ಮಹಾದೇವ ತಾತಾ ಗ್ಯಾಸ್ ಏಜೆನ್ಸಿ ಮುಂದೆ ಬೆಳಗಿನಿಂದಲೇ ಜನ ಸಿಲಿಂಡರ್‌ಗಾಗಿ ಸರದಿ ಸಾಲಿನಲ್ಲಿ ನಿಂತು ಖರೀದಿಗೆ ಮುಂದಾಗಿದ್ದಾರೆ.
ಹೂವಿನಹಡಗಲಿ: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಗ್ಯಾಸ್ ಸಿಲಿಂಡರ್ ಅಭಾವವಾಗುತ್ತದೆ ಎಂಬ ಭಯದಲ್ಲಿ ರಣಬಿಸಿಲು ಲೆಕ್ಕಿಸದೇ ಗ್ರಾಹಕರು ಸರದಿ ಸಾಲಿನಲ್ಲಿ ನಿಂತು ಖರೀದಿಗೆ ಮುಗಿ ಬಿದ್ದಿದ್ದಾರೆ.
ಪಟ್ಟಣದಲ್ಲಿರುವ ಮಹಾದೇವ ತಾತಾ ಗ್ಯಾಸ್ ಏಜೆನ್ಸಿ ಮುಂದೆ ಬೆಳಗಿನಿಂದಲೇ ಜನ ಸಿಲಿಂಡರ್‌ಗಾಗಿ ಸರದಿ ಸಾಲಿನಲ್ಲಿ ನಿಂತು ಖರೀದಿಗೆ ಮುಂದಾಗಿದ್ದಾರೆ. ಜನರಿಗೆ ಸಿಲಿಂಡರ್ ಸಿಗುತ್ತೋ ಇಲ್ಲವೋ ಎಂಬ ಆತಂಕದಲ್ಲಿರುವ ಗ್ರಾಹಕರು, ಸಿಲಿಂಡರ್ ಖರೀದಿಗೆ ಗ್ರಾಮೀಣ ಪ್ರದೇಶದಿಂದ ಬರುತ್ತಿದ್ದಾರೆ.ಪಟ್ಟಣದ ಬಹುತೇಕ ಆಟೋಗಳಲ್ಲಿ ವಾಣಿಜ್ಯ ಸಿಲಿಂಡರ್ ಬಳಕೆ ಬದಲು ಗೃಹ ಬಳಕೆಯ ಸಿಲಿಂಡರ್ ಗಳನ್ನು ಅಳವಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಿಲಿಂಡರ್ ಬೇಡಿಕೆ ಹೆಚ್ಚಾಗುತ್ತಿದೆ ಎಂಬ ದೂರು ಕೇಳಿ ಬರುತ್ತಿದೆ. ಗ್ಯಾಸ್ ಸಿಲಿಂಡರ್ ಗಳು ಹೋಟೆಲ್‌ಗಳಿಗೆ, ವಸತಿ ಶಾಲೆಗಳಿಗೆ, ಹಾಸ್ಟೆಲ್‌ಗಳಿಗೆ, ಸರ್ಕಾರಿ ಶಾಲೆಯಲ್ಲಿ ನಡೆಯುವ ಬಿಸಿಯೂಟ ತಯಾರಿಕೆಗೆ ಕೊರತೆ ಕಾಡುತ್ತಿಲ್ಲ. ಇನ್ನು ಮೈಲಾರಲಿಂಗೇಶ್ವರ ಮತ್ತು ಕುರುವತ್ತಿ ಬಸವೇಶ್ವರ ದೇವಸ್ಥಾನಗಳಲ್ಲಿ, ನಡೆಯುವ ಪ್ರಸಾದ ವ್ಯವಸ್ಥೆಗೆ ಸಿಲಿಂಡರ್ ಕೊರತೆ ಕಂಡು ಬಂದಿಲ್ಲ. ಇಂದಿರಾ ಕ್ಯಾಂಟೀನ್‌ಗಳಲ್ಲಿ ಸಿಲಿಂಡರ್ ಕೊರತೆ ಸದ್ಯಕ್ಕಿಲ್ಲ. ಸಿಲಿಂಡರ್ ಅಭಾವ ಆತಂಕದ ನಡುವೆ ಗ್ರಾಮೀಣ ಪ್ರದೇಶಗಳ ಜನರಿಗೆ ಗ್ಯಾಸ್ ಏಜೆನ್ಸಿಗಳು ಮನೆ ಮನೆಗೆ ಸಿಲಿಂಡರ್ ಗಳನ್ನು ವಿತರಣೆ ಮಾಡುತ್ತಿದ್ದಾರೆ.
ತಾಲೂಕಿನ ಎಲ್ಲ ಗ್ಯಾಸ್ ಏಜೆನ್ಸಿಗಳಲ್ಲಿ ಸಿಲೆಂಡರ್ ದಾಸ್ತಾನು ಇದೆ. ಯಾವುದೇ ಸಮಸ್ಯೆ ಇಲ್ಲ. ಎಲ್ಲ ಗ್ರಾಹಕರಿಗೂ ಸಮಯಕ್ಕೆ ಸರಿಯಾಗಿ ಸಿಲಿಂಡರ್ ಸಿಗುತ್ತಿದೆ. ಸದ್ಯಕ್ಕಂತೂ ತೊಂದರೆ ಇಲ್ಲ ಎನ್ನುತ್ತಾರೆ ಹೂವಿನಹಡಗಲಿ ಆಹಾರ-ನಾಗರಿಕ ಸರಬರಾಜು ಇಲಾಖೆ ನಿರೀಕ್ಷಕಿ ಭಾರತಿ.