ಸಾರಾಂಶ
ಬಸವರಾಜ ಮಠದ
ಕನ್ನಡಪ್ರಭ ವಾರ್ತೆ ಇಳಕಲ್ಲಬೇಸಿಗೆ ತಾಪ ಏರಿಕೆಯಾಗುತ್ತಿದೆ. ಈ ತಾಪಕ್ಕೆ ಅಂತರ್ಜಲ ಪಾತಾಳ ಕಂಡರೆ ನದಿ, ಕೆರೆ ಕಟ್ಟೆಗಳಲ್ಲಿ ಸಂಗ್ರಹವಾಗಿದ್ದ ನೀರು ಕೂಡ ಕ್ಷೀಣವಾಗುತ್ತಾ ಹೋಗುತ್ತಿದೆ. ಪರಿಣಾಮ ಜನರಿಗೆ ಮತ್ತು ದನ ಕರುಗಳಿಗೆ ನೀರಿನ ಹಾಹಾಕಾರ ಉದ್ಭವವಾಗುತ್ತಿದೆ. ಬೇಸಿಗೆ ಇನ್ನೂ 2 ತಿಂಗಳಿದೆ. ಅಷ್ಟರಲ್ಲೇ ಕುಡಿವ ನೀರಿಗೆ ಇಳಕಲ್ಲ ಜನರು ತತ್ವಾರ ಅನುಭವಿಸುತ್ತಿದ್ದಾರೆ. ಹಣ ಕೊಟ್ಟು ನೀರು ಖರೀದಿಸಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಆದರೆ, ಬಡವರ, ಕೂಲಿಕಾರರ, ಶ್ರಮಿಕರ ಪರಿಸ್ಥಿತಿ ಮಾತ್ರ ಹೇಳತೀರದು.
ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ನದಿಗಳ ಸಂಗಮದ ಒಡಲನ್ನೇ ಪಕ್ಕದಲ್ಲಿಯೇ ಹೊಂದಿರುವ ಇಳಕಲ್ಲ ನಗರಕ್ಕೆ ಈಗ ಕುಡಿಯುವ ನೀರಿಗೂ ತತ್ವಾರ ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿಗಾಗಿ ಹಗಲು ರಾತ್ರಿ ಎನ್ನದೇ ಪರದಾಡಬೇಕಾದ ಅನಿವಾರ್ಯತೆ ಈಗ ಸೃಷ್ಟಿಯಾಗಿದ್ದು ಮಾತ್ರ ಸೋಜಿಗ.ಪಕ್ಕದಲ್ಲಿಯೇ ಮೂರು ನದಿಗಳ ಸಂಗಮವಾಗಿದ್ದರೂ ಕುಡಿಯುವ ನೀರಿಗೆ ಇಳಕಲ್ಲ ನಗರದ ಜನತೆ ಎದುರುನೋಡಬೇಕಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕಿತ್ತು. ಆದರೆ, ಅವರಿಗೂ ಈಗ ಬೇಸಿಗೆ ಕಾಲದ ಪ್ರಮುಖ ಬೇಡಿಕೆಯಾದ ಕುಡಿಯುವ ನೀರು ಪೂರೈಕೆಗೂ ಸಮಯವನ್ನೇ ನೀಡುತ್ತಿಲ್ಲ ಎಂಬ ಆರೋಪ ಸಾರ್ವಜನಿಕರದ್ದು.
ಸಮರ್ಪಕವಾಗಿ ಪೂರೈಕೆಯಾಗದ ನೀರು: ಕುಡಿಯುವ ನೀರಿಗೆ ಎಂದಿಗೂ ಬಾಧೆ ಬರುವುದಿಲ್ಲ ಎಂದೇ ಇಳಕಲ್ಲ ನಗರ ಜನತೆ ಭಾವಿಸಿದ್ದರು. ಆದರೆ, ಈ ಬಾರಿ ಸಾಕಷ್ಟು ಪ್ರಮಾಣದ ಮಳೆಯಾಗಿದ್ದರೂ ಜಲಬಾಧೆ ಉಂಟಾಗಿರುವುದು ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ನಗರ ಸಭೆಯ ಬೇಜವಾಬ್ದಾರಿತನ ಎಂದರೆ ತಪ್ಪಾಗಲಾರದು. ಸರ್ಕಾರ ನಗರಕ್ಕೆ ೨೪-೭ ಕುಡಿಯುವ ನೀರಿನ ಯೋಜನೆ ಮಂಜೂರು ಮಾಡಿ ಸಮರ್ಪಕ ನೀರು ಪೂರೈಸಿದ ಪರಿಣಾಮ ಜನರಿಗೆ ನೀರಿನ ಭವಣೆಯಿಂದ ಪಾರಾಗಿದ್ದರು. ಆದರೆ ಈಗ ನಗರಸಭೆಯ ಅಧಿಕಾರಗಳು ಬೇಜವಾಬ್ದಾರಿ ತೋರುತ್ತಿರುವುದು ಸಮರ್ಪಕವಾಗಿ ನೀರು ಪೂರೈಕೆಯಲ್ಲಿ ವಿಫಲವಾಗಿದ್ದಾರೆ ಎಂಬ ಆರೋಪ ಸಾರ್ವಜನಿಕರದ್ದು. ಹೀಗಾಗಿಯೇ ಜನರು ಕುಡಿಯುವ ನೀರಿಗಾಗಿ ನಿತ್ಯ ಪರದಾಟ ನಡೆಸಿದ್ದಾರೆ. ನೀರಿನ ಬಿಲ್ ಮಾತ್ರ ಸರಿಯಾದ ಸಮಯಕ್ಕೆ ಬರುತ್ತಿದೆ. ಬಿಲ್ ಕಟ್ಟದಿದ್ದರೆ ನಳಗಳಿಗೆ ನೀರು ಪೂರೈಕೆಯನ್ನೇ ಸ್ಥಗಿತದಂತಹ ನಿರ್ಣಯ ಕೈಗೊಳ್ಳುವ ಅಧಿಕಾರಿಗಳು, ನೀರು ಕೊಡದೇ ಬಿಲ್ ಹೇಗೆ ನೀಡುತ್ತಿದ್ದಾರೆ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಕುಡಿಯಲು ಸಮರ್ಪಕವಾಗಿ ನೀರು ಕೂಡ ಸಿಗುತ್ತಿಲ್ಲ ಎಂದು ಸಾರ್ವಜನಿಕರು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆ ಆಗಬಾರದು ಎಂದು ರಾಜ್ಯಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಇಳಕಲ್ಲ ನಗರದ ಜನಸಂಖ್ಯೆಯಲ್ಲಿ ಶೇ.80ರಷ್ಟು ಬಡ ನೇಕಾರರೇ ಇದ್ದಾರೆ. ಮನೆಯಲ್ಲಿ ಕುಡಿಯುವ ನೀರು ಸಂಗ್ರಹ ಮಾಡಿಕೊಳ್ಳಲು ನೀರಿನ ಟ್ಯಾಂಕ್, ಅಥವಾ ಸಿಂಟೆಕ್ಸ್‌ಗಳು ಇಲ್ಲ. ಕೊಡಗಳಲ್ಲಿ ಒಂದೆರಡು ದಿನಕ್ಕೆ ಸಾಕಾಗುವಷ್ಟು ನೀರನ್ನು ಸಂಗ್ರಹ ಮಾಡಿಕೊಳ್ಳುತ್ತಾರೆ.
ಆದರೆ, ಈಗಿನ ಪರಿಸ್ಥಿತಿಯೇ ಬೇರೆಯಾಗಿದೆ. ಹತ್ತು ದಿನಗಳಾದರೂ ಕುಡಿಯುವ ನೀರು ಸರಬರಾಜು ಆಗದಿರುವುದು ಜನರ ನಿದ್ದೆಗೆಡಿಸಿದೆ. ಈ ರೀತಿ ಹತ್ತಾರು ದಿನಗಳಿಗೆ ನೀರು ಪೂರೈಸಿದರೆ ಹೇಗೆ ನೀರು ಸಂಗ್ರಹಿಸಬೇಕು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ನೀರು ಸರಬರಾಜು ನೌಕರರನ್ನು ಕೇಳಿದರೆ ಇಂದು ಬಿಡುತ್ತೇವೆ, ನಾಳೆ ಬಿಡುತ್ತೇವೆ ಎಂದು ಹಾರಿಕೆ ಉತ್ತರ ನೀಡಿ ಜನರನ್ನು ಸಾಗ ಹಾಕುತ್ತಿದ್ದಾರೆ. ಇವರ ಮಾತು ನಂಬಿ ಜನರು ಕೆಲಸ ಕಾರ್ಯ ಬಿಟ್ಟು ಕೊಡಗಳು, ಬಕೆಟ್ ಹಿಡಿದು ಪರದಾಡುವಂತಾಗಿದೆ. ಆದರೆ, ಇದಕ್ಕಾಗಿ ಉದ್ಯೋಗವನ್ನು ಕೂಡ ಸರಿಯಾಗಿ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಶ್ರಮಿಕರು.ಅಧಿಕಾರಿಗಳು, ನೌಕರರು, ಶ್ರೀಮಂತರು ಕೊಂಡು ನೀರು ಕುಡಿಯುತ್ತಾರೆ. ಆದರೆ, ಬಡವರು ಕೂಲಿ ಕೆಲಸ ಬಿಟ್ಟು ನೀರಿಗಾಗಿ ಕಾಯುವುದರಿಂದ ನಿತ್ಯದ ಜೀವನಕ್ಕೂ ತೊಂದರೆ ಆಗಿದೆ. ನಗರಸಭೆ ಅಧಿಕಾರಿಗಳು ಜನರ ಭವಣೆ ತಪ್ಪಿಸಲು ಮುಂದಾಗಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.