ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರಕೃತಿ ಅವಘಢಗಳನ್ನು ತಡೆಗಟ್ಟಲು ಜನರಲ್ಲಿ ಪರಿಸರ ಸಂರಕ್ಷಣೆಯ ಕಾಯಕ ಹೆಚ್ಚಾಗಬೇಕಿದೆ ಎಂದು ಪ್ರಾದೇಶಿಕ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ಚೈತ್ರ ಸಲಹೆ ನೀಡಿದರು.ತಾಲೂಕಿನ ಮಂಗಲ ಗ್ರಾಮದಲ್ಲಿ ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಶ್ರೀ ಮಲ್ಲೇಶ್ವರಸ್ವಾಮಿ ಅಭಿವೃದ್ಧಿ ಸಮಿತಿ, ನೀರು ಬಳಕೆದಾರರ ಸಹಕಾರ ಸಂಘ, ಪ್ರಾದೇಶಿಕ ಅರಣ್ಯ ಇಲಾಖೆಯಿಂದ ಮುಂಗಾರು ಹಸಿರು ಉತ್ಸವ ಕಾರ್‍ಯಕ್ರಮದಲ್ಲಿ ಕೆರೆಯಂಗಳದ ನಡುಗದ್ದೆಯಲ್ಲಿ ಸಸಿ ನೆಟ್ಟು ಮಾತನಾಡಿದರು.
ಮರಗಳ ಹನನ ಹಾಗೂ ಪ್ರಕೃತಿಯ ನಾಶದಿಂದಾಗಿ ಗುಡ್ಡ ಕುಸಿತ, ಭೂಕೊರತೆಗಳು ಹೆಚ್ಚಾಗಿ ಮನುಕುಲ ನಾಶಕ್ಕೆ ನಾಂದಿ ಹಾಡುತ್ತಿದೆ. ಪ್ರಕೃತಿ ವಿಕೋಪಗಳನ್ನು ತಡೆಗಟ್ಟಲು ಜೀವ ವೈವಿಧ್ಯತೆಗೆ ಅನುಕೂಲವಾಗುವ ಸಸ್ಯ ಪ್ರಬೇಧಗಳನ್ನು ಬೆಳೆಸುವ ಮೂಲಕ ಪ್ರಾಣಿ ಮತ್ತು ಪಕ್ಷಿ ಸಂಕುಲಗಳ ಉಳಿಸಬೇಕು ಎಂದರು.ಮುಂಗಾರು ಮಳೆ ಪ್ರಾರಂಭಗೊಂಡು ಜೀವ ಸಂಕುಲಗಳು ಬೆಳವಣಿಗೆಗೆ ನಾಂದಿ ಹಾಡುವ ಈ ದಿನಗಳಲ್ಲಿ ಹಸಿರು ಸಂರಕ್ಷಿಸುವ ಕಾಯಕವನ್ನು ಜನರು ಪರಿಣಾಮಕಾರಿಯಾಗಿ ಮಾಡಬೇಕು. ಸಸ್ಯ ಸಂಕುಲಗಳ ಬೆಳವಣಿಗೆಗೆ ಪೂರಕ ವಾತಾವರಣ ಇರುವುದರಿಂದ ಸ್ವಯಂ ಸೇವಾ ಸಂಸ್ಥೆಗಳು, ಜನಪ್ರತಿನಿಧಿಗಳು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ಕಾವೇರಿ ಜಲಾನಯನ ಪ್ರದೇಶ ವ್ಯಾಪ್ತಿಯ ಬೃಹತ್ ಮತ್ತು ಮಧ್ಯಮ ನೀರಾವರಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ಸಂರಕ್ಷಿಸಲು ಮುಂದಾಗಿದ್ದೇವೆ ಎಂದರು.ಕೆರೆಗಳ ಬದುಗಳಲ್ಲಿರುವ ಹೈಲ್ಯಾಂಡ್‌ಗಳಲ್ಲಿ ಸಸ್ಯಗಳ ಬೆಳವಣಿಗೆಗೆ ಪೂರಕವಾಗಿ ಮಂಗಲ ಗ್ರಾಮದಲ್ಲಿ ಎರಡು ಎಕರೆ ನಡು ಗದ್ದೆಯಲ್ಲಿ 300ಕ್ಕೂ ಹೆಚ್ಚು ಸಸ್ಯಗಳನ್ನು ನೆಟ್ಟು ಪೋಷಿಸುವ ಕಾಯಕಕ್ಕೆ ಮುಂದಾಗಿದ್ದೇವೆ. ಆಲ, ಅರಳಿ, ಶ್ರೀಗಂಧ, ರಕ್ತಚಂದನ ಇನ್ನಿತರೆ ಜೀವವೈವಿಧ್ಯ ಗಿಡಗಳನ್ನು ಇಂದು ನಾಟಿ ಮಾಡಲಾಗುತ್ತಿದೆ ಎಂದರು.
ಈ ವೇಳೆ ಶ್ರೀ ಮಲ್ಲೇಶ್ವರಸ್ವಾಮಿ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ. ಶಂಕರೇಗೌಡ ಅಧ್ಯಕ್ಷತೆ ವಹಿಸಿದ್ದರು. ನೀರು ಬಳಕೆದಾರರ ಸಹಕಾರ ಸಂಘದ ಕಾರ್‍ಯದರ್ಶಿ ಎಂ.ಬಿ. ಸುರೇಶ್, ಉಪಾಧ್ಯಕ್ಷ ಚಂದ್ರಶೇಖರ್ ಇತರರು ಹಾಜರಿದ್ದರು.