ನ್ಯಾಮತಿ ತಾಲೂಕು ಗೋವಿನಕೋವಿ ಹೋಬಳಿಮಟ್ಟದ ಪ್ರಜಾ ಸೇವೆ ಆಂದೋಲನದ ಕಾರ್ಯಕ್ರಮದಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.
ನ್ಯಾಮತಿ: ಸಾರ್ವಜನಿಕರು ತಮ್ಮ ಸಣ್ಣಪುಟ್ಟ ಸಮಸ್ಯೆಗಳಿಗೆ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದು ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿ ಕಲಾಮಿತಿಯಲ್ಲಿ ವಿಲೇವಾರಿ, ಇಲಾಖೆಗಳ ಆಡಳಿತವನ್ನು ಪಾರದರ್ಶಕವಾಗಿ ಇಡುವುದೇ ಪ್ರಜಾಸೇವೆಯ ಉದ್ದೇಶವಾಗಿದೆ. ಕ್ಷೇತ್ರದ ಪ್ರತಿಯೊಬ್ಬ ಪ್ರಜೆಯ ಸಮಸ್ಯೆಗಳಿಗೆ ಸ್ಪಂದಿಸಿಸುವುದು ನಮ್ಮ ಆದ್ಯತೆಯಾಗಿದೆ. ಸಾರ್ವಜನಿಕರು ಸಲ್ಲಿಸುವ ಯಾವುದೇ ಸಮಸ್ಯೆಯ ದೂರುಗಳನ್ನು ಸ್ವೀಕರಿಸಿ ನಿರ್ಲಕ್ಯಕ್ಕೆ ಒಳಗಾಗದಂತೆ ಕ್ರಮ ಕೈಗೊಳಲಾಗುವುದು ಎಂದು ಶಾಸಕ ಡಿ.ಜಿ.ಶಾಂತನಗೌಡ ತಿಳಿಸಿದರು.
ತಾಲೂಕಿನ ಗೋವಿನಕೋವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಗೋವಿನಕೋವಿ ಹೋಬಳಿಮಟ್ಟದ ಪ್ರಜಾ ಸೇವೆ ಆಂದೋಲನದ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ಸರ್ಕಾರವು ಜನರ ಬಾಗಿಲಿಗೆ ಸರ್ಕಾರದ ಸೇವೆ ನೀಡುವ ಮೂಲಕ ಜನರ ಸಮಸ್ಯೆಗಳನ್ನು ಅಲಿಸಲು ಶ್ರಮಿಸುತ್ತಿದೆ. ಸರ್ಕಾರದ ಪ್ರಜಾಸೇವೆ ಆಂದೋಲನದ ಸೇವೆಯನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳುವಂತೆ ಹೇಳಿದರು.ಗೋವಿನಕೋವಿ ಹೋಬಳಿಮಟ್ಟದ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸಂಬಂಧಿಸಿದಂತೆ ತಾಲೂಕು ಪಂಚಾಯಿತಿಯ 43, ಕಂದಾಯ ಇಲಾಖೆಯ 12, ಆಹಾರ ಇಲಾಖೆಯ 8, ಸರ್ವೆ ಇಲಾಖೆಯ 7, ಕೃಷಿ, ಬೆಸ್ಕಾಂ ಇಲಾಖೆ, ಆರೋಗ್ಯ ಇಲಾಖೆಯ ಒಂದೊಂದು ಅರ್ಜಿಗಳು ಸೇರಿದಂತೆ 78 ಅರ್ಜಿಗಳು ಬಂದಿವೆ. ತುಂಗಾ ಚಾನಲ್ ಸಮಸ್ಯೆ, ಸರ್ಕಾರಿ ಬಸ್ಸಿನ ಸಮಸ್ಯೆ, ಕುರುವ ಗ್ರಾಮದ ಸ್ಮಶಾನ ಸಮಸ್ಯೆ ಬಗೆಹರಿಸುವಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಡಿ.ಜಿ.ಶಾಂತನಗೌಡ ಸೂಚಿಸಿದರು.
ಕಾರ್ಯಕ್ರಮದಲ್ಲಿ ತಾಲೂಕಿನ ತಹಸೀಲ್ದಾರ್ ವಿಶ್ವನಾಥ ಮುರುಡಿ, ಗ್ರೇಡ್-2 ತಹಸೀಲ್ದಾರ್ ಎಚ್.ಬಿ.ಗೋವಿಂದಪ್ಪ, ಆರ್‌ಐ ಎಸ್.ಸಂತೋಷ್, ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಗ್ರಾಮದ ಮುಖಂಡರು, ಸಾರ್ವಜನಿಕರು ಇದ್ದರು.