ಕನ್ನಡಪ್ರಭ ವಾರ್ತೆ ಬೆಂಗಳೂರು

ಸಮೀಕ್ಷೆಗಳ ವಿಚಾರದಲ್ಲಿ ಕೆಲವೇ ಜನರ ಅಭಿಪ್ರಾಯ ಇಡೀ ರಾಷ್ಟ್ರದ ಅಭಿಪ್ರಾಯ ಆಗಲಾರದು ಎಂದು ಸಂಸದ ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟರು. ದೆಹಲಿ ಮೂಲದ ವರ್ಲ್ಡ್ ಇಂಟೆಲೆಕ್ಚುವಲ್ ಫೌಂಡೇಶನ್ ಸಿದ್ಧಪಡಿಸಿರುವ ರೆಸ್ಪಾನ್ಸಿಬಲ್ ನೇಷನ್ಸ್ ಇಂಡೆಕ್ಸ್-2026 ವರದಿ ಬಿಡುಗಡೆ ಸಮಾರಂಭದಲ್ಲಿ ಮುಖ್ಯಭಾಷಣಕಾರರಾಗಿ ಮಾತನಾಡಿದ ಅವರು, ಸಮೀಕ್ಷೆಗಳು ವಾಸ್ತವಾಂಶ ಬಿಂಬಿಸಲಿ, ವಾಸ್ತವಾಂಶ ಬಿಟ್ಟು ಕೇವಲ ಸಾವಿರ ಜನರ ಅಭಿಪ್ರಾಯಪಡೆದು ಇಡೀ ಭಾರತದ ಅಭಿಪ್ರಾಯ ಎಂದು ಬಿಂಬಿಸಿ ಅದನ್ನು ಅಂತಾರಾರಾಷ್ಟ್ರೀಯ ಮಟ್ಟದಲ್ಲಿ ಪ್ರಶ್ನಿಸುವಂತಾಗುವುದು ಸರಿಯಾದ ಬೆಳವಣಿಗೆಯಲ್ಲ.140 ಕೋಟಿ ಜನರ ಭಾರತದಲ್ಲಿ ಸಾವಿರ ಜನರ ಅಭಿಪ್ರಾಯ ಕೆಟ್ಟದಾಗಿದ್ದರೆ, ಇದಕ್ಕೆ ತದ್ವಿರುದ್ಧವಾಗಿ ವಾಸ್ತವದಲ್ಲಿ ಇಡೀ ದೇಶ ಉತ್ತಮ ಸ್ಥಿತಿಯಲ್ಲಿರುತ್ತದೆ ಎಂದರು. ರೆಸ್ಪಾನ್ಸಿಬಲ್ ನೇಷನ್ ಇಂಡೆಕ್ಸ್ ವರದಿ ತರಲು ದುಡಿದ ತಜ್ಞರು ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಎಂದರು.

ವರದಿಯ ಉಸ್ತುವಾರಿ ವರ್ಲ್ಡ್ ಇಂಟಲೆಕ್ಚುವಲ್ ಫೌಂಡೇಷನ್ ಕಾರ್ಯದರ್ಶಿ ಸುಧಾಂಶು ಮಿತ್ಥಲ್ ಮಾತನಾಡಿ, ಮಾಜಿ ರಾಷ್ಟ್ರಪತಿ ರಾಮನಾಥಕೋವಿಂದ್ ಕಳೆದ ಜನವರಿಯಲ್ಲಿ ಸಂಕ್ಷಿಪ್ತ ವರದಿಯನ್ನು ಬಿಡುಗಡೆ ಮಾಡಿದ್ದರು. ಇಂದು ಸಂಪೂರ್ಣ ವರದಿಯನ್ನು ಬಿಡುಗಡೆ ಮಾಡಲಾಗಿದೆ ಎಂದರು. ದೆಹಲಿಯ ಜವಾಹರ್ ಲಾಲ್ ನೆಹರು ವಿವಿ(ಜೆಎನ್ ಯು) ಕುಲಪತಿ ಶಾಂತಿಶ್ರೀ ಡಿ.ಪಂಡಿತ್ ಮಾತನಾಡಿ, ಜವಾಹರ್ ಲಾಲ್ ನೆಹರು ವಿವಿ ಅಧ್ಯಾಪಕರು ಈ ವರದಿ ತಯಾರಿಕೆಯಲ್ಲಿ ಸಹಕಾರ ನೀಡಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಪಿಇಎಸ್ ವಿವಿಯ ಕುಲಪತಿ ಜವಾಹರ್ ದೊರೆಸ್ವಾಮಿ ಮಾತನಾಡಿದರು.

ವರದಿ ಬಿಡುಗಡೆ ಮಾಡಿದ ಮೋಹನ್ ದಾಸ್ ಪೈ ಮಾತನಾಡಿ, 2050ರ ವೇಳೆಗೆ ಪ್ರಪಂಚದಲ್ಲಿ ಭಾರತ, ಅಮೆರಿಕ, ಚೀನಾ ಮೂರೇ ರಾಷ್ಟ್ರಗಳು ಬಲಿಷ್ಟ ರಾಷ್ಟ್ರಗಳಾಗಲಿವೆ ಎಂದರು. ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳು, ಯುವಕರು ರಸ್ತೆಯಲ್ಲಿ ನಿಂತು ದೇಶದ ವಿರುದ್ಧ ಪ್ರತಿಭಟನೆ ಮಾಡದೆ, ಕೆಲಸಕ್ಕಾಗಿ ಅಲೆಯದೆ ನೀವೇ ಕೆಲಸ ನೀಡುವಂತಾಗಬೇಕು. ದೇಶಕ್ಕಾಗಿ ಶ್ರಮಿಸಿ, ದೇಶ ಹಾಳುಮಾಡುವವರ ಜೊತೆ ಸೇರಬೇಡಿ ಎಂದರು.

ಕಾರ್ಯಕ್ರಮದಲ್ಲಿ ಮೋಹನ್ ದಾಸ್ ಪೈ ಆರ್.ಎನ್.ಐ ವೆಬ್‌ಸೈಟ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಆರ್.ಕೆ.ಗುಪ್ತಾ, ಪ್ರೊ.ಏಳುಮಲೈ, ವರದಿಯ ಮುಖ್ಯಸ್ಥರಾದ ಹೇಮಾಂಗಿ ಸಿನ್ಹಾ ಉಪಸ್ಥಿತರಿದ್ದರು.