ಸಾರಾಂಶ
ಕೊಪ್ಪಳ:
ರಣ ಬಿಸಿಲಿದ್ದರೂ ಬರಿಗಾಲಿನಲ್ಲಿಯೇ ತಿರುಗಬೇಕು. ಗ್ರಾಮದೊಳಗೆ ಯಾವ ವಾಹನಕ್ಕೂ ಪ್ರವೇಶವಿಲ್ಲ. ಮಿಕ್ಸಿ ತಿರುಗುವಂತಿಲ್ಲ.ಇದು ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಸೋಮವಾರ ಕಂಡು ಬಂದ ದೃಶ್ಯ. 14 ವರ್ಷದ ಬಳಿಕ ಗ್ರಾಮದಲ್ಲಿ ಗ್ರಾಮದೇವತೆ ಜಾತ್ರೆ ನಡೆಯುತ್ತಿದ್ದು ಹಲವು ಧಾರ್ಮಿಕ ಕಾರ್ಯಕ್ರಮ ಜರುಗಿವೆ. ಹೀಗಾಗಿ ಇಂತಹ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ.
5 ದಿನದ ಜಾತ್ರೆ:ಗ್ರಾಮದೇವತೆ ಜಾತ್ರೆ ಐದು ದಿನ ನಡೆಯಲಿದ್ದು ಮೊದಲ ಮೂರು ದಿನ ದೇವಿಗೆ ಧಾರ್ಮಿಕ ವಿಧಿ-ವಿಧಾನ ನಡೆಯಲಿದೆ. ಹೀಗಾಗಿ ಸೋಮವಾರದಿಂದ ಬುಧವಾರ ವರೆಗೂ ಗ್ರಾಮದಲ್ಲಿ ಯಾರೂ ಚಪ್ಪಲಿ ಧರಿಸುವಂತಿಲ್ಲ. ಮನೆಯಲ್ಲಿ ಮಿಕ್ಸಿ ಬಳಸುವಂತಿಲ್ಲ. ಎತ್ತಿನ ಬಂಡಿ, ತಳ್ಳುಬಂಡಿ, ಬೈಕ್ ಸೇರಿದಂತೆ ಇತರೇ ವಾಹನಗಳ ಓಡಾಟಕ್ಕೆ ಅವಕಾಶವಿಲ್ಲ. ಸಾರಿಗೆ ಬಸ್ ಅಂತೂ ಪ್ರವೇಶವೇ ಇಲ್ಲ. ಗ್ರಾಮದಲ್ಲಿ ಗ್ರಾಮಸ್ಥರಿಗೆ ಮಾತ್ರ ಪ್ರವೇಶವಿದ್ದು ಅವರ ಮಡಿಯಿಂದಲೇ ಇರಬೇಕು. ಈ ಹಿನ್ನೆಲೆ ಅಬಾಲವೃದ್ಧರಿಂದ ಹಿಡಿದು ಎಲ್ಲರು ಗ್ರಾಮದಲ್ಲಿ, ಮೆರವಣಿಗೆ ವೇಳೆ ಚಪ್ಪಲಿ ಧರಿಸುವಂತಿಲ್ಲ.
ಬಂದಳು ದೇವತೆ:ಗ್ರಾಮದೇವತೆಯನ್ನು ಜಾತ್ರೆ ನಿಮಿತ್ತ ಬಣ್ಣಕ್ಕೆ ಕಳುಹಿಸಲಾಗಿತ್ತು. ಸೋಮವಾರ ಬಣ್ಣ ಮಾಡಿಸಿಕೊಂಡ ಬಂದ ದೇವತೆಯನ್ನು ಫಲ್ಲಕ್ಕಿಯಲ್ಲಿ ಮೆರವಣಿಗೆಯಲ್ಲಿ ಕರೆತಂದು, ಚೌಕಿಕಟ್ಟೆಯಲ್ಲಿ ಕೂಡ್ರಿಸಲಾಗಿದೆ. ಮೂರನೇ ದಿನ ಗುಡಿಯ ಗದ್ದುಗೆಯಲ್ಲಿ ಕೂಡ್ರಿಸಲಾಗುತ್ತದೆ. ಆದಾದ ನಂತರ ಎಲ್ಲವೂ ಎಂದಿನಂತೆ ಇರುತ್ತದೆ. ಅಲ್ಲಿಯವರೆಗೂ ಈ ಕಟ್ಟುನಿಟ್ಟಿನ ಆಚರಣೆ ಮಾಡುತ್ತೇವೆ ಎನ್ನುತ್ತಾರೆ ಗ್ರಾಮದ ಈರಣ್ಣ.
ಚೌಕಿ ಕಟ್ಟೆಯಲ್ಲಿ ಕುಳಿತಿರುವ ಗ್ರಾಮದೇವತೆಯನ್ನು ಏ. 22ರಂದು ಗ್ರಾಮದಲ್ಲಿ ಮೆರವಣಿಗೆ ಮಾಡಿದರೆ, 23ರಂದು ಬ್ಯಾಟಿ ಮಾಡಲಾಗುತ್ತದೆ. ಅದಾದ ಮೇಲೆ ಉಡಿ ತುಂಬುವ ಕಾರ್ಯ ನಡೆಯುತ್ತದೆ.ಗ್ರಾಮಸ್ಥರ ನಿರ್ಧಾರ:
ಜಾತ್ರೆ ನಿಮಿತ್ತ ಸಭೆ ನಡೆಸಿ ಗ್ರಾಮಸ್ಥರು ಗ್ರಾಮದಲ್ಲಿ 14 ವರ್ಷದ ಬಳಿಕ ಗ್ರಾಮದೇವತೆ ಜಾತ್ರೆ ನಡೆಯುತ್ತಿದ್ದು ಕಟ್ಟುನಿಟ್ಟಾಗಿ ಮಾಡಬೇಕೆಂದು ತೀರ್ಮಾನಿಸಿದ್ದು ಅದರಂತೆ ಮಾಡಲಾಗುತ್ತಿದೆ.