ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಎಲ್ಲಾ ಇಲಾಖೆ, ನಿಗಮ, ಮಂಡಳಿಗಳು ಸಾವಿರಾರು ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡುತ್ತಿರುವುದು ಸರ್ಕಾರಕ್ಕೆ ಸಂತಸ ತಂದಿದೆ. ಇಂತಹ ಜನಕಲ್ಯಾಣ ಕಾರ್ಯಕ್ರಮಗಳು ಇತರೆ ಜಿಲ್ಲೆಗಳಲ್ಲಿಯೂ ಆಯೋಜಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ಅವರು ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ನಮ್ಮ ಸರ್ಕಾರದ ಸಾಧನೆಗೆ ನೆರೆದಿರುವ ಜನಸ್ತೋಮವೇ ಸಾಕ್ಷಿ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಗ್ರಾಮ ಪಂಚಾಯತಿಯಿಂದ ಕ್ರಾಂತಿಯೋಗಿ ಬಸವಣ್ಣ, ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಯವರ ಕರ್ಮಭೂಮಿಯಾದ ರಾಜ್ಯದ ಅಭಿವೃದ್ಧಿಗೆ ಗ್ಯಾರಂಟಿ ಯೋಜನೆಗಳು ಶಕ್ತಿ ನೀಡಿದೆ ಎಂದರು.ಸರ್ಕಾರ ಅಧಿಕಾರಕ್ಕೆ ಬಂದಾಗ ಹತ್ತಾರು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಭೂಸ್ವಾಧೀನ, ಹಕ್ಕುಪತ್ರ ವಿತರಣೆ ಸಾಧನೆ ಮಾಡಿದ ಕಂದಾಯ ಇಲಾಖೆಗೆ ಅಭಿನಂದನೆ ತಿಳಿಸಿದರಲ್ಲದೆ, ಜಿಲ್ಲೆಗೆ ಕುಡಿಯುವ ನೀರು ಒದಗಿಸಲು ನೀರಾವರಿ ಯೋಜನೆಗಳನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಗುವುದು ಎಂದರು.ಜಿಲ್ಲೆಯ 7 ಶಾಸಕರನ್ನು ಆಯ್ಕೆ ಮಾಡಿ ಸರ್ಕಾರದ ಅಭ್ಯುದಯಕ್ಕೆ ಕಾರಣರಾಗಿ ಆಡಳಿತವನ್ನು ಮುನ್ನಡೆಸಲು ಶಕ್ತಿ ನೀಡಿದ ಈ ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಸರ್ಕಾರ ಬದ್ಧವಾಗಿದೆ. ಜನರು ನಮ್ಮ ಸರ್ಕಾರವನ್ನು ನಂಬಿ ಗೆಲ್ಲಿಸಿದ್ದಾರೆ. ಜನರ ನಂಬಿಕೆಯನ್ನು ಹುಸಿ ಮಾಡುವುದಿಲ್ಲವೆಂದು ಭರವಸೆ ನೀಡಿದರು.