ಪ್ರತಿ ಗ್ರಾಮದಲ್ಲಿರುವ ಹಾಲು ಉತ್ಪಾದಕ ಸಂಘಗಳು ಸುಭದ್ರವಾಗಿರಬೇಕಾದಲ್ಲಿ ಅಲ್ಲಿ ಕೆಲಸ ನಿರ್ವಹಿಸುವ ಕಾರ್ಯದರ್ಶಿ ಮತ್ತು ಆಡಳಿತ ಮಂಡಳಿ ಪ್ರಾಮಾಣಿಕವಾಗಿ ಶ್ರಮಿಸಿಬೇಕು

ಯಲಬುರ್ಗಾ: ಹಾಲು ಒಕ್ಕೂಟದ ಅಭಿವೃದ್ಧಿ ಮತ್ತು ರೈತರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ದೊರಕಿಸಿ ಕೊಡಲು ಶಕ್ತಿಮೀರಿ ಶ್ರಮಿಸುತ್ತೇವೆ ಎಂದು ಬಳ್ಳಾರಿ ಸಹಕಾರ ಹಾಲು ಒಕ್ಕೂಟದ ಉಪಾಧ್ಯಕ್ಷ ಎನ್. ಸತ್ಯನಾರಾಯಣ ಹೇಳಿದರು.

ತಾಲೂಕಿನ ಬೇವೂರು ಗ್ರಾಮದ ಬುದ್ಧ, ಬಸವ, ಅಂಬೇಡ್ಕರ್ ಭವನದಲ್ಲಿ ಯಲಬುರ್ಗಾ-ಕುಕನೂರ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಹಮ್ಮಿಕೊಂಡಿದ್ದ ರಾಬಕೊವಿ ಹಾಲು ಒಕ್ಕೂಟಕ್ಕೆ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾದವರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿ ಗ್ರಾಮದಲ್ಲಿರುವ ಹಾಲು ಉತ್ಪಾದಕ ಸಂಘಗಳು ಸುಭದ್ರವಾಗಿರಬೇಕಾದಲ್ಲಿ ಅಲ್ಲಿ ಕೆಲಸ ನಿರ್ವಹಿಸುವ ಕಾರ್ಯದರ್ಶಿ ಮತ್ತು ಆಡಳಿತ ಮಂಡಳಿ ಪ್ರಾಮಾಣಿಕವಾಗಿ ಶ್ರಮಿಸಿಬೇಕು. ಜತೆಗೆ ಪ್ರತಿ ಸಂಘದಿಂದ ಗುಣಮಟ್ಟದ ಹಾಲನ್ನು ಒಕ್ಕೂಟಕ್ಕೆ ಕಳುಹಿಸಿದಾಗ ಒಕ್ಕೂಟಗಳು ಲಾಭದಲ್ಲಿ ನಡೆಯಲು ಸಾಧ್ಯ. ಸದ್ಯ ಬಳ್ಳಾರಿ ಒಕ್ಕೂಟದಲ್ಲಿ ಸಾಕಷ್ಟು ಸವಾಲುಗಳಿವೆ. ನೂತನ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ನಿರ್ದೇಶಕರುಗಳ ಸಹಕಾರದಿಂದ ಅವುಗಳನ್ನೆಲ್ಲ ಬಗೆಹರಿಸುವ ವಿಶ್ವಾಸ ಹೊಂದಿದ್ದೇವೆ. ರೈತರಿಗೆ ಅನ್ಯಾಯವಾದರೆ ಅವರೊಂದಿಗೆ ನಾನೂ ಹೋರಾಟದಲ್ಲಿ ಭಾಗಿಯಾಗಿವೆ ಎಂದರು.

ಕೆಎಂಎಫ್ ನಾಮ ನಿರ್ದೇಶಕ ಹಂಪಯ್ಯ ಹಿರೇಮಠ ಮಾತನಾಡಿ, ನಮಗೆ ಸಿಕ್ಕಿರುವ ಐದು ವರ್ಷದ ಆಡಳಿತದಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ರೈತರ, ಹಾಲು ಉತ್ಪಾದಕ ಸಂಘಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವುದಾಗಿ ಹೇಳಿದರು.‌

ಬಿನ್ನಾಳ ಹಾಲು ಉತ್ಪಾದಕ ಸಂಘದ ಜಗದೀಶ ಚಟ್ಟಿ ಮಾತನಾಡಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಕೃಷ್ಣಾರೆಡ್ಡಿ ಗಲಬಿ, ಮಂಜುನಾಥ ನಿಡಶೇಸಿ, ಕಮಲವ್ವ ಮುದುಕಪ್ಪ ಲಕ್ಮಾಪುರ, ಒಕ್ಕೂಟದ ಮಾಜಿ ಅಧ್ಯಕ್ಷ ಎಂ. ಸತ್ಯನಾರಾಯಣ, ನಾಗನಗೌಡ ನಂದನಗೌಡ್ರ, ಬೇವೂರು ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಬಸವರಾಜ ಹುಳ್ಳಿ, ಚಿಕ್ಕಮನ್ನಾಪುರ ಸಂಘದ ನಾಗರಾಜ ಕಬ್ಬಣ್ಣವರ, ವೀರಭದ್ರಯ್ಯ ಹಿರೇಮಠ, ಅಜ್ಮೀರ, ಗವಿಸಿದ್ದಪ್ಪ ಚಂಡೂರ, ಮಂಜುನಾಥ ಸೇರಿದಂತೆ ಮತ್ತಿತರರು ಇದ್ದರು.