ಕನ್ನಡಪ್ರಭ ವಾರ್ತೆ ಹನೂರು
ಬೇಸಿಗೆಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ತಾಲೂಕಿನ ಮಲೆ ಮಾದೇಶ್ವರ ಬೆಟ್ಟದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲೆ ಮಾದೇಶ್ವರ ವನ್ಯಜೀವಿ ವಲಯದ ಅರಣ್ಯ ಪ್ರದೇಶದ ಮಧ್ಯಭಾಗದಲ್ಲಿರುವ ಪಡಸಲನತ್ತ ಗ್ರಾಮ( ಹಾಡಿ) ದಲ್ಲಿ ಕುಡಿಯುವ ನೀರಿಗಾಗಿ ಪರದಾಡುವಂತಹ ಪರಿಸ್ಧಿತಿ ನಿರ್ಮಾಣವಾಗಿದೆ.ಅರಣ್ಯ ಪ್ರದೇಶದ ಈ ಕುಗ್ರಾಮದಲ್ಲಿ 80ಕ್ಕೂ ಹೆಚ್ಚು ಕುಟುಂಬಗಳಿದ್ದು, 300ಕ್ಕೂ ಹೆಚ್ಚು ಜನರಿದ್ದಾರೆ. ಬಿರು ಬಿಸಿಲಿಗೆ ತತ್ತರಿಸಿರುವ ಇಲ್ಲಿನ ಜನತೆ ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ.
ಜಲಜೀವನ್ ಮಿಷನ್ ಸಂಪೂರ್ಣ ವಿಫಲ: ಗ್ರಾಮದಲ್ಲಿ ಜಲಜೀವನ್ ಮಿಷನ್ ಕಾಮಗಾರಿಗೆ ಹಳ್ಳ ಹಿಡಿದಿದ್ದು, ಇಲ್ಲಿನ ಗ್ರಾಮ ಪಂಚಾಯಿತಿ ಅಧಿಕಾರಿ, ಸದಸ್ಯರು ಜಲಜೀವನ್ ಮಿಷನ್ ಮೂಲಕ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ವಿಫಲರಾಗಿದ್ದು, ಸಮಸ್ಯೆ ಪರಿಹರಿಸುವಂತೆ ಮಹಿಳೆಯರು ಹಾಡಿಯಲ್ಲಿ ಬರುವ ತೋಡುಬಾವಿಯ ಮುಂದೆ ನಿಂತು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.ಕುಡಿಯಲು ನೀರನ್ನು ಸೋಸಿ ಸಂಗ್ರಹಕ್ಕೆ ಮುಂದಾದ ಮಹಿಳೆಯರು:
ಗ್ರಾಮದಲ್ಲಿ ಇರುವ ತೋಡು ಬಾವಿಯಲ್ಲಿ ಅಲ್ಪ- ಸ್ವಲ್ಪ ನೀರನ್ನು ಮಹಿಳೆಯರು ತೆಗೆಯುವ ಮೂಲಕ ಸಿಗುವ ಕಲುಷಿತ ನೀರನ್ನೇ ಸೋಸಿಕೊಂಡು ಕುಡಿಯುವಂಥ ಪರಿಸ್ಥಿತಿ ಉಂಟಾಗಿದೆ. ಜನಪ್ರತಿನಿಧಿ, ಅಧಿಕಾರಿಗಳು ಚುನಾವಣಾ ಸಂದರ್ಭದಲ್ಲಿ ನೀಡುವ ಭರವಸೆ ಹುಸಿಯಾಗಿದೆ ಎಂದು ನೀರಿಗಾಗಿ ಪರದಾಡುತ್ತಿರುವ ಹಾಡಿಯ ಜನರು ಆಕ್ರೋಶ ಹೊರಹಾಕಿದ್ದಾರೆ .
--
ಜನಪ್ರತಿನಿಧಿಗಳು ಚುನಾವಣಾ ಸಮಯದಲ್ಲಿ ಕೊಡುವ ಭರವಸೆ ಹುಸಿಯಾಗಿದೆ. ಕುಡಿಯುವ ನೀರಿಗಾಗಿ 3 ಕಿಮೀ ದೂರ ಹೋಗಿ ಬರಬೇಕಾಗಿದೆ, ಬಾವಿಯಲ್ಲಿ ನೀರು ಬತ್ತಿ ಹೋಗುತ್ತಿದೆ. ಇರುವ ನೀರನ್ನು ಸಂಗ್ರಹ ಮಾಡಿ ಸೋಸಿಕೊಂಡು ಕಲುಷಿತ ನೀರನ್ನೇ ಕುಡಿಯುವ ಪರಿಸ್ಥಿತಿ ಹಾಡಿಯ ಜನರಿಗೆ ಬಂದೊದಗಿದೆ.ಭಾಗ್ಯಮ್ಮ, ಪಡಸಲನತ್ತ
--ಗ್ರಾಮದಲ್ಲಿ ಅಲ್ಲೊಂದು ಇಲ್ಲೊಂದು ಮನೆ ಇರುವುದರಿಂದ ಇರುವ ಒಂದು ಸೋಲಾರ್ ಪಂಪ್ ನಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ, ಬೇಸಿಗೆ ಆಗಿರುವುದರಿಂದ ನೀರಿನ ಸಮಸ್ಯೆಯ ತೀವ್ರತೆ ಹೆಚ್ಚಾಗಿದೆ. ಅದನ್ನು ಸರಿಪಡಿಸಲು ಜಲಜೀವನ್ ಮಿಷನ್ ಅಧಿಕಾರಿಗಳು ಗ್ರಾಮದಲ್ಲಿ ಬೋರ್ವೆಲ್ ಕೊರೆದು ನೀರಿನ ವ್ಯವಸ್ಥೆಗೆ ಮುಂದಾಗಬೇಕಾಗಿದೆ. ಹಲವಾರು ಬಾರಿ ಅವರಿಗೆ ಸಮಸ್ಯೆ ಬಗ್ಗೆ ಮನದಟ್ಟು ಮಾಡಲಾಗಿದೆ, ಈ ಕುರಿತು ಹಿರಿಯ ಅಧಿಕಾರಿಗಳಿಗೂ ಸಹ ತಿಳಿಸಲಾಗಿದೆ, ಮತ್ತೊಮ್ಮೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು.
ಕಿರಣ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮಲೆ ಮಾದೇಶ್ವರ ಬೆಟ್ಟ.--
ಪಡಸಲನತ್ತ ಗ್ರಾಮದಲ್ಲಿ ಕುಡಿಯವ ನೀರಿನ ಸಮಸ್ಯೆ ಇರುವ ಬಗ್ಗೆ ಸಂಬಂಧಪಟ್ಟ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯವರ ಗಮನಕ್ಕೆ ತರಲಾಗಿದೆ. ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ.ಚೈತ್ರ,
ತಾಲೂಕು ದಂಡಾಧಿಕಾರಿಗಳು, ಹನೂರು