ಆಧಾರ್‌ ತಿದ್ದುಪಡಿ ಮಾಡಿಸಿಕೊಳ್ಳುವ ಉದ್ದೇಶದಿಂದ ಕೆಲವರು ರಾತ್ರಿಯೇ ಅಂಚೆ ಕಚೇರಿ ಮುಂದೆ ಹಾಸಿಗೆಗಳನ್ನು ತಂದು ಮಲಗಿಕೊಂಡು ಬೆಳಗ್ಗಿನವರೆಗೆ ಕಾಯುತ್ತಿದ್ದಾರೆ. ಹಿರಿಯ ನಾಗರಿಕರು, ಮಹಿಳೆಯರು ಮತ್ತು ಅಂಗವಿಕಲರೂ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ದುಸ್ಥಿತಿ ಕಂಡುಬರುತ್ತಿದೆ. ಅಗತ್ಯ ದಾಖಲೆಗಳ ತಿದ್ದುಪಡಿಗಾಗಿ ಇಷ್ಟೊಂದು ಕಷ್ಟಪಡಬೇಕಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಆಧಾರ್‌ ಕಾರ್ಡ್‌ ತಿದ್ದುಪಡಿ ಮಾಡಿಸಿಕೊಳ್ಳಲು ಬಾಣಾವರ ಅಂಚೆ ಕಚೇರಿ ಎದುರು ಸಾರ್ವಜನಿಕರು ರಾತ್ರಿಯಿಡೀ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಗತ್ಯ ಸೇವೆ ಪಡೆಯಲು ಜನರು ಪರದಾಡುವಂತಾಗಿದೆ. ಸೀಮಿತ ಸಂಖ್ಯೆಯಲ್ಲಿ ಟೋಕನ್ ವಿತರಿಸುತ್ತಿರುವುದರಿಂದ ವಯೋವೃದ್ಧರು, ಮಹಿಳೆಯರು, ಮಕ್ಕಳು ಹಾಗೂ ಅಂಗವಿಕಲರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ಸೇರಿದಂತೆ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ್‌ ವಿವರಗಳ ತಿದ್ದುಪಡಿ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಪ್ರತಿನಿತ್ಯ ಬಾಣಾವರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಮಂದಿ ಅಂಚೆ ಕಚೇರಿಗೆ ಆಗಮಿಸುತ್ತಿದ್ದಾರೆ. ಆದರೆ, ದಿನವೊಂದಕ್ಕೆ ಕೇವಲ 30 ಮಂದಿಗೆ ಮಾತ್ರ ಟೋಕನ್ ನೀಡುತ್ತಿರುವುದರಿಂದ ಬಹುತೇಕರು ಕೆಲಸವಾಗದೆ ನಿರಾಸೆಯಿಂದ ವಾಪಸಾಗಬೇಕಾದ ಅನಿವಾರ್ಯತೆ ಎದುರಾಗಿದೆ.

ಆಧಾರ್‌ ತಿದ್ದುಪಡಿ ಮಾಡಿಸಿಕೊಳ್ಳುವ ಉದ್ದೇಶದಿಂದ ಕೆಲವರು ರಾತ್ರಿಯೇ ಅಂಚೆ ಕಚೇರಿ ಮುಂದೆ ಹಾಸಿಗೆಗಳನ್ನು ತಂದು ಮಲಗಿಕೊಂಡು ಬೆಳಗ್ಗಿನವರೆಗೆ ಕಾಯುತ್ತಿದ್ದಾರೆ. ಹಿರಿಯ ನಾಗರಿಕರು, ಮಹಿಳೆಯರು ಮತ್ತು ಅಂಗವಿಕಲರೂ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ದುಸ್ಥಿತಿ ಕಂಡುಬರುತ್ತಿದೆ. ಅಗತ್ಯ ದಾಖಲೆಗಳ ತಿದ್ದುಪಡಿಗಾಗಿ ಇಷ್ಟೊಂದು ಕಷ್ಟಪಡಬೇಕಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸಾರ್ವಜನಿಕರು ಸರ್ಕಾರ, ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಆಧಾರ್‌ ತಿದ್ದುಪಡಿ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಿ, ಹೆಚ್ಚಿನ ಸಿಬ್ಬಂದಿ ನಿಯೋಜಿಸುವ ಮೂಲಕ ಜನರಿಗೆ ಸುಲಭವಾಗಿ ಸೇವೆ ದೊರೆಯುವಂತೆ ಮಾಡಬೇಕು. ಜೊತೆಗೆ, ಟೋಕನ್ ವಿತರಣೆಯಲ್ಲಿನ ಮಿತಿಗಳನ್ನು ಮರುಪರಿಶೀಲಿಸಿ ಸಾರ್ವಜನಿಕರ ಸಮಯ ಮತ್ತು ಶ್ರಮ ಉಳಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಕಚೇರಿಗಳಲ್ಲಿ ಕುಳಿತು ಆದೇಶ ಹೊರಡಿಸುವ ಅಧಿಕಾರಿಗಳು ಜನರು ಎದುರಿಸುತ್ತಿರುವ ವಾಸ್ತವ ಸಮಸ್ಯೆಗಳನ್ನು ಅರಿಯಲು ಇಂತಹ ಕೇಂದ್ರಗಳಿಗೆ ಭೇಟಿ ನೀಡಬೇಕು. ರಾತ್ರಿಯಿಡೀ ಕಚೇರಿ ಎದುರು ಕಾಯುವ ಜನರ ಸಂಕಷ್ಟವನ್ನು ಗಮನಿಸಿ ತಕ್ಷಣ ಕ್ರಮ ಕೈಗೊಂಡಾಗ ಮಾತ್ರ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.