ಸಾರಾಂಶ
ಹುಬ್ಬಳ್ಳಿ:
ರಂಗಪಂಚಮಿ ಹಿನ್ನೆಲೆ ಹುಬ್ಬಳ್ಳಿಯು ಶುಕ್ರವಾರ ಸಂಪೂರ್ಣವಾಗಿ ಬಣ್ಣದಲ್ಲಿ ಮಿಂದೆದ್ದಿತು. ಯುವಕ-ಯುವತಿಯರು, ಮಕ್ಕಳು ಸೇರಿ ಹಲಗಿ ಬಾರಿಸಿ ಪರಸ್ಪರ ಬಣ್ಣ ಎರಚಿದರು. ಕೆಲವರು ಡಿಜೆ ಸದ್ದಿಗೆ ಹುಚ್ಚೆದ್ದು ಕುಣಿದು ಸಂಭ್ರಮಿಸಿದರು.ಹೋಳಿ ಹುಣ್ಣಿಮೆಯ 5ನೇ ದಿನದಂದು ರಂಗಪಂಚಮಿಯ ದಿನ ಹುಬ್ಬಳ್ಳಿಯಲ್ಲಿ ಬಣ್ಣದೋಕುಳಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಸುಡುವ ಬಿಸಿಲಿನ ಆರ್ಭಟ ಲೆಕ್ಕಿಸದೇ ಜನತೆ ಬಣ್ಣದೋಕುಳಿಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಕೆಲವು ಜನನಿಬಿಡ ಪ್ರದೇಶಗಳಲ್ಲಿ ಚಿಕ್ಕಮಕ್ಕಳು ರಸ್ತೆಯಲ್ಲಿ ಸಂಚರಿಸುತ್ತಿದ್ದ ಸವಾರರ ಮೇಲೆ ಪ್ಲಾಸ್ಟಿಕ್ ಹಾಳೆಯಲ್ಲಿ ಬಣ್ಣದ ನೀರು ತುಂಬಿ ಎರಚುತ್ತಿರುವುದು ಕಂಡುಬಂದಿತು. ಇನ್ನು ಕೆಲವೆಡೆ ಕರ್ತವ್ಯ ನಿರತರಾಗಿದ್ದ ಪೊಲೀಸ್ ಸಿಬ್ಬಂದಿ ಬಣ್ಣದಾಟವಾಡಿದರು.
ನಗರದ ಹೊಸ ಮೇದಾರ ಓಣಿ, ಕಮರಿಪೇಟೆಯಲ್ಲಿ ಡಿಜೆಗೆ ಸಾವಿರಾರು ಯುವಕರು ಕುಣಿದು ಸಂಭ್ರಮಿಸಿದರು. ಇನ್ನು ಮರಾಠಗಲ್ಲಿಯಲ್ಲಿ ಡಿಜೆ, ಸ್ಪಿಂಕ್ಲರ್(ರೇನ್) ನೀರಿನಿಂದ ಹುಮ್ಮಸ್ಸು ಪಡೆಯುತ್ತಿದ್ದ ಯುವಕ-ಯುವತಿಯರು, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ಕುಣಿದು ಕುಪ್ಪಳಿಸಿದರು.ಎಲ್ಲೆಲ್ಲೂ ರಂಗು ರಂಗಿನಾಟ:
ಕಮರಿಪೇಟೆ, ಮರಾಠಾ ಗಲ್ಲಿ, ಮೇದಾರ ಓಣಿ, ಅಂಚಟಗೇರಿ ಓಣಿ, ಚೆನ್ನಪೇಟ, ಅವರಾದಿ ಓಣಿ, ಲತ್ತಿಪೇಟ, ವೀರಾಪುರ ಓಣಿ, ಹೆಗ್ಗೇರಿ, ಶೀಲವಂತರ ಓಣಿ, ಬಂಕಾಪುರ ಚೌಕ್, ನೇಕಾರ ನಗರ, ಜಂಗ್ಲಿಪೇಟ, ಅಕ್ಕಿಪೇಟ, ಇಂಡಿಪಂಪ್ ಬಳಿ, ಹಳೇ ಹುಬ್ಬಳ್ಳಿ, ಆರೂಢ ನಗರ, ಆನಂದ ನಗರ ಸೇರಿದಂತೆ ವಿವಿಧ ಭಾಗದಲ್ಲಿ ಮಕ್ಕಳು, ಮಹಿಳೆಯರು ಮನೆಯ ಮುಂಭಾಗದಲ್ಲಿಯೇ ಭರ್ಜರಿಯಾಗಿ ಓಕುಳಿ ಆಡಿ ಸಂಭ್ರಮಿಸಿದರು. ದುರ್ಗದ ಬೈಲ್, ವಿದ್ಯಾನಗರ, ಗೋಕುಲ ರಸ್ತೆ, ಲೋಹಿಯಾ ನಗರ, ನೆಹರು ನಗರ, ಶಿರೂರ ಪಾರ್ಕ್, ದೇಶಪಾಂಡೆ ನಗರ, ಕೇಶ್ವಾಪುರ, ಲಿಂಗರಾಜ ನಗರ ಸೇರಿ ಹಲವೆಡೆಯೂ ಬಣ್ಣದೋಕುಳಿ ಮೆರಗು ತಂದಿತು. ಇನ್ನು ಇಲ್ಲಿನ ದಾಜಿಬಾನ್ ಪೇಟೆ, ಕುಸುಗಲ್ಲ ರಸ್ತೆ, ಕಮರಿಪೇಟೆ, ನೇಕಾರ ನಗರ ಸೇರಿದಂತೆ ಹಲವೆಡೆ ಮನೆಯ ಚಾವಣಿಯ ಮೇಲೆ ಡಿಜೆ ಹಚ್ಚಿ ಕುಟುಂಬಸ್ಥರೆಲ್ಲರೂ ಪರಸ್ಪರ ಬಣ್ಣ ಎರಚಿದರು.ಮಧ್ಯಾಹ್ನ ರಂಗುಪಡೆದ ಹೋಳಿ:
ಬೆಳಗಾಗುತ್ತಿದಂತೆ ನಗರದ ಕೆಲವು ಪ್ರದೇಶಗಳಲ್ಲಿ ಬಣ್ಣದೋಕುಳಿ ಸಣ್ಣ ಪ್ರಮಾಣದಲ್ಲಿ ಆರಂಭವಾಯಿತು. ಮಧ್ಯಾಹ್ನವಾಗುತ್ತಿದ್ದಂತೆ ರಂಗುಪಡೆದುಕೊಂಡಿತು. ಸುಡು ಬಿಸಿಲಿನಲ್ಲಿ ನಗರದಾದ್ಯಂತ ಸಂಚರಿಸುತ್ತಿದ್ದ ಯುವಕ-ಯುವತಿಯರಿಗೆ ಡಿಜೆ ಸದ್ದು, ರೇನ್ ಡ್ಯಾನ್ಸ್ ಕಾಣುತ್ತಿದ್ದಂತೆ ಅಲ್ಲಿಗೆ ತೆರಳಿ ಕೆಲಕಾಲ ಕುಣಿದು ಕುಪ್ಪಳಿಸಿ ವಾಪಸಾದರು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಆಯ್ದ ಪ್ರದೇಶಗಳಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಕಾಮಣ್ಣರ ಮಹಾಸಂಗಮಇಲ್ಲಿನ ಹಳೇಹುಬ್ಬಳ್ಳಿ ಮತ್ತು ಹೊಸಹುಬ್ಬಳ್ಳಿ ಮೇದಾರ ಸಮಾಜಗಳ ವತಿಯಿಂದ ಶತಶತಮಾನಗಳ ಇತಿಹಾಸವುಳ್ಳ 22 ಅಡಿ ಎತ್ತರದ ಬೃಹತ್ ಆಕಾರದ ಬಿದರಿನ ಕಾಮಣ್ಣನನ್ನು ಪ್ರತಿಷ್ಠಾಪಿಸಲಾಗಿತ್ತು. ಇಲ್ಲಿನ ದುರ್ಗದ ಬೈಯಲಿನಲ್ಲಿ ಶತಶತಮಾನಗಳಿಂದ ಈ ಎರಡೂ ಕಾಮಣ್ಣರ ಮಹಾಸಂಗಮವು ನಡೆದುಕೊಂಡು ಬರುತ್ತಿತ್ತು. ಕಳೆದ 45 ವರ್ಷಗಳಿಂದ ಈ ಮಹಾಸಂಗಮ ನಿಂತುಹೋಗಿತ್ತು. ಆದರೆ, ಈ ಬಾರಿ ಎರಡೂ ಕಾಮಣ್ಣರ ಸಂಗಮ ಕಾರ್ಯಕ್ರಮ ಹೋಳಿಹಬ್ಬಕ್ಕೆ ಮೆರಗು ತಂದಿತು.ಹಿಂದೂ-ಮುಸ್ಲಿಂರ ಹೋಳಿ ಆಚರಣೆ
ನಗರದ ಕಮರಿಪೇಟೆಯಲ್ಲಿ ಶುಕ್ರವಾರ ಹಿಂದೂ-ಮುಸ್ಲಿಂ ಬಾಂಧವರು ಸೇರಿ ಶಾಂತಿ-ಸೌಹಾರ್ದಯುತವಾಗಿ ಹೋಳಿ ಆಚರಿಸಿದರು. ಓಣಿಯ ಹಿಂದೂ ಹಾಗೂ ಮುಸ್ಲಿಂ ಸಮಾಜದ ಪ್ರಮುಖರು ಸೇರಿ ಪರಸ್ಪರ ಮಾಲೆ ಹಾಕಿ, ಬಣ್ಣ ಹಚ್ಚುವ ಮೂಲಕ ಸೌಹಾರ್ದತೆ ತೋರ್ಪಡಿಸಿದರು. ನಗರದ ಕಮರಿಪೇಟೆಗೆ ಭೇಟಿ ನೀಡಿದ ಹು-ಧಾ ಮಹಾನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಸೌಹಾರ್ದ ಹೋಳಿ ಸಂಭ್ರಮಾಚರಣೆಗೆ ಸಾಕ್ಷಿಯಾದರು.ಕಾಮದಹನಕಿತ್ತೂರು ರಾಣಿಚೆನ್ನಮ್ಮ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಯುವಕ-ಯುವತಿಯರು ಪಾಲ್ಗೊಂಡು ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು. ಇನ್ನು ಕೆಲವು ಮಹಿಳೆಯಕು ಬಣ್ಣದಾಟದ ಸೆಲ್ಫಿ ತೆಗೆದುಕೊಂಡರು. ನಗರದ ವಿವಿಧೆಡೆ 5 ದಿನಗಳ ಹಿಂದೆ ಪ್ರತಿಷ್ಠಾಪಿಸಲಾಗಿದ್ದ 484 ರತಿ-ಮನ್ಮಥರ ಮೂರ್ತಿಗಳನ್ನು ಟ್ರ್ಯಾಕ್ಟರ್, ಟಂಟಂ, ತಳ್ಳುಗಾಡಿಗಳಲ್ಲಿ ಮೆರವಣಿಗೆ ಮಾಡಿ ಸಂಜೆ ವಾರ್ಡಿನಲ್ಲಿರುವ ಪ್ರಮುಖ ವೃತ್ತಗಳಲ್ಲಿ ದಹನ ಮಾಡಿದರು.