ಪ್ರತಿ ವರ್ಷದಂತೆ ನಾವು ಸಮಾಜದಿಂದ ಆಯೋಜಿಸುವ ಸಭೆ ಸಮಾರಂಭಗಳಲ್ಲಿ ಯಾವೊಬ್ಬ ಜನಪ್ರತಿನಿಧಿಗಳು ಪಾಲ್ಗೊಳ್ಳುತ್ತಿಲ್ಲ
ಕೊಪ್ಪಳ: ಸಚಿವರು, ಸಂಸದರು ಹಾಗೂ ಶಾಸಕರ ನಿವಾಸದ ಎದುರು ವಿಶ್ವಕರ್ಮ ಸಮಾಜದ ಬೇಕು ಬೇಡಿಕೆ ಈಡೇರಿಕೆಗೆ ಸ್ಪಂದಿಸುತ್ತಿಲ್ಲ. ಬೇಡಿಕೆ ಈಡೇರಿಗಾಗಿ ವಿಶ್ವಕರ್ಮ ಸಮಾಜದ ಸ್ವಾಮೀಜಿಗಳ ನೇತೃತ್ವದಲ್ಲಿ ಜನಪ್ರತಿನಿಧಿಗಳ ನಿವಾಸದ ಎದುರು ಧರಣಿ ಪ್ರತಿಭಟನೆಯಂತಹ ಹೋರಾಟ ಮಾಡುವ ಕೆಲಸ ಮಾಡಬೇಕು. ಚುನಾವಣೆಗಳಲ್ಲಿ ಅವರಿಗೆ ನಮ್ಮ ಸಮಾಜ ಅವರನ್ನು ಧಿಕ್ಕರಿಸಲಿ ಎಂದು ವಿಶ್ವಕರ್ಮ ಮಹಾ ಮಂಡಲದ ರಾಜ್ಯಾಧ್ಯಕ್ಷ ಎಲ್. ನಾಗರಾಜ ಹೇಳಿದರು.
ನಗರದ ಸಿರಸಪ್ಪಯ್ಯನಮಠದ ಆವರಣದಲ್ಲಿ ಮೌನೇಶ್ವರರ ೩೩ನೇ ವರ್ಷದ ಜಯಂತ್ಯುತ್ಸವ ಹಾಗೂ ಸಿರಸಪ್ಪಯ್ಯ ಸ್ವಾಮಿಗಳ ೧೩ನೇ ವರ್ಷದ ಜಯಂತಿ ಅಂಗವಾಗಿ ನಡೆದ ಸಾಮೂಹಿಕ ವಿವಾಹ, ಉಪನಯನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಪ್ರತಿ ವರ್ಷದಂತೆ ನಾವು ಸಮಾಜದಿಂದ ಆಯೋಜಿಸುವ ಸಭೆ ಸಮಾರಂಭಗಳಲ್ಲಿ ಯಾವೊಬ್ಬ ಜನಪ್ರತಿನಿಧಿಗಳು ಪಾಲ್ಗೊಳ್ಳುತ್ತಿಲ್ಲ. ಸಮಾಜದ ಬಗ್ಗೆ ಇವರು ನಿರ್ಲಕ್ಷ್ಯ ವಹಿಸಿದ್ದಾರೆ. ಬೇಕು ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಹಾಲಿ ಸಚಿವರು,ಸಂಸದರು ಹಾಗೂ ಶಾಸಕರಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಮೂಲಕ ಮತದಾನ ಬಹಿಷ್ಕಾರ ಮಾಡುವ ಕೆಲಸ ಜಿಲ್ಲೆಯ ಎಲ್ಲ ವಿಶ್ವಕರ್ಮ ಸಮಾಜ ಮುಂದಾಗಬೇಕು. ಜನಪ್ರತಿನಿಧಿಗಳಿಗೆ ಸರಿಯಾಗಿ ಬುದ್ದಿ ಕಲಿಸಬೇಕೆಂದರೆ ರಾಜಕಾರಣಿಗಳನ್ನು ನಮ್ಮ ಸಮಾಜದ ವೇದಿಕೆ ಕಾರ್ಯಕ್ರಮಕ್ಕೆ ಬಂದವರಿಗೆ ಮತಚಲಾಯಿಸಿ, ಬಾರದೇ ಇದ್ದವರಿಗೆ ಮತಚಲಾಯಿಸಬೇಡಿ ಎಂದರು.
ನಮ್ಮ ಸಮುದಾಯದವರು ಮೊದಲು ಮತ ಭದ್ರಗೊಳಿಸುವ ಕೆಲಸ ಮಾಡಬೇಕು. ವಿಧಾನಸಭೆ ಚುನಾವಣೆಗಳಲ್ಲಿ ಮತದಾನ ಬಹಿಷ್ಕಾರ ಮಾಡುವ ಮೂಲಕ ಅವರಿಗೆ ತಕ್ಕಪಾಠ ಕಲಿಸಬೇಕಿದೆ. ರಾಜೀವ್ ಗಾಂಧಿ ವಸತಿ ನಿಗಮದಿಂದ ಈ ಹಿಂದೆ ಜಿಲ್ಲೆಯಲ್ಲಿ ಸಾಕಷ್ಟು ಮನೆ ಮಂಜೂರು ಮಾಡಿ ಕೊಡಲಾಗಿದ್ದು, ಮನೆ ಇಲ್ಲದ ನಿವೇಶನ ಹೊಂದಿದ ಸಮುದಾಯದ ಅರ್ಹ ಫಲಾನುಭವಿಗಳು ಸಮಾಜ ಬಾಂಧವರನ್ನು ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದರು.ವಿಶ್ವಕರ್ಮ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶ್ರೀನಿವಾಸ ವಿಶ್ವಕರ್ಮ ಮಾತನಾಡಿ, ವಿಶ್ವಕರ್ಮ ಸಮುದಾಯವು ಶೈಕ್ಷಣಿಕವಾಗಿ ಸಾಕಷ್ಟು ಹಿಂದೆ ಉಳಿದಿದ್ದಾರೆ. ಇದರ ಪರಿಣಾಮವಾಗಿ ವಿಶ್ವಕರ್ಮ ಸಮುದಾಯ ಆಡಳಿತ ವ್ಯವಸ್ಥೆಯಲ್ಲಿ ಹಿಂದಿದ್ದೇವೆ. ನಮ್ಮ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ ಎಂದರು. ಸಮಾರಂಭದಲ್ಲಿ ಸಿರಸಪ್ಪಯ್ಯ ಸ್ವಾಮಿಗಳು, ನಾಗೇಂದ್ರ ಸ್ವಾಮಿ, ಕ್ಯಾದಿಗೆಪ್ಪಯ್ಯ ಸ್ವಾಮಿ, ಶಿವಶಂಕರ ಸ್ವಾಮಿ, ಜಗನ್ನಾಥ ಸ್ವಾಮಿ, ದೇವೇಂದ್ರ ಸ್ವಾಮಿ, ಗುರುನಾಥ ಸ್ವಾಮಿ, ನಾಗಮೂರ್ತಿ ಸ್ವಾಮಿ, ಎ.ತೀರ್ಥೇಂದ್ರ, ಸದ್ಯೋಜಾತ, ನರಸಿಂಹಸ್ವಾಮಿ, ವಿರುಪಾಕ್ಷಯ್ಯಸ್ವಾಮಿ, ದಿವಾಕರಸ್ವಾಮಿ, ಶ್ರೀಕಂಠ ಸ್ವಾಮಿ, ಧಮೇಂದ್ರ ಸ್ವಾಮಿ, ಮುತ್ತಪ್ಪಜ್ಜ ಸ್ವಾಮಿ, ಸುಬ್ಬಣ್ಣಾಚಾರ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಜಂಟಿ ನಿರ್ದೇಶಕ ಮಂಟೇಲಿಂಗಾಚಾರ, ಮಹಾ ಮಂಡಲದ ರಾಜ್ಯ ಉಪಾಧ್ಯಕ್ಷ ಜಿ. ಶಂಕರ, ನೆಲಮಂಗಲ ತಾಲೂಕಾಧ್ಯಕ್ಷ ಎ. ಕೃಷ್ಣಪ್ಪ, ಉಪಾಧ್ಯಕ್ಷ ಗಂಗಾಧರ, ಹನುಮಂತು, ಮಂಡ್ಯ ಜಿಲ್ಲೆಯ ಪರಾರ್ಜಿತ ಅಭ್ಯರ್ಥಿ ವೆಂಕಟೇಶ, ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸಾಚಾರ, ಬಿಜೆಪಿ ಮುಖಂಡ ಡಾ. ಬಸವರಾಜ ಕ್ಯಾವಟರ್, ಸಮಾಜದ ಜಿಲ್ಲಾಧ್ಯಕ್ಷ ನಾಗೇಶಕುಮಾರ ಕಂಸಾಲ, ಗದಗ ಜಿಲ್ಲಾಧ್ಯಕ್ಷ ದೇವೆಂದ್ರಪ್ಪ ಎಚ್. ಬಡಿಗೇರ, ಜಿಲ್ಲಾ ಗೌರವಾಧ್ಯಕ್ಷ ಈಶಪ್ಪ ಬಡಿಗೇರ, ಜಿಲ್ಲಾ ಕಾರ್ಯಾಧ್ಯಕ್ಷ ರುದ್ರಪ್ಪ ಬಡಿಗೇರ, ಅಶೋಕ ವೇದಪಾಠಕ, ಲಕ್ಷ್ಮೇಶ ಎಲ್. ಬಡಿಗೇರ, ಶೇಖರಪ್ಪ ಬಡಿಗೇರ, ತಾಲೂಕಾಧ್ಯಕ್ಷ ದೇವೇಂದ್ರಪ್ಪ ಎಚ್. ಬಡಿಗೇರ, ಎ.ಪ್ರಕಾಶ, ಕಲ್ಲಪ್ಪ ಬಡಿಗೇರ, ಕಾಳಪ್ಪ, ಪ್ರಭು ಬಡಿಗೇರ, ವೆಂಕಟೇಶ ವೇದಪಾಠಕ, ಪ್ರಭು ಬಡಿಗೇರ ಗುಳದಳ್ಳಿ, ಮಂಜುನಾಥ ಬನ್ನಿಕೊಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.ಕುಂಭ, ಮೌನೇಶ್ವರರ ಮೂರ್ತಿ ಮೆರವಣಿಗೆ
ನಗರದಲ್ಲಿ ೧೦೮ ಕುಂಭ, ಮೌನೇಶ್ವರರ ಹಾಗೂ ಸಿರಸಪ್ಪಯ್ಯನವರ ಬೆಳ್ಳಿ ಮೂರ್ತಿ ಹಾಗೂ ವಿಶ್ವಕರ್ಮ ಪ್ರಭುವಿನ ಪಂಚ ಕಸಬುಗಳ ಋಷಿ ಪುಂಗವರ ಸ್ಥಬ್ದ ಚಿತ್ರದ ಮೆರವಣಿಗೆಯು ನಗರದ ಕಿನ್ನಾಳ ರಸ್ತೆಯಿಂದ ಅಶೋಕ ವೃತ್ತ, ಜವಾಹರ ರಸ್ತೆಯ ಮೂಲಕ ಗಡಿಯಾರ ಕಂಬದ ಮಾರ್ಗವಾಗಿ ಸಿರಸಪ್ಪಯ್ಯನಮಠಕ್ಕೆ ಆಗಮಿಸಿತು.