ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ವಿಕಲಚೇತನರಲ್ಲಿ ದೇಹದ ಒಂದು ಭಾಗ ಮಾತ್ರ ಕೊರತೆ ಇರುತ್ತದೆ. ಆದರೆ, ಯಾವುದೇ ಸಮಸ್ಯೆ ಎದುರಿಸಲು ಮಾನಸಿಕವಾಗಿ ಸದೃಢರಾಗಿರುತ್ತಾರೆ ಎಂದು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ದೀಪಕ್ ಪಾಟೀಲ್ ಅಭಿಪ್ರಾಯಪಟ್ಟರು.ಪಟ್ಟಣದ ತಾಪಂ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಅಭಿಯೋಜನಾ ಇಲಾಖೆಯ ಸಹಭಾಗಿತ್ವದಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಿಶೇಷ ಚೇತನರ ದಿನ ಮತ್ತು ವಿಶ್ವ ಮಾನವ ಹಕ್ಕುಗಳ ದಿನದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಕಲಚೇತನರಲ್ಲಿ ಮನಸ್ಸಿನ ದೃಢ ನಿಶ್ಚಯ, ದೈಹಿಕ ಮತ್ತು ರೋಗಪ್ರತಿರೋಧಕ ಶಕ್ತಿ ಬಹಳ ಉತ್ತಮವಾಗಿದೆ. ಬಹುತೇಕ ವಿಕಲಚೇತನರು ಸಾಧನೆಯ ಗುರಿಯೊಂದಿಗೆ ಏನಾದರೊಂದು ಕೆಲಸ ಮಾಡುತ್ತಾರೆ. ಆದರೆ, ಕೆಲವರು ಮಾತ್ರ ತಮ್ಮಲ್ಲಿರುವ ಅಂಗ ವೈಫಲ್ಯವನ್ನೇ ಬಂಡವಾಳ ಮಾಡಿಕೊಂಡು ಭಿಕ್ಷಾಟನೆ ಮಾಡುವುದು ಬೇಸರದ ಸಂಗತಿ ಎಂದರು.ವಿಕಲ ಚೇತನರಿಗಾಗಿ ಸರ್ಕಾರ ಮೀಸಲಾತಿ ಸೇರಿದಂತೆ ಹಲವು ಬಗೆಯ ಸವಲತ್ತುಗಳನ್ನು ನೀಡುತ್ತಿದೆ. ಸರ್ಕಾರದ ಎಲ್ಲ ಸೌಲಭ್ಯ ಸದುಪಯೋಗ ಪಡಿಸಿಕೊಂಡು ಸ್ವಾಭಿಮಾನದ ಬದುಕು ನಡೆಸಬೇಕು ಎಂದರು.
ಮನುಷ್ಯರನ್ನು ಮನುಷ್ಯರಂತೆ ಕಾಣುವುದೇ ಮಾನವ ರಕ್ಷಣೆ. ಮಾನವ ಹಕ್ಕುಗಳ ಉಲ್ಲಂಘನೆ ಮತ್ತೊಬ್ಬ ಮಾನವನಿಂದಲೇ ಆಗುತ್ತದೆ ಹೊರತು ಯಾವುದೇ ಪ್ರಾಣಿ ಪಕ್ಷಿ ಅಥವಾ ಪರಿಸರದಿಂದ ಆಗುವುದಿಲ್ಲ ಎಂದರು.ಮನುಷ್ಯ ಮನುಷ್ಯರೇ ಶತ್ರುಗಳಂತೆ ಬದುಕುತ್ತಿದ್ದೇವೆ. ನಮ್ಮ ಹಕ್ಕುಗಳ ಬಗ್ಗೆ ಮಾತ್ರ ಹೋರಾಟ ನಡೆಸುತ್ತಿದ್ದೇವೆ. ಆದರೆ, ಹಕ್ಕುಗಳ ಜೊತೆಗೆ ನಮ್ಮ ಕರ್ತವ್ಯಗಳನ್ನು ಮರೆಯುತ್ತಿದ್ದೇವೆ. ನಮ್ಮ ಹಕ್ಕುಗಳ ಜೊತೆಗೆ ಬೇರೆಯವರ ಹಕ್ಕುಗಳ ಬಗ್ಗೆಯೂ ಗೌರವಿಸಬೇಕು ಎಂದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಜೆ.ಕೆ.ರಮೇಶ್‌ಗೌಡ ಮಾತನಾಡಿ, ಒಬ್ಬ ಮನುಷ್ಯ ಘನತೆಯಿಂದ ಬದುಕಲು ವಿಶೇಷ ಚೇತನರಿಗೆ ದೈಹಿಕ ನ್ಯೂನ್ಯತೆಯೇ ಸಮಸ್ಯೆಯಾಗಬಾರದು ಅನ್ನುವ ಮೂಲ ಉದ್ದೇಶದಿಂದ ಆಗಿರುವಂತಹ ಒಂದು ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಲು ಮತ್ತು ಸಂಘಟಿತರಾಗಲು ಇದೊಂದು ಕಾರಣ ಮತ್ತು ಭೂಮಿಕೆಯಾಗಬೇಕು. ಹಾಗಾಗಿ ವಿಶೇಷ ಚೇತನರಿಗೆ ಸರ್ಕಾರ ನೀಡುತ್ತಿರುವ ಯಾವುದೇ ಸವಲತ್ತುಗಳು ಭಿಕ್ಷೆಯಲ್ಲ ಎಂದರು.ಒಬ್ಬ ಮನುಷ್ಯ ಸಮ ಸಮಾಜದ ದೃಷ್ಟಿಯಿಂದ ಬದುಕು ನಡೆಸಲು ಆಡಳಿತಾರೂಢ ಸರ್ಕಾರಗಳು ಮಾಡಬೇಕಾದ ಅನಿವಾರ್ಯವಾದ ಕರ್ತವ್ಯ. ಆ ಕರ್ತವ್ಯವನ್ನು ಒದಗಿಸುವಂತೆ ಕೇಳಲು ಯಾರೂ ಸಹ ಹಿಂಜರಿಕೆಯನ್ನು ಬಿಟ್ಟು ಅದು ನಮ್ಮ ಹಕ್ಕು ಎನ್ನುವಂತೆ ಸರ್ಕಾರವನ್ನು ಕೇಳಬೇಕು ಎಂದರು.
ಅಂತಾರಾಷ್ಟ್ರೀಯ ವಿಶೇಷ ಚೇತನರ ಹಕ್ಕು ಮತ್ತು ಸೌಲಭ್ಯಗಳ ಕುರಿತು ಗ್ರಾಮೀಣ ವಿಕಲಚೇತನರ ಪುನರ್ವಸತಿ ಕಾರ್ಯಕರ್ತ ಲಿಂಗಣ್ಣ ಎಸ್.ಜೇವರ್ಗಿ ಉಪನ್ಯಾಸ ನೀಡಿದರು. ವಿಶ್ವ ಮಾನವ ಹಕ್ಕು ವಿಷಯ ಕುರಿತು ವಕೀಲ ಕೆ.ಬಿ.ಶುಭಮೂರ್ತಿ ಮಾತನಾಡಿದರು. ತಾಪಂ ಇಒ ವೈ.ಎನ್.ಚಂದ್ರಮೌಳಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕಿನ ಎಲ್ಲ ವಿಶೇಷ ಚೇತನರಿಗೆ ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನಿರೀಕ್ಷಕ ಶ್ರೀನಿವಾಸಮೂರ್ತಿ ಉಚಿತವಾಗಿ ದಿನಚರಿ ಪಸ್ತಕಗಳನ್ನು ವಿತರಿಸಿದರು.ಕಾರ್ಯಕ್ರಮದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕಿ ಟಿ.ಆರ್.ಶ್ರೀದೇವಿ, ತಾಪಂ ಆಡಳಿತ ಸಹಾಯಕ ನಿರ್ದೇಶಕ ವಿ.ಕೃಷ್ಣಮೂರ್ತಿ, ಅಪರ ಸರ್ಕಾರಿ ವಕೀಲ ಪಿ.ಸಿ.ಮಂಜುನಾಥ್, ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರ ಸಂಯೋಜಕರಾದ ಬಿ.ಸಿದ್ದರಾಜು, ಎಸ್.ಚಂದ್ರಕಲಾ, ಎನ್‌ಆರ್‌ಎಲ್‌ಎಂ ಸಂಯೋಜಕ ಸುರೇಂದ್ರ, ನ್ಯಾಯಾಲಯದ ಸೋನುಮೂರ್ತಿ, ತಾಲೂಕಿನ ಎಲ್ಲಗ್ರಾಪಂ ಪಿಡಿಒಗಳು, ತಾಪಂ ಸಿಬ್ಬಂದಿ ಮತ್ತು ವಿಶೇಷ ಚೇತನರು ಇದ್ದರು.