿತಿಯ ೪೦ನೇ ವರ್ಷದ ಗಣೇಶೋತ್ಸವ ಅಂಗವಾಗಿ ನಡೆದ ವರ್ಣ ರಂಜಿತ ಹಾಸ್ಯೋತ್ಸವ ಹಾಗೂ ಸಂಗೀತ ಸಂಜೆ ಕಾರ್ಯಕ್ರಮವು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ನೇತೃತ್ವದಲ್ಲಿ ಭಾನುವಾರ ರಾತ್ರಿ ನಡೆಯಿತು.

ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ಆರಂಭವಾದ ಸ್ಯಾಂಡಲ್ ವುಡ್‌ ಮ್ಯೂಸಿಕಲ್‌ ನೈಟ್‌ ಕಾರ್ಯಕ್ರಮದಲ್ಲಿ ನಟ ಪ್ರೇಮ್‌, ಶರಣ್‌, ನಿರೂಪಕಿ ಅನುಶ್ರೀ, ಮಿಮಿಕ್ರಿ ಯೋಗಿ ಗೌಡ, ಕಲಾವತಿ ದಯಾನಂದ್‌, ಪುಷ್ಪ ಆರಾಧ್ಯ, ರವಿರಾಜ್‌, ಸರಿಗಮಪ ಶಶಿಕಲಾ, ಸುನೀಲ್‌, ಸಂತೋಷ್‌ ದೇವ್‌ ಕಾರ್ಯಕ್ರಮಕ್ಕೆ ಕಳೆ ತಂದು ಕೊಟ್ಟರು.

ಹಾಸ್ಯೋತ್ಸವದಲ್ಲಿ ತೇಲಿ ಬಂದ ನಗು, ಚಲನ ಚಿತ್ರಗಳ ಗೀತೆಗಳ ಭರ್ಜರಿ ಸೌಂಡಿಗೆ ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರಾರು ಯುವಕರು ಕುಣಿದು ಕುಪ್ಪಳಿಸಿದರು.

ಸಂಜೆ 7 ಗಂಟೆಗೆ ಆರಂಭವಾದ ಕಾರ್ಯಕ್ರಮವು ಮಧ್ಯರಾತ್ರಿ 12 ಗಂಟೆಯ ತನಕ ಎಡ ಬಿಡದೆ ನಡೆದರೂ ನೆರೆದಿದ್ದ ಸಹಸ್ರಾರು ಜನರು ಕದಲದೇ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು. ಮಳೆರಾಯ ಬಿಡುವು ನೀಡಿದ್ದು ಮತ್ತಷ್ಟು ಖುಷಿ ತಂದಿತು.

ಅದ್ಧೂರಿ ಸೆಟ್‌ ಮನಸೋತ ಜನರು:

ಮೈಸೂರು- ಊಟಿ ಹೆದ್ದಾರಿಯ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ನಡೆದ ಸಂಗೀತ ಸಂಜೆಯ ಕಾರ್ಯಕ್ರಮದ ವೇದಿಕೆಯ ಅದ್ಧೂರಿ ಸೆಟ್‌ ಗೆ ನೆರೆದಿದ್ದ ಜನರು ಮನಸೋತರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಡಾ.ಗೀತಾ ಮಹದೇವ ಪ್ರಸಾದ್‌, ಶಾಸಕರ ಪತ್ನಿ ವಿದ್ಯಾ ಗಣೇಶ್‌, ಪುತ್ರ ಇಷ್ಠಾರ್ಥ್‌ ಗಣೇಶ್‌, ಚಿಕ್ಕಪ್ಪ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್‌, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಪುರಸಭೆ ಅಧ್ಯಕ್ಷ ಕಿರಣ್‌ ಗೌಡ, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್‌ ಸೇರಿದಂತೆ ಪುರಸಭೆ ಸದಸ್ಯರು ಹಾಗೂ ಕಾಂಗ್ರೆಸ್‌ ಮುಖಂಡರು ಇದ್ದರು.

ಜನರ ನೋಡಿ ಶಾಸಕ ಗಣೇಶ್‌ ಫಿದಾ!:

ಪಟ್ಟಣದಲ್ಲಿ ಭಾನುವಾರ ಸಂಜೆ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಕಂಡ ಜನರನ್ನು ನೋಡಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಸಂತಸಪಟ್ಟರು.

ಕಾರ್ಯಕ್ರಮದ ಮಧ್ಯೆ ಮಾತನಾಡಿದ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌, ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಸಮಾಧಾನ, ಸಾವದಾನದ ಜೊತೆಗೆ ಇಷ್ಟೊಂದು ಜನ ಸೇರಿದ್ದು ನೋಡಿ ತುಂಬ ಖುಷಿಯಾಗಿದೆ ಎಂದರು. ಕ್ಷೇತ್ರದ ಜನರಿಗೆ ಗೌರಿ,ಗಣೇಶ ಹಬ್ಬದ ಅಂಗವಾಗಿ ವರ್ಷದಲ್ಲಿ ಒಂದು ದಿನ ಮನೋರಂಜನೆ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ನಿಮ್ಮ ಪ್ರೀತಿ, ವಿಶ್ವಾಸ ನನ್ನ ಮೇಲಿರಲಿ ಎಂದರು.