ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಸರ್ಕಾರ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಇಂಡಿಗನತ್ತ ಗ್ರಾಮದಲ್ಲಿ ಏ. 26ರಂದು ಮತಗಟ್ಟೆ ಧ್ವಂಸ ಪ್ರಕರಣ ನಡೆದಿದ್ದು, ಇದರಿಂದಾಗಿ ಗ್ರಾಮದ ಜನತೆ ನಲುಗಿ ಹೋಗಿದ್ದಾರೆ. ಆದರೆ, ಯಾವೊಬ್ಬ ಜನಪ್ರತಿನಿಧಿಯೂ ಇದುವರೆಗೆ ಕನಿಷ್ಠ ಭೇಟಿ ನೀಡುವ ಸೌಜನ್ಯವನ್ನು ತೋರಿಲ್ಲ.ಮಲೆ ಮಾದೇಶ್ವರ ಬೆಟ್ಟ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಏ.26 ರಂದು ಚುನಾವಣೆ ಬಹಿಷ್ಕರಿಸಿದ್ದವರನ್ನು ಕೆಲ ಅಧಿಕಾರಿಗಳು ದಿಕ್ಕು ತಪ್ಪಿಸಿ ಮತದಾನ ಮಾಡುವಂತೆ ಮಾಡಿದ್ದರಿಂದ ಆಕ್ರೋಶಗೊಂಡವರು ಇವಿಎಂ ಧ್ವಂಸ ಮಾಡಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದರಿಂದ ಇಂಡಿಗನತ್ತ ಗ್ರಾಮದ ಜನರ ಮೇಲೆ ಮೂರು ಪ್ರಕರಣಗಳು ದಾಖಲಾಗಿದ್ದು, ಇಂಡಿಗನತ್ತ ಮತ್ತು ಮೆಂದಾರೆ ಗ್ರಾಮಗಳ ಜನರ ಪರಿಸ್ಧಿತಿ ಚಿಂತಾಜನಕವಾಗಿದೆ.
ಇಂಡಿಗನತ್ತ ಗ್ರಾಮದಲ್ಲಿ ನಡೆದ ಘಟನೆಗೆ ಕಾರಣರಾದವರನ್ನು ಹುಡುಕಿ ಜೈಲಿಗೆ ಕಳುಹಿಸುವಲ್ಲಿ ವಹಿಸುವ ಕಾಳಜಿಯನ್ನು ಸರ್ಕಾರ ಇವೆರಡು ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ವಹಿಸಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ. ಇದೀಗ ಘಟನೆ ನಡೆದ ಬಳಿಕವೂ ಯಾವೊಬ್ಬ ಜನಪ್ರತಿನಿಧಿಗಳು ಇತ್ತ ತಲೆಹಾಕದಿರುವುದು. ಪ್ರಜ್ಞಾವಂತರ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ಇಲ್ಲಿನ ಜನತೆ ನಾಗರಿಕ ಪ್ರಪಂಚವನ್ನೇ ಕಾಣದಿರುವ ಕಾಡಿನ ಮಕ್ಕಳ ಸ್ಥಿತಿಗತಿಯ ಬಗ್ಗೆ ಹಾಗೂ ಜನಜಾನುವಾರುಗಳ ಸಂಕಷ್ಟವನ್ನು ಇನ್ನು ಮುಂದಾದರೂ ಅಲಿಸುವ ಕೆಲಸ ಮಾಡಬೇಕಾಗಿದೆ. ಮೂಲ ಸೌಲಭ್ಯ ಸಿಗುವುದೇ?:ಚಾಮರಾಜನಗರ ಜಿಲ್ಲಾಡಳಿತ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಇಂಡಿಗನತ್ತ ಮತ್ತು ಮೆಂದಾರೆ ಗ್ರಾಮದ ನಿವಾಸಿಗಳಿಗೆ ಸಂತ್ವಾನ ಹೇಳಿ ಧೈರ್ಯ ತುಂಬಿ ಸೌಲಭ್ಯ ನೀಡುವ ಭರವಸೆ ನೀಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಈಡೇರುತ್ತದೆ ಎಂಬುದು ಪ್ರಶ್ನೆಯಾಗಿದೆ.
ಹೆಚ್ಚಾಯ್ತು ಆಕ್ರೋಶ:ಸರ್ಕಾರದ ಮಟ್ಟದಲ್ಲಿ ಅರಣ್ಯ ಇಲಾಖೆ ನಾಗಮಲೆ ಚಾರಣಕ್ಕೆ ನಿಷೇಧ ಏರಿದ ದಿನದಿಂದಲೂ ಸಹ ಒಂದಲ್ಲ ಒಂದು ಪ್ರತಿಭಟನೆ ಗೊಂದಲಗಳು ನಡೆಯುತ್ತಿದ್ದು, ಅರಣ್ಯ ಇಲಾಖೆ ಚಾರಣಕ್ಕೆ ತಡೆ ಒಡ್ಡಿದ ಕಾರಣಕ್ಕೆ ಆರ್ಥಿಕ ಸಂಕಷ್ಟಕ್ಕೆ ಒಳಗಾದ ನಿವಾಸಿಗಳ ಬದುಕು ಅತಂತ್ರವಾಗಿ ಪರಿಸ್ಧಿತಿ ವಿಕೋಪಕ್ಕೆ ತಿರುಗಲು ಕಾರಣವಾಯಿುತು.
ಕೋಟ್....ಸರ್ಕಾರ ಕಾಡಂಚಿನ ಜನರಿಗೆ ನೀಡಬೇಕಾದ ಸೌಲಭ್ಯ ನೀಡಿದ್ದರೆ ಇಲ್ಲಿನ ಜನ ಪ್ರತಿಭಟನೆ ಮಾಡುತ್ತಲೇ ಇರುತ್ತಿರಲಿಲ್ಲ. ಇದಕ್ಕೆಲ್ಲ ಕಾರಣ ಸರ್ಕಾರ. ಸೌಲಭ್ಯಕ್ಕಾಗಿ ಒತ್ತಾಯಿಸಿ ಹಿಂದಿನಿಂದಲೂ ಹೋರಾಟ ಮಾಡತ್ತಾ ಬಂದಿದ್ದು, ಸೌಲಭ್ಯ ಸಿಗದಿದ್ದಾಗ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಅಮಾಯಕ ಜನರ ಮೇಲೆ ಕಾನೂನು ಕ್ರಮ ಜರುಗಿಸುವುದು ನ್ಯಾಯವಲ್ಲ. ಇಲ್ಲಿನ ಜನರಿಗೆ ಬೇಕಾದ ಸೌಲಭ್ಯ ಕಲ್ಪಿಸಿ ಜನರು ನೆಮ್ಮದಿಯಿಂದ ಇರಲು ಬೇಕಾದ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು.
ಹೊನ್ನೂರು ಪ್ರಕಾಶ್, ಜಿಲ್ಲಾಧ್ಯಕ್ಷ, ರಾಜ್ಯ ರೈತ ಸಂಘ.