ಬೇಸಿಗೆ ಧಗೆಗೆ ತತ್ತರಿಸುತ್ತಿರುವ ಜನತೆ

| Published : Apr 04 2024, 01:03 AM IST

ಸಾರಾಂಶ

ದೇಹ ತಂಪಾಗಿಸಲು ತಂಪು ಪಾನೀಯ, ಕಲ್ಲಂಗಡಿ, ಕಬ್ಬಿನ ಹಾಲು, ಎಳನೀರಿಗೆ ಮುಗಿ ಬೀಳುತ್ತಿದ್ದು, ಹೆಚ್ಚಿನ ಬೇಡಿಕೆ ಬಂದಿದೆ. ಕೆಲವೆಡೆ ಹಳ್ಳ, ಕೆರೆಗಳು ಬತ್ತಿದ್ದು, ದನಕರುಗಳಿಗೂ ಕುಡಿಯಲು ನೀರಿಲ್ಲದಂತಾಗಿದೆ

ಮಹದೇವಪ್ಪ ಎಂ. ಸ್ವಾಮಿ ಶಿರಹಟ್ಟಿ

ಎಲ್ಲೆಡೆಯಂತೆ ತಾಲೂಕಿನಲ್ಲೂ ಬಿಸಿಲು, ಉಷ್ಣ ಗಾಳಿಯ ಪ್ರಮಾಣ ವಿಪರೀತ ಹೆಚ್ಚಾಗಿದ್ದು, ತಾಲೂಕಿನಲ್ಲಿ ೩೯ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರಿಕೆಯಾಗಿದ್ದು, ಜನತೆ ತತ್ತರಿಸಿದ್ದಾರೆ. ಈ ಮಧ್ಯೆ ವಿದ್ಯುತ್‌ ಕಣ್ಣು ಮುಚ್ಚಾಲೆ, ಕುಡಿಯುವ ನೀರಿನ ಬರ ಜನರನ್ನು ಮತ್ತಷ್ಟು ಹೈರಾಣಾಗಿಸಿದೆ.

ಬಿಸಿಲಿನ ಬೇಗೆಗೆ ಜನರು ಮಧ್ಯಾಹ್ನದ ಹೊತ್ತಿನಲ್ಲಿ ಮನೆಯಿಂದ ಹೊರ ಬೀಳುತ್ತಿಲ್ಲ. ಅಗತ್ಯ ಕೆಲಸಕ್ಕೆ ಹೊರ ಬಂದವರೂ 11-12 ಗಂಟೆಯ ಹೊತ್ತಿಗೆ ಮನೆ ಸೇರಿಕೊಳ್ಳುತ್ತಿದ್ದಾರೆ. ಬಿಸಿಲಿನ ಝಳಕ್ಕೆ ಜನ ತಂಪು ಪಾನೀಯ, ಹಣ್ಣು, ಮಜ್ಜಿಗೆಗಳ ಮೊರೆ ಹೋಗಿದ್ದರೆ, ತಂಪಾದ ಪ್ರದೇಶ, ಉದ್ಯಾನವನಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಆದರೆ ಎಲ್ಲೆಡೆ ಬಿಸಿ ಗಾಳಿಯಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

ತಂಪು ಪಾನೀಯಕ್ಕೆ ಬೇಡಿಕೆ: ಮನೆ ಬಿಟ್ಟು ಆಚೆ ಬಂದರೆ ಬಿಸಿಲಿನ ಧಗೆ. ಊಟ, ತಿಂಡಿ ಏನೇ ತಿಂದರೂ ಅರಗಿಸಿಕೊಳ್ಳಲು ಸಾಕಷ್ಟು ವೇಳೆ ಹಿಡಿಯುತ್ತದೆ. ದೇಹ ತಂಪಾಗಿಸಲು ತಂಪು ಪಾನೀಯ, ಕಲ್ಲಂಗಡಿ, ಕಬ್ಬಿನ ಹಾಲು, ಎಳನೀರಿಗೆ ಮುಗಿ ಬೀಳುತ್ತಿದ್ದು, ಹೆಚ್ಚಿನ ಬೇಡಿಕೆ ಬಂದಿದೆ. ಕೆಲವೆಡೆ ಹಳ್ಳ, ಕೆರೆಗಳು ಬತ್ತಿದ್ದು, ದನಕರುಗಳಿಗೂ ಕುಡಿಯಲು ನೀರಿಲ್ಲದಂತಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಜನರ ಕೈಗೆ ಸಿಗದಂತಾಗಿದ್ದು, ಕಪ್ಪತ್ತಗುಡ್ಡದಲ್ಲಿ ಕಾಡು ಪ್ರಾಣಿ, ಪಕ್ಷಿ ಸಂಕುಲಗಳು ನೀರಿಗಾಗಿ ಪರಿಸತಪಿಸುವ ಪ್ರಸಂಗ ಎದುರಾಗಿದೆ. ಬಿಸಿಲಿನ ಝಳ, ಸೆಕೆಯ ಪ್ರಮಾಣ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದು, ಜನರು ಬಿಸಿಲಿನಿಂದ ಮತ್ತಷ್ಟು ತೊಂದರೆಗೆ ಸಿಲುಕುವುದಂತೂ ಸತ್ಯ.

ತಾಲೂಕಿನಲ್ಲಿ ಹಿಂದೆಂದಿಗಿಂತಲೂ ದಾಖಲೆ ಪ್ರಮಾಣದಲ್ಲಿ ಉಷ್ಣಾಂಶ ಕಂಡುಬರುತ್ತಿದೆ. ಬೆಳಗ್ಗೆ ೮ರಿಂದಲೇ ಬಿಸಿಲಿನ ಪ್ರಖರತೆ ಹೆಚ್ಚುತ್ತಲಿದೆ. ಮಧ್ಯಾಹ್ನದ ಹೊತ್ತಿಗೆ ಬೆಂಕಿಯ ಎದುರು ಕುಳಿತಂತೆ ಭಾಸವಾಗುತ್ತದೆ. ಹೊರಗಡೆ ಬಿಸಿಲಿನ ಝಳ ಅನುಭವಿಸುವುದೇ ದೊಡ್ಡ ಸಮಸ್ಯೆಯಾಗಿದೆ. ಗ್ರಾಮಗಳಲ್ಲಿ ಗಿಡ, ಮರ, ತೋಟಗಳನ್ನು ತಾತ್ಕಾಲಿಕವಾಗಿ ಆಶ್ರಯ ತಾಣಗಳನ್ನಾಗಿ ಮಾಡಿಕೊಳ್ಳಲಾಗುತ್ತಿದೆ ಎಂದು ಕಡಕೋಳ ಗ್ರಾಮದ ರೈತ ಶರಣಪ್ಪ ಹರ್ಲಾಪೂರ ಹೇಳಿದರು.