ಸಾರಾಂಶ
ಅರಳಿಕೊಪ್ಪಗ್ರಾಮದಲ್ಲಿ ಸೋಷಿಯಲ್ ವೆಲ್ ಪೇರ್ ಸೊಸೈಟಿ, ಆರೋಗ್ಯ ಇಲಾಖೆ , ತೋಟಗಾರಿಕೆ ಇಲಾಖೆಯಿಂದ ಮಾಹಿತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕ್ಯಾನ್ಸರ್ ರೋಗದ ಬಗ್ಗೆ ಜಾಗೃತರಾಗಿರಬೇಕು. ದೇಹದಲ್ಲಿ ವ್ಯತ್ಯಾಸ ಕಂಡು ಬಂದರೆ ಕಾಲ, ಕಾಲಕ್ಕೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ತಿಳಿಸಿದರು.
ಮಂಗಳವಾರ ಅರಳಿಕೊಪ್ಪ ಗ್ರಾಮದಲ್ಲಿ ಸೋಷಿಯಲ್ ವೆಲ್ ಫೇರ್ ಸೊಸೈಟಿ, ಆರೋಗ್ಯ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಈಶ್ವರಿ, ಸ್ಪೂರ್ತಿ, ಶ್ರೀನಿಧಿ ಸ್ವಸಹಾಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು. ಫೆ. 4 ರಂದು ವಿಶ್ವ ಕ್ಯಾನ್ಸರ್ ದಿನವಾಗಿದೆ. ನರಸಿಂಹರಾಜಪುರ ತಾಲೂಕಿನಲ್ಲಿ 142 ಜನರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ. ಬಾಯಿ ಕ್ಯಾನ್ಸರ್, ಗರ್ಭ ಕೋಶ, ಸ್ತನ ಕ್ಯಾನ್ಸರ್ ರೋಗದಿಂದ ಜನರು ಹೆಚ್ಚಾಗಿ ಬಳಲುತ್ತಿದ್ದಾರೆ. ನಾವು ದಿನ ನಿತ್ಯ ಸೇವಿಸುವ ಆಹಾರ, ಮಾನಸಿಕ ಒತ್ತಡವನ್ನು ಸಮತೋಲನದಲ್ಲಿ ಇಡುವುದರಿಂದ ಕ್ಯಾನ್ಸರ್ ಕಾಯಿಲೆ ತಡೆಗಟ್ಟಬಹುದು ಎಂದರು.ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳಲ್ಲಿ ಸ್ಥನ ಕ್ಯಾನ್ಸರ್, ಗರ್ಭ ಕೋಶದ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತಿದೆ. ಆದ್ದರಿಂದ ಮಹಿಳೆಯರು ಜಾಗೃತರಾಗಿದ್ದು ಕಾಲ, ಕಾಲಕ್ಕೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ರೋಹಿತ್ ಮಾಹಿತಿ ನೀಡಿ, ತೋಟಗಾರಿಕೆ ಇಲಾಖೆಯಿಂದ ಜೇನು ಸಾಕಾಣಿಕೆ, ಅಣಬೆ ಬೆಳೆ ಯಲು ತರಬೇತಿ ಹಾಗೂ ಸಬ್ಸಿಡಿ ಸಿಗಲಿದೆ. ಅಡಕೆ ಬೆಳೆಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು, ಕಾಳು ಮೆಣಸು ಬೆಳೆಗೂ ಸಹಾಯ ಧನ ನೀಡುತ್ತೇವೆ. ತಾಳೆ ಬೆಳೆ ವರ್ಷದ 12 ತಿಂಗಳು ಬೆಳೆ ಬರುತ್ತದೆ. ಆದ್ದರಿಂದ ರೈತರು ತಾಳೆ ಬೆಳೆ ಬೆಳೆಯಬೇಕು. ತಾಳೆ ಬೆಳೆಗೂ ಸಹಾಯ ಧನ ನೀಡುತ್ತೇವೆ ಎಂದರು. ಬಿ.ಪಿ.ಎಲ್ ಕಾರ್ಡು ಹೋಂದಿರುವ ಸಣ್ಣ ರೈತರಿಗೆ ತೋಟಗಾರಿಕೆ ಇಲಾಖೆಯಿಂದ ವಿವಿಧ ಸೌಲಭ್ಯಗಳಿದ್ದು ಇದನ್ನು ಉಪಯೋಗಸಿಕೊಳ್ಳಿ ಎಂದು ಕರೆ ನೀಡಿದರು.ಸಭೆ ಅಧ್ಯಕ್ಷತೆ ವಹಿಸಿದ್ದ ಸೋಷಿಯಲ್ ವೆಲ್ ಸೊಸೈಟಿ ಕಾರ್ಯಕ್ರಮ ಸಂಯೋಜಕ ಪ್ರಭಾಕರ್ ಮಾತನಾಡಿ, ನಮ್ಮ ಸಂಸ್ಥೆಯಿಂದ ಸ್ವ ಸಹಾಯ ಸಂಘದವರಿಗೆ ಕಳೆದ 30 ವರ್ಷಗಳಿಂದಲೂ ಹಲವಾರು ಸಮಾಜ ಮುಖಿ ಕಾರ್ಯಕ್ರಮ ನಡೆಸುತ್ತಾ ಬಂದಿದ್ದೇವೆ. ವಿಶೇಷವಾಗಿ ಮಹಿಳೆಯರಿಗೆ ಉದ್ಯೋಗ ತರಬೇತಿ, ಆರ್ಥಿಕ ಸ್ವಾವಲಂಬನೆ ಕಾರ್ಯಕ್ರಮ ರೂಪಿಸಿದ್ದೇವೆ ಎಂದರು.
ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಆಪ್ತ ಸಮಾಲೋಚಕಿ ಶಶಿಕಲಾ ಮಾತನಾಡಿ, ಮಹಿಳೆಯರು ಸಮಸ್ಯೆ ಇದ್ದಾಗ ಉಚಿತವಾಗಿ ಮಹಿಳಾ ಸಾಂತ್ವನ ಕೇಂದ್ರದ ಸಹಾಯವಾಣಿ 181 ಕ್ಕೆ ಕರೆ ಮಾಡಬಹುದು. ಕೆಲಸದ ಸಮಯದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ತಡೆ ಗಟ್ಟಲು ಮತ್ತು ಪರಿಹರಿಸಲು ಕಾಯ್ದೆಗಳಿವೆ. ಉಚಿತ ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ನೀಡಿದರೆ ಉಚಿತವಾಗಿ ಕಾನೂನು ಸೇವೆ ನೀಡುತ್ತಾರೆ ಎಂದರು.ಸರ್ಕಾರಿ ಆಸ್ಪತ್ರೆ ಮಂಜಳಾ ಆಯುಷ್ಮಾನ್ ಭಾರತ್ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಗುಬ್ಬಿಗಾ ಗ್ರಾಪಂ ಸದಸ್ಯೆ ಜಯಂತಿ, ಮಹಿಳಾ ಸಾಂತ್ವನ ಕೇಂದ್ರದ ಪ್ರಿನ್ಸಿ ಸೆಭಾಸ್ಟಿನ್, ಆರೋಗ್ಯ ಇಲಾಖೆ ನಾಗಲತ ಇದ್ದರು. ಇದೇ ಸಂದರ್ಭದಲ್ಲಿ ಸ್ವಸಹಾಯ ಸಂಘದ ಸದಸ್ಯರಿಗೆ ಬಿ.ಪಿ, ಶುಗರ್ ಕಾಯಿಲೆ ಪರೀಕ್ಷೆ ನಡೆಸಲಾಯಿತು. ದೀಕ್ಷಾ , ರುಣಾಕ್ಷಿ , ಶಿಲ್ಪ ಹಾಜರಿದ್ದರು.