ಡೆಂಘೀ ನಿಯಂತ್ರಣಕ್ಕೆ ಜನರ ಸಹಕಾರ ಮುಖ್ಯ: ಮೀನಾ ನಾಗರಾಜ್

| Published : Jul 06 2024, 12:49 AM IST

ಸಾರಾಂಶ

ಚಿಕ್ಕಮಗಳೂರು, ಡೆಂಘೀ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಎಲ್ಲಾ ರೀತಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಜನಸಾಮಾನ್ಯರು ಕೂಡ ತಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್ ಮನವಿ ಮಾಡಿದರು.

ದೋಣಿಖಣ ಬಡಾವಣೆಯಲ್ಲಿ ಮನೆ ಮನೆಗಳಿಗೆ ತೆರಳಿ ಡೆಂಘೀ ಬಗ್ಗೆ ಜಾಗೃತಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಡೆಂಘೀ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಎಲ್ಲಾ ರೀತಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಜನಸಾಮಾನ್ಯರು ಕೂಡ ತಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್ ಮನವಿ ಮಾಡಿದರು. ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಡೆಂಘೀ ಜಾಗೃತಿ ಅಂಗವಾಗಿ ಶುಕ್ರವಾರ ನಗರದ 6 ವಾರ್ಡ್‌ನ ದೋಣಿ ಖಣ ಬಡಾವಣೆಯಲ್ಲಿ ಮನೆ ಮನೆಗಳಿಗೆ ತೆರಳಿ ಸಾರ್ವಜನಿಕರನ್ನು ಭೇಟಿ ನೀಡಿದ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಾದ್ಯಂತ ಡೆಂಘೀ ಪ್ರಕರಣಗಳಲ್ಲಿ ಬೆಂಗಳೂರು ಹೊರತುಪಡಿಸಿ, ಅತಿ ಹೆಚ್ಚು ಪ್ರಕರಣ ದಾಖಲಾಗಿರುವುದು ಈ ಜಿಲ್ಲೆಯಾಗಿದ್ದು, ಆರೋಗ್ಯ ಸಚಿವರ ಸೂಚನೆಯಂತೆ ಡೆಂಘೀ ತಡೆಗಟ್ಟಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಈಗಾಗಲೇ ಜಿಲ್ಲಾಡಳಿತ ಎಲ್ಲಾ ತಾಲೂಕುಗಳಲ್ಲಿ ಏಕಕಾಲದಲ್ಲಿ ಡೆಂಘೀ ಸೊಳ್ಳೆ ನಿಯಂತ್ರಣಕ್ಕೆ ಲಾರ್ವಾ ಸರ್ವೆ ಸೇರಿ ದಂತೆ ಸಾಕಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಪ್ರತಿ ಶುಕ್ರವಾರ ಹಾಗೂ ಶನಿವಾರ ಗ್ರಾಮ ಪಂಚಾಯಿತಿ ಯಿಂದ ನಗರ ಪ್ರದೇಶದ ಎಲ್ಲಾ ಕಡೆ ಸ್ವಚ್ಛತಾ ದಿನ ಎಂಬ ಕಾರ್ಯಕ್ರಮದಡಿ ಜನಸಾಮಾನ್ಯರಿಗೆ ಅರಿವು ಮೂಡಿಸ ಲಾಗುತ್ತಿದೆ ಎಂದರು. ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಕಾರ್ಯಕರ್ತರೊಂದಿಗೆ ಪ್ರತಿ ಮನೆ ಮನೆಗೆ ತೆರಳಿ ಚರಂಡಿ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವಂತೆ, ನೀರು ಸಂಗ್ರಹವಾಗದಂತೆ ಮುಂಜಾಗ್ರತೆ ವಹಿಸಿ ಟ್ಯಾಂಕ್, ಡ್ರಮ್, ನೀರು ಗುಂಡಿಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಸುರಕ್ಷಿತ ಕ್ರಮ ಅನುಸರಿಸುವಂತೆ ತಿಳುವಳಿಕೆ ಮೂಡಿಸಲಾಗಿದೆ ಎಂದು ತಿಳಿಸಿದರು. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯೊಂದಿಗೆ ನಾಗರಿಕರು ಕೈ ಜೋಡಿಸಿದಾಗ ಇಂತಹ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸಾಧ್ಯ. ಆರೋಗ್ಯ ಇಲಾಖೆ ಸೂಚನೆಯಂತೆ ತಮ್ಮ ಮನೆಗಳ ಸುತ್ತ ಸುತ್ತಮುತ್ತಲ ಪರಿಸರ ಸ್ವಚ್ಛ ವಾಗಿಟ್ಟುಕೊಳ್ಳುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್‌ಬಾಬು, ತಾಲೂಕು ಆರೋಗ್ಯಾಧಿಕಾರಿ ಡಾ. ಸೀಮಾ, ಡಾ. ಬಾಲಕೃಷ್ಣ, ಡಾ. ಮಂಜುನಾಥ್, ಡಾ. ಭರತ್, ಡಾ. ನಾಗರಾಜ್, ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್, ಡಾ. ದಿವ್ಯಶ್ರೀ ಇದ್ದರು.

ಪೋಟೋ ಫೈಲ್‌ ನೇಮ್‌ 5 ಕೆಸಿಕೆಎಂ 4ಚಿಕ್ಕಮಗಳೂರಿನ ಡೋಣಿ ಖಣ ಬಡಾವಣೆಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಶುಕ್ರವಾರ ಮನೆ ಮನೆಗಳಿಗೆ ತೆರಳಿ ನೀರು ಸಂಗ್ರಹ ಪರಿಶೀಲಿಸಿ ಡೆಂಗ್ಯು ಜ್ವರದ ಬಗ್ಗೆ ಜಾಗೃತಿ ಮೂಡಿಸಿದರು.

-----------------------------------