ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಪುರಸಭೆ ವ್ಯಾಪ್ತಿಯ ಚಿಟ್ಟನಹಳ್ಳಿ ಹೌಸಿಂಗ್ ಬೋರ್ಡ್, ಕಾಲುವೆಕೇರಿ ಬೀದಿ ಹಾಗೂ ಮಹಾತ್ಮಗಾಂಧಿ ವೃತ್ತ ಸಮೀಪದ ಬಡಾವಣೆಗಳ ಜನರು ವರ್ಷದ ೩೬೫ ದಿನವೂ ಸಮಸ್ಯೆಗಳಿಂದ ಬಳಲುತ್ತಿದ್ದು, ತಾಲೂಕು ಆಡಳಿತ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಪುರಸಭೆ ಆಡಳಿತವು ಕಣ್ಣುಮುಚ್ಚಿ ಕುಳಿತಿದೆಯೇ ಎಂಬ ಪ್ರಶ್ನೆ ನಾಗರಿಕರನ್ನು ಕಾಡುತ್ತಿದೆ. ಪಟ್ಟಣದ ಅರಕಲಗೂಡು ರಸ್ತೆಯ ಚಿಟ್ಟನಹಳ್ಳಿ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ನ್ಯಾಯಾಧೀಶರ ವಸತಿ ಸಂಕೀರ್ಣ ಸೇರಿದಂತೆ ೨೫೦ಕ್ಕೂ ಹೆಚ್ಚು ಮನೆಗಳು, ಸರ್ಕಾರಿ ನರ್ಸಿಂಗ್ ಕಾಲೇಜು, ಪ್ರತಿಷ್ಠಿತ ಶ್ರೀ ವೆಂಕಟೇಶ್ವರ ವಿದ್ಯಾಸಂಸ್ಥೆ ಜತೆಗೆ ಹೊಂದಿಕೊಂಡಂತೆ ಕೈಗಾರಿಕಾ ಪ್ರದೇಶವು ಇದೆ. ಆದರೆ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಬಡಾವಣೆಯ ನಿವಾಸಿಗಳ ಮನೆಗಳಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಬಡಾವಣೆಯ ಸಮೀಪದಲ್ಲೇ ಹರಿಯುತ್ತಿರುವ ಹೇಮಾವತಿ ನಾಲೆಯಲ್ಲಿ ನೀರಿನ ಹರಿವು ನಿಲ್ಲಿಸಿದ ನಂತರ ನಾಲೆಯಲ್ಲಿ ಉಳಿಯುವ ನೀರಿನಲ್ಲಿ ಹರಿದು ಬರುವ ತ್ಯಾಜ್ಯ ಸಂಗ್ರಹವಾಗಿ ಕ್ರಿಮಿಕೀಟಗಳ ಉತ್ಪತ್ತಿಯ ತಾಣವಾಗಿ ನಾಗರಿಕರನ್ನು ನಿರಂತರವಾಗಿ ಕಾಡುತ್ತಿರುತ್ತದೆ. ಜತೆಗೆ ಬಡಾವಣೆಯಲ್ಲಿ ಇರುವ ಎಲ್ಲಾ ಚರಂಡಿಗಳಲ್ಲಿ ಗಿಡಮರಗಳು ಬೆಳೆದು, ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ, ತ್ಯಾಜ್ಯ ಕೊಳೆತು ಕೆಟ್ಟ ವಾಸನೆಯ ಹಾಗೂ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.ಪಟ್ಟಣದ ಹೃದಯಭಾಗದ ಮಹಾತ್ಮಗಾಂಧಿ ವೃತ್ತ ಸಮೀಪದ ಪುರಸಭೆ ವಾಣಿಜ್ಯ ಸಂಕೀರ್ಣದ ಸೆಲಾರ್‌ನಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡದ ಎಂಜಿನಿಯರ್‌ಗಳ ಬೇಜವಾಬ್ದಾರಿ ಕಾರ್ಯದಿಂದಾಗಿ ಸದಾಕಾಲ ನೀರು ನಿಂತು ಕೆಟ್ಟ ವಾಸನೆ ಜತೆಗೆ ಕ್ರಿಮಿಕೀಟಗಳ ಉತ್ಪತ್ತಿಯ ತಾಣವಾಗಿ ಕಾಡುತ್ತಿದೆ.
ಪುರಸಭೆ ೧೧ನೇ ವಾರ್ಡಿನ ಕಾಲುವೆಕೇರಿ ಬೀದಿ ಸಮೀಪವಿರುವ ಸೂರ್ಯನಾರಾಯಣ ಎಂಬ ನಿ. ಆರೋಗ್ಯ ಇಲಾಖೆಯ ನೌಕರನ ಖಾಲಿ ನಿವೇಶನದಲ್ಲಿ ಹತ್ತಾರು ವರ್ಷಗಳಿಂದ ಗಿಡಗಂಟೆಗಳು ಬೆಳೆದು ಹಾವು, ಕ್ರಿಮಿಕೀಟಗಳ ಉತ್ಪತ್ತಿಯ ತಾಣವಾಗಿ ಸುತ್ತಲಿನ ಬಡಾವಣೆಯವರಿಗೆ ಕಂಟಕವಾಗಿದೆ. ಪಟ್ಟಣದ ಕೆಲವು ಬಡಾವಣೆಯಲ್ಲಿ ಯುಜಿಡಿಯ ಮಲದ ನೀರನ್ನು ಚರಂಡಿಗೆ ಹರಿಯಬಿಟ್ಟಿರುವ ನಾಗರಿಕರು ಒಂದಡೆಯಾದರೆ, ಆಶ್ರಯ ಬಡಾವಣೆಯ ತಗ್ಗು ಪ್ರದೇಶದಲ್ಲಿನ ಮನೆಯ ಯುಜಿಡಿಯ ಮಲದ ನೀರನು ಇಳಿಜಾರಿನ ಪಕ್ಕದಲ್ಲಿರುವ ಕಾಲುವೆಗೆ ಹರಿಯಬಿಡಲಾಗಿದೆ ಹಾಗೂ ವಿವಿಧ ಬಡಾವಣೆಗಳ ಖಾಲಿ ನಿವೇಶನ ಹಾಗೂ ಚರಂಡಿಗಳಲ್ಲಿ ತಾಜ್ಯದ ಸಮಸ್ಯೆ ಕಾಡುತ್ತಿದೆ.ಕರ್ನಾಟಕ ರಾಜ್ಯದಲ್ಲಿ ಡೆಂಘೀ ಮಹಾಮಾರಿಯು ಹಿರಿಯರು, ಕಿರಿಯರು ಎನ್ನದೇ ಬಲಿ ಪಡೆಯುತ್ತಿದ್ದು, ತಾಲೂಕಿನಲ್ಲಿ ಮೂವರು ಹೆಣ್ಣುಮಕ್ಕಳು ಬಲಿಯಾಗಿದ್ದಾರೆ. ನಗರ ಪ್ರದೇಶದಲ್ಲೇ ಈ ರೀತಿಯ ಸಮಸ್ಯೆಗಳು ಕಣ್ಣಿಗೆ ಕಾಣುತ್ತಿರುವಾಗ ಗ್ರಾಮೀಣ ಪ್ರದೇಶದ ನೈಜ ಚಿತ್ರಣಕ್ಕೆ ಮೂರು ಹೆಣ್ಣುಮಕ್ಕಳು ಬಲಿಯಾಗಿರುವುದು ಸಾಕ್ಷಿಯಾಗಿದೆ. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ತಾಲೂಕು ಆಡಳಿತದ ಸ್ಪಷ್ಟ ನಿರ್ದೇಶನ ನೀಡುವುದು ಹಾಗೂ ಅಧಿಕಾರಿಗಳು ನೀಡುವ ವರದಿಗಳ ಪರಿಶೀಲನೆ ಮಾಹಿತಿ ಸಂಗ್ರಹ ಸೇರಿದಂತೆ ತಾಲೂಕು ಪಂಚಾಯತಿ ಅಧಿಕಾರಿಗಳು ಗ್ರಾಮೀಣ ಪ್ರದೇಶದ ಭೇಟಿ ಮತ್ತು ಪರಿಶೀಲನೆಯನ್ನು ಖದ್ದು ಮಾಡುವ ಜತೆಗೆ ನೈಜ ಚಿತ್ರಣದ ವರದಿಯನ್ನು ನೀಡಿ, ಅಗತ್ಯ ಸೂಕ್ತ ಕ್ರಮಕೈಗೊಳ್ಳಬೇಕಿದೆ.
ಫೋಟೊ ೨ : ಹೊಳೆನರಸೀಪುರ ಪಟ್ಟಣದ ಚಿಟ್ಟನಹಳ್ಳಿ ಬಡಾವಣೆಯ ಸಮೀಪದಲೇ ಹರಿಯುತ್ತಿರುವ ನಾಲೆಯಲ್ಲಿ ನೀರಿನ ಹರಿವು ನಿಲ್ಲಿಸಿದ ನಂತರ ನಾಲೆಯಲ್ಲಿ ಉಳಿಯುವ ನೀರಿನಲ್ಲಿ ತ್ಯಾಜ್ಯ ಸಂಗ್ರಹವಾಗಿ ಕ್ರಿಮಿಕೀಟಗಳ ಉತ್ಪತ್ತಿಯ ತಾಣವಾಗಿದೆ.ಫೋಟೊ ೩ : ಹೊಳೆನರಸೀಪುರ ಪಟ್ಟಣದ ಚಿಟ್ಟನಹಳ್ಳಿ ಬಡಾವಣೆಯಲ್ಲಿ ಚರಂಡಿಯಲ್ಲಿ ಬೆಳೆದಿರುವ ಗಿಡಗಂಡಿಗಳು.ಫೋಟೊ ೪ : ಹೊಳೆನರಸೀಪುರ ಪಟ್ಟಣದ ಹೃದಯಭಾಗದ ಮಹಾತ್ಮಗಾಂಧಿ ವೃತ್ತ ಸಮೀಪದ ಪುರಸಭೆ ವಾಣಿಜ್ಯ ಸಂಕೀರ್ಣದ ಸೆಲಾರ್‌ನಲ್ಲಿ ಸಂಗ್ರಹವಾಗಿರುವ ಕೊಳಚೆ ನೀರು.* ಬಾಕ್ಸ್‌ನ್ಯೂಸ್‌ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ಅವರು ಹಲವಾರು ಕಾರ್ಯಕ್ರಮಗಳ ಮೂಲಕ ಜನರ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದು, ಒಂದು ಕೈಯಿಂದ ಚಪ್ಪಾಳೆ ಅಸಾಧ್ಯವಾಗಿದ್ದು, ಪುರಸಭೆಯ ಎಲ್ಲಾ ನೌಕರರು ಸಹ ಮುಖ್ಯಾಧಿಕಾರಿಗಳ ಜೊತೆ ಕೈ ಜೋಡಿಸಬೇಕಿದೆ.