ರಾಜಕೀಯವಾಗಿ ಮಂಡ್ಯ ರಾಷ್ಟ್ರಮಟ್ಟದಲ್ಲಿ ಹೆಸರನ್ನು ಗಳಿಸಿದೆ. ಅನೇಕ ಮುತ್ಸದ್ಧಿ ರಾಜಕಾರಣಿಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ. ಹಾಗೆಯೇ ಎಚ್.ಕೆ.ವೀರಣ್ಣಗೌಡ, ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗುವ ಸಂದರ್ಭದಲ್ಲಿ ಕ್ಷೇತ್ರದ ಜನರು ಸೋಲುಣಿಸಿದ ಕೀರ್ತಿಯನ್ನೂ ಹೊಂದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯ ಜನರು ತುಂಬಾ ಸೂಕ್ಷ್ಮಮತಿಗಳು. ಯಾವ ಸಮಯದಲ್ಲಿ ಏನು ತೀರ್ಮಾನ ಕೈಗೊಳ್ಳುವರೆಂಬುದನ್ನು ಊಹಿಸುವುದಕ್ಕೂ ಸಾಧ್ಯವಾಗುವುದಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಅಂಬೇಡ್ಕರ್ ಭವನದಲ್ಲಿ ಹನಕೆರೆ ಎಂ.ಶ್ರೀನಿವಾಸ್ ಪ್ರತಿಷ್ಠಾನ ಹಾಗೂ ಕರ್ನಾಟಕ ಸಂಘದಿಂದ ಆಯೋಜಿಸಿದ್ದ ಮಾಜಿ ಶಾಸಕ ಎಂ.ಶ್ರೀನಿವಾಸ್ ೭೫ನೇ ವರ್ಷದ ಪ್ರಯುಕ್ತ ಶ್ರೀನಿಧಿ ಅಭಿನಂದನಾ ಗ್ರಂಥ ಬಿಡುಗಡೆ, ಅರಸಮ್ಮ ಮೆಣಸೇಗೌಡ ಕೃಷಿ ಪ್ರಶಸ್ತಿ, ಎಂ.ಶ್ರೀನಿವಾಸ್ ಸಮಾಜಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ರಾಜಕೀಯವಾಗಿ ಮಂಡ್ಯ ರಾಷ್ಟ್ರಮಟ್ಟದಲ್ಲಿ ಹೆಸರನ್ನು ಗಳಿಸಿದೆ. ಅನೇಕ ಮುತ್ಸದ್ಧಿ ರಾಜಕಾರಣಿಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ. ಹಾಗೆಯೇ ಎಚ್.ಕೆ.ವೀರಣ್ಣಗೌಡ, ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗುವ ಸಂದರ್ಭದಲ್ಲಿ ಕ್ಷೇತ್ರದ ಜನರು ಸೋಲುಣಿಸಿದ ಕೀರ್ತಿಯನ್ನೂ ಹೊಂದಿದೆ. ನಿತ್ಯ ಸಚಿವರೆನಿಸಿಕೊಂಡಿದ್ದ ಕೆ.ವಿ.ಶಂಕರಗೌಡರನ್ನು ಮತ್ತೆ ಗೆಲ್ಲುವುದಕ್ಕೆ ಜನರು ಅವಕಾಶ ನೀಡಲಿಲ್ಲ. ಹಾಗಾಗಿ ಜಿಲ್ಲೆಯೊಳಗೆ ಎಚ್ಚರಿಕೆಯಿಂದ ರಾಜಕಾರಣ ಮಾಡಬೇಕಾದ ಪರಿಸ್ಥಿತಿ ಇದೆ ಎಂದರು.

ಇದರ ನಡುವೆಯೂ ಎಂ.ಶ್ರೀನಿವಾಸ್ ಶಾಸಕರಾಗಿ ಜನಪ್ರಿಯತೆ ಗಳಿಸಿರುವುದು ವಿಶೇಷ. ಸಾಮಾನ್ಯವಾಗಿ ರಾಜಕಾರಣಿಗಳಿಗೆ ಅಸಮಾಧಾನ, ವಿರೋಧವಿರುವುದನ್ನು ನೋಡಿದ್ದೇವೆ. ಆದರೆ, ಎಂ.ಶ್ರೀನಿವಾಸ್ ವಿಚಾರದಲ್ಲಿ ಪಕ್ಷದೊಳಗಾಗಲೀ, ವಿಪಕ್ಷದವರಾಗಲೀ ಹೆಚ್ಚು ಅಸಮಾಧಾನ ತೋಡಿಕೊಂಡಿದ್ದನ್ನು ನಾನು ಗಮನಿಸಿಲ್ಲ. ಅದಕ್ಕಾಗಿ ಜನಪ್ರಿಯ ಶಾಸಕರು ಎನ್ನಬಹುದು ಎಂದರು.

೭೫ ವರ್ಷಗಳ ಸುದೀರ್ಘ ಜೀವನವನ್ನು ಸಮಾಧಾನಕರವಾಗಿ ಮುಗಿಸುವುದು ದೊಡ್ಡ ಸಾಧನೆ. ರಾಜಕೀಯ ಜೀವನದಲ್ಲೂ ಅನೇಕ ಜನಪರ ಕೆಲಸ, ಜನರ ಸೇವೆಯನ್ನು ಮಾಡಿ ಪ್ರೀತಿಯನ್ನು ಸಂಪಾದಿಸಿದ್ದಾರೆ. ಮಂಡ್ಯ ಕ್ಷೇತ್ರದ ಶಾಸಕರಾಗಿ, ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಬಹಳಷ್ಟು ಕೆಲಸ ಮಾಡಿದ್ದಾರೆ. ಜೊತೆಗೆ ಕರ್ನಾಟಕ ಸಂಘದ ಪ್ರಗತಿಗೆ ಪ್ರೊ.ಜಯಪ್ರಕಾಶಗೌಡರಷ್ಟೇ ಕೊಡುಗೆಯನ್ನು ಎಂ.ಶ್ರೀನಿವಾಸ್ ಕೂಡ ನೀಡಿದ್ದಾರೆ. ಸಾಂಸ್ಕೃತಿಕ, ಕಲೆ, ಸಾಹಿತ್ಯ, ಶಿಕ್ಷಣ ಚಟುವಟಿಕೆಗಳ ಕೇಂದ್ರಸ್ಥಾನವಾಗಿ ಹೊರಹೊಮ್ಮುವುದಕ್ಕೂ ಕಾರಣೀಭೂತರಾಗಿದ್ದಾರೆ ಎಂದು ಪ್ರಶಂಸಿಸಿದರು.

ನಾನು ಮತ್ತು ಶ್ರೀನಿವಾಸ್ ಒಟ್ಟಿಗೆ ರಾಜಕೀಯ ಪ್ರವೇಶಿಸಿದೆವು. ಒಂದೇ ಪಕ್ಷದಲ್ಲಿದ್ದೆವು. ಆನಂತರ ಬೇರೆಯಾದವು. ಆದರೆ, ಇದುವರೆಗೂ ನನ್ನ ಮತ್ತು ಶ್ರೀನಿವಾಸ್ ನಡುವೆ ಒಂದೇ ಒಂದು ಭಿನ್ನಾಭಿಪ್ರಾಯ, ಅಸಮಾಧಾನ ಮೂಡಿಲ್ಲ. ನಾನು ಪಕ್ಷ ಬಿಟ್ಟ ನಂತರವೂ ಅವರೊಂದಿಗಿನ ವಿಶ್ವಾಸ, ಸಂಬಂಧ ಉತ್ತಮವಾಗಿದೆ ಎಂದರು.

ಶ್ರೀನಿಧಿ ಪುಸ್ತಕ ಬಿಡುಗಡೆಗೊಳಿಸಿದ ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ಅದಾಯ ತೆರಿಗೆ ಇಲಾಖೆ ಆಯುಕ್ತ ಜಯರಾಂ ರಾಯಪುರ ಮಾತನಾಡಿ, ಶ್ರೀನಿವಾಸ್‌ರವರ ಕಾರ್ಯವ್ಯಾಪ್ತಿ ಬಹಳ ವಿಸ್ತಾರವಾಗಿದೆ. ಚಳವಳಿ ಮೂಲಕ ರಾಜಕೀಯಕ್ಕೆ ಬಂದವರಿಗೂ ಸಾಮಾನ್ಯವಾಗಿ ರಾಜಕೀಯಕ್ಕೆ ಬಂದವರ ನಡುವೆ ಬಹಳ ವ್ಯತ್ಯಾಸವಿದೆ. ರಾಜಕಾರಣದಲ್ಲಿ ನಿತ್ಯ ಸಚಿವ ಕೆ.ವಿ.ಶಂಕರಗೌಡರಂತೆ ಸಭ್ಯ ರಾಜಕಾರಣಿಯಾಗಬೇಕು ಎಂಬ ಆಶಾಭಾವನೆ ಹೊಂದಿದ್ದರು. ಮಂಡ್ಯದ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಕರ್ನಾಟಕ ಸಂಘದ ಬೆನ್ನೆಲುಬಾಗಿ ನಿಂತವರು ಎಂ.ಶ್ರೀನಿವಾಸ್ ಎಂದು ಬಣ್ಣಿಸಿದರು.

ಎಲ್ಲರೂ ಮಂಡ್ಯ ಎಂದರೆ ಇಂಡಿಯಾ ಎನ್ನುತ್ತಾರೆ. ಆದರೆ, ವಾಸ್ತವದಲ್ಲಿ ದೇಶದ ರಾಜಕೀಯ ಒಂದು ಕಡೆ ಸಾಗುತ್ತಿದ್ದರೆ ಮಂಡ್ಯ ರಾಜಕಾರಣ ಮತ್ತೊಂದು ದಿಕ್ಕಿನಲ್ಲಿರುತ್ತದೆ. ಹಾಗಾಗಿ ಇಲ್ಲಿನ ಜಿಲ್ಲೆಯ ರಾಜಕಾರಣವೇ ವಿಭಿನ್ನ ಹಾಗೂ ವೈಶಿಷ್ಟ್ಯಪೂರ್ಣವಾಗಿದೆ ಎಂದರು.

೨೦ ವರ್ಷಗಳ ಕಾಲ ಮಂಡ್ಯ ಜನರೊಂದಿಗೆ ಬೆರೆತು ಕ್ಷೇತ್ರದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವುದರೊಂದಿಗೆ ಎಂ.ಶ್ರೀನಿವಾಸ್ ಜನರ ಪ್ರೀತಿ-ವಿಶ್ವಾಸ ಗಳಿಸಿದರು. ಶ್ರೀನಿಧಿ ಅಭಿನಂದನಾ ಗ್ರಂಥ ಬಹಳ ಮಹತ್ವಪೂರ್ಣವಾಗಿದೆ. ಅದರಲ್ಲಿ ಎಂ.ಶ್ರೀನಿವಾಸ್ ಜೀವನ ಚರಿತ್ರೆ, ಅವರ ಆಪ್ತರ ಅನಿಸಿಕೆ-ಅಭಿಪ್ರಾಯಗಳ ಜೊತೆಗೆ ಮಂಡ್ಯ ಜಿಲ್ಲೆಯ ೧೦೦ಕ್ಕೂ ಹೆಚ್ಚು ರಾಜಕಾರಣಿಗಳ ಸಂಕ್ಷಿಪ್ತ ಜೀವನ ಚರಿತ್ರೆಯನ್ನು ಕಟ್ಟಿಕೊಟ್ಟಿದ್ದಾರೆ. ಸ್ವಾತಂತ್ರ್ಯ ನಂತರ ಜಿಲ್ಲೆಯ ಯಾವುದೇ ಶಾಸಕ, ಸಂಸದ ಸೇರಿದಂತೆ ಯಾವೊಬ್ಬ ರಾಜಕಾರಣಿಯ ಕೊಡುಗೆ ಬಿಟ್ಟುಹೋಗದಂತೆ ನೂರಕ್ಕೂ ಹೆಚ್ಚು ರಾಜಕಾರಣಿಗಳ ವಿವರವನ್ನು ಆಕರ ಗ್ರಂಥವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಬಣ್ಣಿಸಿದರು.

ಎಂ.ಶ್ರೀನಿವಾಸ್ ಎಂದೂ ತಮ್ಮ ರಾಜಕೀಯ ಜೀವನದಲ್ಲಿ ಅಧಿಕಾರ ದಾಹಿಯಾಗಲಿಲ್ಲ. ಮೂರು ಬಾರಿ ಶಾಸಕರಾಗಿ ಗೆದ್ದರೂ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ. ಆದರೂ, ಬೇಸರಗೊಳ್ಳದೆ ಕ್ಷೇತ್ರಕ್ಕೆ ದಕ್ಷ ರೀತಿಯಲ್ಲಿ ಸೇವೆ ಸಲ್ಲಿಸಿ ಉಳಿದ ರಾಜಕಾರಣಿಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂದು ಪ್ರಶಂಸಿಸಿದರು.

ಕಾರ್ಯಕ್ರಮದಲ್ಲಿ ಅರಸಮ್ಮ ಮೆಣಸೇಗೌಡ ಕೃಷಿ ಪ್ರಶಸ್ತಿಯನ್ನು ಪ್ರಗತಿಪರ ಕೃಷಿಕ ಶಿವು ಬನ್ನಹಳ್ಳಿ ಹಾಗೂ ಎಂ.ಶ್ರೀನಿವಾಸ್ ಸಮಾಜಸೇವಾ ಪ್ರಶಸ್ತಿಯನ್ನು ಸಾಹಿತಿ ಡಾ.ಎಸ್.ತುಕಾರಾಮ್ ಅವರಿಗೆ ನೀಡಿ ಗೌರವಿಸಲಾಯಿತು.

ದಿವ್ಯಸಾನ್ನಿಧ್ಯವನ್ನು ಕೆಂಗೇರಿಯ ವಿಶ್ವ ಒಕ್ಕಲಿಗರ ಮಠದ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ವಹಿಸಿದ್ದರು. ಮಾಜಿ ಸಚಿವ ಸಿ.ಎ.ಪುಟ್ಟರಾಜು, ಶಾಸಕ ಪಿ.ರವಿಕುಮಾರ್, ವಿಧಾನಪರಿಷತ್ ಶಾಸಕ ಮಧು ಜಿ.ಮಾದೇಗೌಡ, ಮಾಜಿ ಶಾಸಕರಾದ ಎಂ.ಶ್ರೀನಿವಾಸ್, ಕೆ.ಟಿ.ಶ್ರೀಕಂಠೇಗೌಡ, ಬಿ.ರಾಮಕೃಷ್ಣ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಹನಕೆರೆ ಎಂ.ಶ್ರೀನಿವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಸ್.ಶಿವರಾಮು, ತಗ್ಗಹಳ್ಳಿ ವೆಂಕಟೇಶ್, ಲೋಕೇಶ್ ಚಂದಗಾಲು ಮತ್ತಿತರರಿದ್ದರು.