ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಸ್ವಚ್ಛತೆ ಕಾಪಾಡುವಲ್ಲಿ ಸಾರ್ವಜನಿಕರ ಸಹಕಾರವೂ ಅತೀ ಮುಖ್ಯ ಎಂದು ಪುರಸಭೆ ಮುಖ್ಯಾಧಿಕಾರಿ ಹೇಳಿದರು.ಪಟ್ಟಣದ ಪುರಿಭಟ್ಟಿ ಬೀದಿ ಹಾಗೂ ಮೀನು ಮಾರ್ಕೆಟ್ ಬಳಿ ಪುರಸಭೆ ವತಿಯಿಂದ ಸೊಳ್ಳೆ ಕ್ರಿಮಿನಾಶಕ ಸಿಂಪಡಿಸಲಾಯಿತು. ನಂತರ ಮಾತನಾಡಿದ ಅವರು, ಮಳೆಗಾಲ ಸಮೀಪಿಸುತ್ತಿರುವುದರಿಂದ ಡೆಂಘೀ, ಮಲೇರಿಯಾ ಇನ್ನಿತರ ಕಾಯಿಲೆಗಳು ಹೆಚ್ಚಾಗಿ ವ್ಯಾಪಿಸುತ್ತಿದ್ದು, ಕೂಡಲೇ ತಮ್ಮ ಅಕ್ಕ ಪಕ್ಕದಲ್ಲಿ ಇರುವ ಜಾಗಗಳಲ್ಲಿ ನೀರು ನಿಲ್ಲದಂತೆ ಸ್ವಚ್ಛವಾಗಿಟ್ಟುಕೊಳ್ಳಬೇಕು. ಪ್ರತಿನಿತ್ಯ ೨೩ ವಾರ್ಡ್ ಗಳಲ್ಲಿ ನಮ್ಮ ಪೌರ ಕಾರ್ಮಿಕರು ಸ್ವಚ್ಛತೆ ಮಾಡುತ್ತಿದ್ದರೂ ಸಾರ್ವಜನಿಕರು ಹಾಗೂ ಸ್ಥಳೀಯ ನಿವಾಸಿಗಳು ಕಸವನ್ನು ಚರಂಡಿ ಇನ್ನಿತರ ಕಡೆ ಹಾಕುವ ಮೂಲಕ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದ್ದಾರೆ. ಈಗಾಗಲೇ ನೌಕರರಿಗೆ ಪ್ರತಿನಿತ್ಯ ನೀರನ್ನು ಸರಬರಾಜು ಮಾಡಲು ಸೂಚಿಸಲಾಗಿದ್ದು, ನೀರನ್ನು ಡ್ರಮ್ ಹಾಗೂ ಟ್ಯಾಂಕ್ ಗಳಲ್ಲಿ ಶೇಖರಣೆ ಮಾಡದಂತೆ ಎಚ್ಚರ ವಹಿಸಬೇಕು. ಅಲ್ಲದೇ ದಿನದಿಂದ ದಿನಕ್ಕೆ ಪಟ್ಟಣದ ಕೆಲವು ವಾರ್ಡ್‌ಗಳಲ್ಲಿ ಡೆಂಘೀ ಪ್ರಕರಣಗಳು ವ್ಯಾಪಕವಾಗುತ್ತಿದ್ದು, ಅವುಗಳನ್ನು ನಿಯಂತ್ರಿಸಲು ಎಲ್ಲ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಆರೋಗ್ಯ ಇಲಾಖೆ ನಮ್ಮ ಜೊತೆ ಕೈ ಜೋಡಿಸುವಂತೆ ಮನವಿ ಮಾಡಿದರು.
ಆರೋಗ್ಯಾಧಿಕಾರಿ ಲೋಹಿತ್ ಮಾತನಾಡಿ, ಮುಖ್ಯಾಧಿಕಾರಿಗಳ ಆದೇಶದ ಮೇರೆಗೆ ಹಾಗೂ ಸಾರ್ವಜನಿಕರ ಮನವಿಯಂತೆ ಪುರಸಭೆಯ ಎಲ್ಲಾ ೨೩ ವಾರ್ಡ್ ಗಳಲ್ಲಿ ಸೊಳ್ಳೆ ನಿಯಂತ್ರಿತ ಕ್ರಿಮಿನಾಶಕವನ್ನು ಸಿಂಪಡಿಸಿದ್ದು, ಸಾರ್ವಜನಿಕರ ಸಹಕಾರ ಅತಿಮುಖ್ಯ. ಕೆಲವು ವಾರ್ಡ್ ಗಳಲ್ಲಿ ತ್ಯಾಜ್ಯ ಹಾಗೂ ಇನ್ನಿತರ ವಸ್ತುಗಳನ್ನು ಚರಂಡಿಗೆ ಹಾಕುತ್ತಿರುವುದರಿಂದ ಕಸ ಶೇಖರಣೆಯಾಗಿ ಸೊಳ್ಳೆಗಳ ಉತ್ಪತ್ತಿಯಾಗುತ್ತಿದೆ. ಯಾರೂ ಚರಂಡಿಗೆ ಕಸ ಹಾಕದೆ ಪುರಸಭೆಯಿಂದ ಬರುವ ವಾಹನಗಳಿಗೆ ಹಾಕುವಂತೆ ಮನವಿ ಮಾಡಿದರಲ್ಲದೇ ನಮ್ಮ ಪೌರಕಾರ್ಮಿಕರಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.ಪುರಸಭೆಯ ಸದಸ್ಯ ಅಕ್ರಂ, ಆದಿನಾರಾಯಣ್ ಹಾಗೂ ಪುರಸಭೆ ನೌಕರರಾದ ವಿಶ್ವನಾಥ್, ಹರೀಶ್, ಓಬಳೇಶ್ ಇತರರು ಹಾಜರಿದ್ದರು.