ಮೈಕೊರೆಯುವ ಚಳಿಗೆ ಕಂಗಾಲಾದ ಜನತೆ

| Published : Jan 06 2025, 01:02 AM IST

ಸಾರಾಂಶ

ಧಿಕವಾಗಿ ಚಳಿ ಇರುವುದರಿಂದ ಬಿಸಿಲು ಬಂದ ನಂತರ ವಾಯುವಿಹಾರಕ್ಕೆ ಹೋಗುತ್ತಿರುವುದು ಕಂಡು ಬರುತ್ತಿದೆ.

ಶರಣು ಸೊಲಗಿ ಮುಂಡರಗಿ

ಕಳೆದ 4-5 ದಿನಗಳಿಂದ ಮುಂಡರಗಿ ಸೇರಿದಂತೆ ತಾಲೂಕಿನಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಚಳಿ ಪ್ರಾರಂಭವಾಗಿದ್ದು, ಮೈಕೊರೆಯುವ ಚಳಿಗೆ ಜನತೆ ಕಂಗಾಲಾಗಿದ್ದಾರೆ.

ಅತಿಯಾದ ಚಳಿಯಿಂದ ಬೆಳಗಿನ ಸಮಯದಲ್ಲಿ ಸಾರ್ವಜನಿಕರು ರಸ್ತೆ ಅಕ್ಕಪಕ್ಕ, ಬಜಾರ, ಬಸ್ ನಿಲ್ದಾಣದ ಹತ್ತಿರ ಬೆಂಕಿ ಹಾಕಿಕೊಂಡು ಗುಂಪುಗುಂಪಾಗಿ ಬಿಸಿ ಕಾಯಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.

ಎಷ್ಟೇ ಚಳಿ, ಗಾಳಿ ಇದ್ದರೂ ಸಹ ದಿನಪತ್ರಿಕೆ ತಲುಪಿಸುವ ಪತ್ರಿಕಾ ವಿತರಕರು, ಹಾಲು ಸರಬರಾಜು ಮಾಡುವವರು, ತರಕಾರಿ ಮಾರಾಟಗಾರರು ಹಾಗೂ ರೈತರು ಚಳಿ ಲೆಕ್ಕಿಸದೇ ಸ್ವೇಟರ್ ಧರಿಸಿ ಬರುವುದನ್ನು ಕಾಣಬಹುದಾಗಿದೆ. ಗ್ರಾಮೀಣ ಪ್ರದೇಶದಿಂದ ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳೂ ಸಹ ಬೆಳಗಿನ ಚಳಿಯಲ್ಲಿ ಮುದುಡಿಕೊಂಡೇ ಬರುತ್ತಾರೆ.

ಪ್ರತಿದಿನ ಬೆಳಗ್ಗೆ ವಾಯುವಿಹಾರಕ್ಕೆಂದು ಹೋಗುವವರಿಂದ ತುಂಬಿ ತುಳುಕುತ್ತಿದ್ದ ಹೆಸರೂರ, ರಾಮೇನಹಳ್ಳಿ, ಮುಂಡರಗಿ-ಶಿರಹಟ್ಟಿ, ಕೊಪ್ಪಳ, ಘಟ್ಟಿರಡ್ಡಿಹಾಳ, ಗದಗ ಮುಂಡರಗಿ, ಕನಕರಾಯಣ ಗುಡ್ಡದ ರಸ್ತೆ ಸೇರಿದಂತೆ ಎಲ್ಲ ರಸ್ತೆಗಳು ಬಿಕೋ ಎನ್ನುತ್ತಿವೆ. ಅಧಿಕವಾಗಿ ಚಳಿ ಇರುವುದರಿಂದ ಬಿಸಿಲು ಬಂದ ನಂತರ ವಾಯುವಿಹಾರಕ್ಕೆ ಹೋಗುತ್ತಿರುವುದು ಕಂಡು ಬರುತ್ತಿದೆ.

ಹೆಚ್ಚಿನ ಚಳಿ ಇರುವ ಹಿನ್ನೆಲೆಯಲ್ಲಿ ಬೆಳಗ್ಗೆ ಹೊಟೇಲ್ ಹೊರತುಪಡಿಸಿ ಇತರೆ ವ್ಯಾಪಾರ ವಹಿವಾಟುಗಳು 9ಗಂಟೆಯ ನಂತರವೇ ಪ್ರಾರಂಭಗೊಳ್ಳುತ್ತಿವೆ. ಗ್ರಾಮೀಣ ಪ್ರದೇಶದ ಜನತೆ 11 ಗಂಟೆಯ ನಂತರ ಪಟ್ಟಣಕ್ಕೆ ಬರುವುದು ಕಂಡು ಬರುತ್ತಿದೆ. ತಮ್ಮ ನಿತ್ಯದ ಕೆಲಸ ಕಾರ್ಯಗಳನ್ನು ಸಂಜೆ 6-30 ಗಂಟೆಯೊಳಗೆ ಮುಗಿಸಿಕೊಂಡು 7-30 ರಿಂದ 8 ಗಂಟೆಯೊಳಗೆ ಎಲ್ಲರೂ ತಮ್ಮ ಗ್ರಾಮ ಹಾಗೂ ಮನೆಗಳನ್ನು ಸೇರುತ್ತಿರುವುದು ಕಂಡು ಬರುತ್ತಿದೆ. ಹೀಗಾಗಿ ಸಂಜೆ ವೇಳೆಗೆ ಬಜಾರದಲ್ಲಿ ಹೆಚ್ಚಿನ ಜನ ಜಂಗುಳಿ ಕಂಡು ಬರುತ್ತಿಲ್ಲ.

ಚಳಿಯಿಂದ ಜ್ವರ, ನೆಗಡಿ, ಶೀತ, ಕೆಮ್ಮು ಹೆಚ್ಚಾಗುತ್ತದೆ. ಅಸ್ತಮಾ ಕಾಯಿಲೆ ಇರುವವರು ಅತಿಯಾದ ಚಳಿಯಿಂದ ಹೆಚ್ಚಿನ ಜಾಗೃತಿವಹಿಸುವುದು ಅವಶ್ಯ. ಈ ಸಂದರ್ಭದಲ್ಲಿ ಅಸ್ತಮಾ ಉಲ್ಬಣಗೊಳ್ಳುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಆದಷ್ಟು ಬಿಸಿ ನೀರನ್ನು ಸೇವಿಸುವುದು ಸೂಕ್ತ. ಬೆಳಗ್ಗೆ ಹಾಗೂ ಸಂಜೆ ಮನೆಯಿಂದ ಹೊರಗೆ ಹೋಗುವಾಗ ಸ್ವೇಟರ್ ಹಾಗೂ ಉಣ್ಣೆ ಟೊಪ್ಪಿಗೆ ಹಾಕಿಕೊಂಡು ದೇಹವನ್ನು ಬೆಚ್ಚಗೆ ಇಟ್ಟುಕೊಳ್ಳುವುದು ಒಳ್ಳೆಯದು ಎಂದು ಮುಂಡರಗಿ ಖ್ಯಾತ ವೈದ್ಯ ಡಾ. ವಿ.ಕೆ.ಸಂಕನಗೌಡರ ತಿಳಿಸಿದ್ದಾರೆ.