ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದಲ್ಲಿ ಶನಿವಾರ ನಡೆದ ಜನಸ್ಪಂದನಾ ಸಭೆಗೆ ನಾಗರಿಕರು ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ತಾಲೂಕಿನಲ್ಲಿ ಇರುವ ೩೨ ಇಲಾಖೆಗಳ ಪೈಕಿ ೪ ಇಲಾಖೆ ಸಂಬಂಧಿಸಿದಂತೆ ಕೇವಲ ೧೨ ಅರ್ಜಿಗಳನ್ನು ಮಾತ್ರ ನೊಂದವರು ನೀಡಿದ್ದು, ಈ ರೀತಿಯ ಸಭೆಯ ಅಗತ್ಯತೆ ಇದೆಯಾ ಎಂದು ಪ್ರಶ್ನಿಸುವಂತಹ ಸನ್ನಿವೇಶದ ಜತೆಗೆ ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಿದೆ.

ಪಟ್ಟಣದ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಅಧ್ಯಕ್ಷತೆಯಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ತಹಸೀಲ್ದಾರ್‌ ವೈ. ಎಂ. ರೇಣುಕುಮಾರ್‌ ಮಾತನಾಡಿ, ಜನಸ್ಪಂದನಾ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ೬ ಅರ್ಜಿಗಳು, ಪುರಸಭೆಗೆ ಸಂಬಂಧಿಸಿದಂತೆ ೪ ಅರ್ಜಿಗಳು, ಕೃಷಿ ಇಲಾಖೆ ಸಂಬಂಧಿಸಿದಂತೆ ೧ ಮತ್ತು ಹೇಮಾವತಿ ನೀರಾವರಿ ಇಲಾಖೆ ಸಂಬಂಧಿಸಿದಂತೆ ೧ ಅರ್ಜಿ ಸಲ್ಲಿಕೆಯಾಗಿದ್ದು, ಒಟ್ಟು ೧೨ ಅರ್ಜಿಗಳು ಸಲ್ಲಿಕೆಯಾಗಿದೆ. ಇಲಾಖಾವಾರು ಲಭ್ಯವಾದ ಅರ್ಜಿಗಳ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ವರದಿ ನೀಡುವ ಜತೆಗೆ ಅಧಿಕಾರಿಗಳು ಜನರಿಂದ ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲನೆ ನಡೆಸಿ, ನಿಯಮದಂತೆ ಇತ್ಯರ್ಥ ಪಡಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.