ಬಿಸಿಲಿನ ಪ್ರಖರತೆಗೆ ಬಳಲಿದ ಜನತೆ

| Published : Apr 02 2024, 01:05 AM IST

ಸಾರಾಂಶ

ಮುದ್ದೇಬಿಹಾಳ: ಒಂದು ಕಡೆ ಲೋಕಸಭೆ ಚುನಾವಣೆಯ ಕಣ ರಂಗೇರುತ್ತಿದ್ದರೆ, ಮತ್ತೊಂದೆಡೆ ಬಿಸಿಲಿನ ಧಗೆ ಜನರನ್ನು ಹೈರಾಣಾಗಿಸಿದೆ. ಬಿಸಿಲಿನ ತಾಪಕ್ಕೆ ಜನರು ಹೊರಗೆ ಬರಲು ಹಿಂದೇಟು ಹಾಕುವಂತಾಗಿದೆ.

ನಾರಾಯಣ ಮಾಯಾಚಾರಿ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳಒಂದು ಕಡೆ ಲೋಕಸಭೆ ಚುನಾವಣೆಯ ಕಣ ರಂಗೇರುತ್ತಿದ್ದರೆ, ಮತ್ತೊಂದೆಡೆ ಬಿಸಿಲಿನ ಧಗೆ ಜನರನ್ನು ಹೈರಾಣಾಗಿಸಿದೆ. ಬಿಸಿಲಿನ ತಾಪಕ್ಕೆ ಜನರು ಹೊರಗೆ ಬರಲು ಹಿಂದೇಟು ಹಾಕುವಂತಾಗಿದೆ.

ಪಟ್ಟಣದಲ್ಲಿ ಈಗ ೪೦ ರಿಂದ ೪೨ ಡಿಗ್ರಿವರೆಗೆ ಉಷ್ಣಾಂಶ ದಾಖಲಾಗುತ್ತಿರುವುದು ಕಂಡುಬಂದಿದೆ. ಬೆಳಗ್ಗೆಯಾಗುತ್ತಲೆ ನೆತ್ತಿಸುಡುವ ಬಿಸಿಲು ಶುರುವಾಗುತ್ತಿದ್ದು, ಜನರು ಮನೆಯಿಂದ ಹೊರಗೆ ಕಾಲಿಡಲು ಹಿಂಜರಿಯುವಂತಾಗಿದೆ. ಅನಿವಾರ್ಯತೆಯಿದ್ದರೆ ಮಾತ್ರ ಕೊಡೆಗಳನ್ನು ಹಿಡಿದು ಹೊರಗೆ ಬರುತ್ತಿದ್ದಾರೆ. ಬಿಸಿಲಿನ ತಾಪ ತಾಳಲಾರದೆ ಜನರು ಗಿಡದ ನೆರಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅಲ್ಲದೆ, ರಸ್ತೆಯ ಅಕ್ಕಪಕ್ಕದಲ್ಲಿರುವ ತಂಪು ಪಾನಿಯ ಸೇವಿಸಿ ಜನರು ಧಗೆ ತಣಿಸಿಕೊಳ್ಳುತ್ತಿದ್ದಾರೆ.

ಬೇಸಿಗೆ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳು ಬೆಳಗ್ಗೆ ೮ ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ಮಾತ್ರ ಕರ್ತವ್ಯ ನಿರ್ವಹಿಸುತ್ತಿವೆ. ಇತ್ತ ಅಧಿಕಾರಿಗಳು ಲೋಕಸಭಾ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಕಾರಣ ಸಾರ್ವಜನಿಕರಿಗೆ ಸರ್ಕಾರಿ ಕೆಲಸಗಳು ಅಡಚಣೆಯಾಗುತ್ತಿವೆ. ಗ್ರಾಮೀಣ ಭಾಗಗಳಿಂದ ಕಚೇರಿಗೆ ಬರುವ ಸಾರ್ವಜನಿಕರು ಕಚೇರಿಯಲ್ಲಿ ಅಧಿಕಾರಿಗಳಿಗಾಗಿ ಕಾದು ಕಾದು ಸುಸ್ತಾಗಿ ಮನೆಗೆ ಮರಳುವಂತಾಗಿದೆ.

ಇನ್ನು ಮನೆಯಲ್ಲಿದ್ದರೂ ನೆಮ್ಮದಿ ಇಲ್ಲದಂತಾಗಿದೆ. ಎಷ್ಟೇ ನೀರು ಕುಡಿದರೂ ತೀರುತ್ತಿಲ್ಲ. ಕುಡಿಯುವ ನೀರು ಬಿಸಿಯಾಗುತ್ತಿದೆ. ಸ್ನಾನ ಮಾಡಲು ನೀರು ಕಾಯಿಸುವ ಅವಶ್ಯಕತೆಯೇ ಬೀಳುತ್ತಿಲ್ಲ. 11 ಗಂಟೆಯಾದರೆ ಸಿಂಟೆಕ್ಸ್‌ಗಳಲ್ಲಿನ ನೀರು ಬಿಸಿಯಾಗುತ್ತಿದೆ. ಫ್ಯಾನ್‌ಗಳಿದ್ದರೂ ಅವುಗಳೂ ಬಿಸಿಯ ಗಾಳಿಯನ್ನೇ ನೀಡುತ್ತಿವೆ. ರಾತ್ರಿ 12 ಗಂಟೆಯಾದರೂ ನಿದ್ರೆ ಬಾರದಂತಾಗಿದೆ. ಅನೇಕರು ಮನೆಯ ಮಹಡಿ ಮೇಲೆ, ಬಯಲಿನಲ್ಲಿ ಮಲಗುತ್ತಿದ್ದಾರೆ. ಕೆಲವರು ಎಸಿ, ಕೂಲರ್‌ಗಳ ಮೊರೆ ಹೋಗುತ್ತಿದ್ದಾರೆ.

ಇನ್ನೂ ಎರಡು ತಿಂಗಳು ಬೇಸಿಗೆ ಇರುವುದರಿಂದ ಬಿಸಿಲಿನ ತಾಪ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಜನರು ಮುಂದಿನ ದಿನಗಳನ್ನು ಕಳೆಯುವುದು ಹೇಗೆ ಎಂಬ ಚಿಂತೆಯಲ್ಲಿ ಕಾಲ ಕಳೆಯುತ್ತಿದ್ದಾರೆ.

---------------

ಬಾಕ್ಸ್‌....

ಬಹುತೇಕ ಕಾಲುವೆಗಳಿಗೆ ಹರಿದ ನೀರು

ಸ್ಥಳೀಯ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್. ನಾಡಗೌಡ (ಅಪ್ಪಾಜಿ) ಮತ್ತು ವಿವಿಧ ಸಂಘಟನೆಗಳು ತಾಲೂಕಿನ ರೈತರ ಒತ್ತಾಯ ಹಾಗೂ ಪ್ರತಿಭಟನೆಗೆ ಮಣಿದು ಕೃಷ್ಣಾ ಭಾಗ್ಯ ಜಲನಿಗಮ ಮಂಡಳಿಯ ಅಧಿಕಾರಿಗಳು ತಾಲೂಕಿನ ಬಹುತೇಕ ಕಾಲುವೆಗಳಿಗೆ ನೀರು ಹರಿಸಿ ಕೆರೆತುಂಬುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಕೆಲವೆಡೆ ದನಕರುಗಳಿಗೆ ಅಲ್ಪ ಪ್ರಮಾಣದಲ್ಲಿ ನೀರು ದೊರಕುವಂತಾಗಿದೆ.

---

ನೀರಿನ ಅರವಟ್ಟಿಗೆ ಸ್ಥಾಪನೆ

ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ಪಟ್ಟಣದ ಮುಖ್ಯ ಬಜಾರದಲ್ಲಿ ಬೇಸಿಗೆ ನಿಮಿತ್ತ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಪಟ್ಟಣದ ಹಲವು ಪ್ರದೇಶಗಳಲ್ಲಿ ನೀರಿನ ಅರವಟ್ಟಿಗೆ ನಿರ್ಮಾಣ ಮಾಡಲಾಗಿದೆ. ಇದರಿಂದ ಪಟ್ಟಣಕ್ಕೆ ಆಗಮಿಸುವ ಜನರ ಬಾಯಾರಿಕೆ ನೀಗಿಸಿಕೊಳ್ಳಲು ಸಹಾಯವಾಗಿದೆ.

--------

ಕೋಟ್

ಈ ಬಾರಿ ಸಮರ್ಪಕ ಮಳೆಯಾಗದೇ ಇರುವುದರಿಂದ ಬರಗಾಲ ಎದುರಾಗಿದೆ. ಇದರಿಂದ ವಿಪರೀತ ಬಿಸಿಲಿನಿಂದ ಜನರು ಬಸವಳಿದಿದ್ದಾರೆ. ಪಟ್ಟಣದಲ್ಲಿ ಜನರಿಗೆ ಕುಡಿಯುವ ನೀರಿನ ಯಾವುದೇ ಸಮಸ್ಯೆ ಎದುರಾಗಿಲ್ಲ. ಸಮರ್ಪಕವಾಗಿ ಎಲ್ಲರಿಗೂ ಮೊದಲಿನಂತೆ ನದಿ ನೀರು ಪೂರೈಸಲಾಗುತ್ತಿದೆ.

-ಮಲ್ಲನಗೌಡ ಬಿರಾದಾರ, ಮುಖ್ಯಾಧಿಕಾರಿ ಪುರಸಭೆ ಮುದ್ದೇಬಿಹಾಳ