ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳ
ಅಧಿಕಾರ ಬಂದಾಗ ನಾವು ಜನರ ಸೇವೆ ಸರಿಯಾಗಿ ಮಾಡಿದರೇ ಖಂಡಿತವಾಗಿಯೂ ಜನರು ನಮ್ಮನ್ನು ಬಿಡುವುದಿಲ್ಲ ಎಂದು ವಸತಿ, ವಕ್ಪ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಬಿ. ಜೆಡ್. ಜಮೀರ್ ಅಹ್ಮದ್ ಖಾನ್ ಹೇಳಿದರು.ಭಾನುವಾರ ಕೊಪ್ಪಳ ನಗರಸಭೆಯಿಂದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಕರ್ತರು ಹಾಗೂ ಪೌರಸೇವಾ ನೌಕರ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಹಕ್ಕುಪತ್ರಗಳನ್ನು ವಿತರಣೆ ಮಾಡಿ ಮಾತನಾಡಿದರು.
ಮಾಧ್ಯಮ ಸ್ನೇಹಿತರು ಹಾಗೂ ಪೌರ ಸೇವಾ ಕಾರ್ಮಿಕರ ಹಕ್ಕುಪತ್ರಗಳ ವಿತರಣೆಯ ಹತ್ತು ವರ್ಷಗಳ ಕನಸು ಈಗ ನನಸಾಗಿದೆ. ಅವರಿಗೆ ಸೈಟ್ ಕೊಟ್ಟರೆ ಸಾಲದು ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಆಗಬೇಕು. ಅಂದಾಗ ಸೈಟ್ ನೀಡಿದ್ದಕ್ಕೂ ಸಾರ್ಥಕ ಆಗುತ್ತದೆ ಮತ್ತು ಅದರ ಉಪಯೋಗ ಸಹ ಆಗುತ್ತದೆ. ಇದಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಯಿಂದ ಸ್ವಲ್ಪ ಹಣ ನೀಡಿ ನನ್ನ ಇಲಾಖೆಯಿಂದಲೂ ಅನುದಾನ ಕೊಡುತ್ತೇನೆ ಎಂದು ಕೊಪ್ಪಳ ಶಾಸಕರಿಗೆ ಹೇಳಿದರು.ನಮ್ಮ ಇಲಾಖೆಯಿಂದ ಮನೆ ಇಲ್ಲದವರ ಸರ್ವೇ ಮಾಡಿಸಿದ್ದೇವೆ. ನಾವು ಯಾವುದೇ ಜಾತಿ ಭೇದ ಮಾಡದೆ ಎಲ್ಲಾ ಬಡ ಜನರಿಗೆ ಮನೆ ಕೊಡುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಂಡ ಒಂದು ತಿಂಗಳಲ್ಲಿ ಬಡವರಿಗಾಗಿ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದರು. ಕಳೆದ ವರ್ಷ ಫೆಬ್ರುವರಿಯಲ್ಲಿ 36,780 ಮನೆಗಳನ್ನು ರಾಜ್ಯದ ಬಡವರಿಗೆ ಕೊಟ್ಟಿದ್ದೇವೆ ಎಂದು ಹೇಳಿದರು.
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿ, ವಸತಿ ಸಚಿವ ಜಮೀರ್ ಅಹ್ಮದ್ ಅವರಿಗೆ ಬಡವರ ಬಗ್ಗೆ ವಿಶೇಷ ಕಾಳಜಿ ಇದೆ. ಹೆಚ್ಚು ಸೈಟಗಳನ್ನು ಬಡವರಿಗೆ ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. 30 ವರ್ಷಗಳ ಹಿಂದೆ ನಾನು ವಸತಿ ಸಚಿವನಾಗಿದ್ದಾಗ ಮನೆ ಇಲ್ಲದವರ ಸರ್ವೇ ಮಾಡಿಸಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡವರಿಗಾಗಿ ಹಲವಾರು ಕಾರ್ಯಕ್ರಮ ಜಾರಿಗೆ ತಂದಿದ್ದಾರೆ. ಶಾಲಾ- ಮಕ್ಕಳಿಗೆ ಪಠ್ಯ ಪುಸ್ತಕ, ಬಟ್ಟೆ, ಹಾಲು, ಶೂ, ಮೊಟ್ಟೆ, ಚಕ್ಕಿ, ಬಾಳೆಹಣ್ಣು ವಿತರಣೆ ಹಾಗೂ ಅಂಗನವಾಡಿಗಳು ಸೇರಿದಂತೆ ಇವೆಲ್ಲಕ್ಕೆ ₹1.5 ಲಕ್ಷ ಸಾವಿರ ಕೋಟಿ ಖರ್ಚು ಮಾಡುತ್ತಿದ್ದೇವೆ. ನಮಗೆ ಹಣದ ಯಾವುದೇ ಸಮಸ್ಯೆ ಇಲ್ಲ. ದೇಶದಲ್ಲಿ ಯಾವುದೇ ರಾಜ್ಯದಲ್ಲಿ ಇಷ್ಟೊಂದು ಜನಪರ ಕಾರ್ಯ ಯಾರು ಮಾಡಿಲ್ಲ ಎಂದು ಹೇಳಿದರು.ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಮೀರ್ ಅಹ್ಮದ್ ಖಾನ್ ವಸತಿ ಸಚಿವರಾದ ಮೇಲೆ ಹಲವಾರು ಬದಲಾವಣೆ ಇಲಾಖೆಯಲ್ಲಿ ತಂದಿದ್ದಾರೆ. ಹಿಂದೆ ನಜೀರ ಸಾಬ ಹೇಗೆ ಎಲ್ಲಾ ಕಡೆ ಬೋರವೆಲ್ ಕೊರೆದು ನೀರಸಾಬ ಎಂದು ಹೆಸರಾಗಿದ್ದರು. ಹಾಗೇ ಜಮೀರ್ ಅಹ್ಮದ್ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಂಸದ ಕೆ.ರಾಜಶೇಖರ ಬಸವರಾಜ ಹಿಟ್ನಾಳ ಹಾಗೂ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿದರು. ಪತ್ರಕರ್ತರು ಹಾಗೂ ಪೌರ ಸೇವಾ ನೌಕರ ಫಲಾನುಭವಿಗಳಿಗೆ ಸಾಂಕೇತಿಕವಾಗಿ ನಿವೇಶನ ಹಕ್ಕುಪತ್ರ ವಿತರಿಸಲಾಯಿತು.ಈ ಸಂದರ್ಭ ಕರ್ನಾಟಕ ವಕ್ಪ್ ಬೋರ್ಡ್ ಅಧ್ಯಕ್ಷ ಕೆ.ಅನ್ವರ ಭಾಷಾ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್ ಗುಪ್ತಾ, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್.ಎಫ್ ಇಮಾಮ್ ನಿಯಾಜಿ, ಕೊಪ್ಪಳ ನಗರಸಭೆ ಉಪಾಧ್ಯಕ್ಷೆಅಶ್ವಿನಿ ಭಗತ್ ಗದುಗಿನಮಠ, ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ ಪಾಶಾ ಪಲ್ಟನ್, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಸೀಲ್ದಾರ ವಿಠ್ಠಲ ಚೌಗಲಾ, ಕಾರ್ಯನಿರತ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷ ಹನುಮಂತಪ್ಪ ಹಳ್ಳಿಕೇರಿ, ಕೊಪ್ಪಳ ಮೀಡಿಯಾ ಕ್ಲಬ್ ಅಧ್ಯಕ್ಷ ರವೀಂದ್ರ ವಿ.ಕೆ., ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಮಂಜುನಾಥ ಗೊಂಡಬಾಳ, ನಗರಸಭೆ ಹಾಗೂ ಸ್ಥಾಯಿ ಸಮಿತಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಇತರೆ ಹಲವಾರು ಜನರು ಉಪಸ್ಥಿತರಿದ್ದರು.