ಸಾರಾಂಶ
ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಭರ್ಜರಿ ಗೆಲುವು ಸಾಧಿಸಿರುವುದು ಅಭಿನಂದನೀಯ. ಕರ್ನಾಟಕದ ಉಪ ಚುನಾವಣೆಯ ತೀರ್ಪು ಅನಿರೀಕ್ಷಿತ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಂದಾಪುರ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಭರ್ಜರಿ ಗೆಲುವು ಸಾಧಿಸಿರುವುದು ಅಭಿನಂದನೀಯ. ಕರ್ನಾಟಕದ ಉಪ ಚುನಾವಣೆಯ ತೀರ್ಪು ಅನಿರೀಕ್ಷಿತ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಂದಾಪುರ ತಿಳಿಸಿದ್ದಾರೆ.ಬಿಜೆಪಿ ರಾಷ್ಟ್ರೀಯ ನಾಯಕರು ಸ್ಥಳೀಯ ನಾಯಕತ್ವಕ್ಕೆ ಮನ್ನಣೆ ನೀಡಿರುವ ಜೊತೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪರಿಣಾಮಕಾರಿ ಸ್ಪಂದನೆ ಹಾಗೂ ಎಲ್ಲ ವರ್ಗಗಳ ಮತದಾರರು ಬಿಜೆಪಿ ನೇತೃತ್ವದ ಎನ್‌ಡಿಎ ಪರ ಮತ ಚಲಾಯಿಸಿದ ಪರಿಣಾಮವಾಗಿ ಮಹಾರಾಷ್ಟ್ರದಲ್ಲಿ ಬಿಜೆಪಿ ವಿಜಯ ಪತಾಕೆಯನ್ನು ಬಾನೆತ್ತರಕ್ಕೇರಿಸಲು ಸಾಧ್ಯವಾಗಿದೆ.ಕರ್ನಾಟಕ ಉಪ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷಕ್ಕೆ ಸ್ವಾಭಾವಿಕ ಗೆಲುವು ದೊರೆತಿದೆ. ಬಿಜೆಪಿ ಮತ್ತು ಜೆಡಿಎಸ್ ಮೂರೂ ಕ್ಷೇತ್ರಗಳಲ್ಲಿ ಉತ್ತಮ ಪ್ರಯತ್ನ ನಡೆಸಿದ್ದರೂ ಮತದಾರರ ವ್ಯತಿರಿಕ್ತ ತೀರ್ಪನ್ನು ಒಪ್ಪಿಕೊಳ್ಳಬೇಕಾಗಿದೆ.ಕೇಂದ್ರದಲ್ಲಿ ಜನಪರ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ದೇಶ ವಿದೇಶಗಳಲ್ಲಿ ಘನತೆ ಗೌರವ ಹೆಚ್ಚಿಸುತ್ತಿರುವ ಸನ್ನಿವೇಶದಲ್ಲಿ ಮಹಾರಾಷ್ಟದ ಆಡಳಿತದ ಚುಕ್ಕಾಣಿ ಬಿಜೆಪಿ ತೆಕ್ಕೆಗೆ ಬಂದಿರುವುದು ಹರ್ಷದಾಯಕವಾಗಿದೆ.ಕರ್ನಾಟಕಲ್ಲಿ ಕಾಂಗ್ರೆಸ್ ಸರ್ಕರದ ಜನ ವಿರೋಧಿ ನೀತಿಗಳನ್ನು ಬಿಜೆಪಿ ನಿರಂತರ ಹೋರಾಟಗಳ ಮೂಲಕ ಜಗಜ್ಜಾಹೀರುಗೊಳಿಸಲಿದೆ. ಸೂಕ್ತ ಸಮಯದಲ್ಲಿ ಜನತೆ ಜಾಗೃತರಾಗಿ ಬಿಜೆಪಿ ಪರ ಜನಾದೇಶ ನೀಡುವ ಮೂಲಕ ಜನ ವಿರೋಧಿ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.