ಸಾರಾಂಶ
ಚಾಮರಾಜನಗರ : ಸಿಎಂ ಸಿದ್ದರಾಮಯ್ಯ ಅವರ ನೈತಿಕತೆ ಬೆಂಬಲಿಸಿ ಮೈಸೂರಿನಲ್ಲಿ ಜನಾಂದೋಲನ ಸಮಾವೇಶವನ್ನು ಆ. 9ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ತಿಳಿಸಿದರು.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಕಪ್ಪುಚುಕ್ಕಿ ಇಲ್ಲದೇ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ರಾಜ್ಯದಲ್ಲಿ ಆಡಳಿತ ನಡೆಸಿದ್ದಾರೆ. ಅಲ್ಲದೇ ಚುನಾವಣೆ ಮುನ್ನ ನೀಡಿದ ಐದು ಗ್ಯಾರಂಟಿ ಭರವಸೆಗಳನ್ನು ಜಾರಿಗೊಳಿಸಿ ಜನಪ್ರಿಯರಾಗಿದ್ದಾರೆ. ಅವರ ಏಳಿಗೆಯನ್ನು ಸಹಿಸದೇ ಸಿದ್ದರಾಮಯ್ಯ ಅವರ ಮೇಲೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರು ಇಲ್ಲಸಲ್ಲದ ಆರೋಪಗಳನ್ನು ಮಾಡಿ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ ಎಂದರು.ಸಿದ್ದರಾಮಯ್ಯ ಅವರ ಮೇಲೆ ಮಾಡಿರುವ ಮುಡಾ ನಿವೇಶನ ಆರೋಪವನ್ನು ರಾಜ್ಯಪಾಲರು ಯಾವುದೇ ವಿಚಾರ ಮಾಡದೇ ಬಿಜೆಪಿ ಕೈಗೊಂಬೆಯಂತೆ ನೋಟಿಸ್ ಕಳುಹಿಸಿದ್ದಾರೆ. ಆದರೇ ಮುಡಾ ನಿವೇಶನ ಪಡೆಯುವಾಗ ಮುಖ್ಯಮಂತ್ರಿಯಾಗಿದ್ದ ಬೊಮ್ಮಯಿ ಅವರನ್ನು ತನಿಖೆಗೆ ಒಳಪಡಿಸಿಲ್ಲ. ದೂರು ಕೊಟ್ಟ ಕೆಲವೇ ಘಂಟೆಗಳಲ್ಲೇ ದೂರು ದಾಖಲಿಸಿಕೊಂಡಿದ್ದಾರೆ ಎಂದರು.
ಕೊಳ್ಳೇಗಾಲ ಶಾಸಕ ಎ.ಆರ್ ಕೃಷ್ಣಮೂರ್ತಿ ಮಾತನಾಡಿ, ಮುಡಾ ಹಗರಣ ಸಂಬಂಧ ಸಿದ್ದರಾಮಯ್ಯ ವಿರುದ್ಧ ಬಿಜೆಪಿ, ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆ ವಿರೋಧಿಸಿ ಮೈಸೂರಿನಲ್ಲಿ ಆ.9 ರಂದು ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಜನಾಂದೋಲನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಕ್ಷತೆ, ಪ್ರಾಮಾಣಿಕತೆಗೆ ಹೆಸರಾಗಿದ್ದಾರೆ. ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು ಇವರ ಜನಪ್ರಿಯತೆ ಸಹಿಸಲಾಗದೇ ವಿರೋಧ ಪಕ್ಷಗಳು ಇಲ್ಲ ಸಲ್ಲದ ಆರೋಪ ಮಾಡುತ್ತಿವೆ ಎಂದರು.
ಈಗಾಗಲೇ ಬಿಡದಿ, ರಾಮನಗರ, ಚೆನ್ನಪಟ್ಟಣ, ಮದ್ದೂರು, ಮಂಡ್ಯದಲ್ಲಿ ಜನಾಂದೋಲನ ಕಾರ್ಯಕ್ರಮ ನಡೆದಿದೆ. ನಾಳೆ ಮೈಸೂರಿನಲ್ಲಿ ನಡೆಯುವ ಜನಾಂದೋಲನಲ್ಲಿಯೂ ರಾಷ್ಟ್ರ, ರಾಜ್ಯ ನಾಯಕರು ಭಾಗವಹಿಸಲಿದ್ದಾರೆ. ಜನಾಂದೋಲನ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಸರ್ಕಾರ ಇದ್ದಾಗಲೂ ಕೂಡ ಅನೇಕ ಹಗರಣಗಳು ನಡೆದಿದ್ದು, ಅದನ್ನು ಸಿಬಿಐ, ಎಸ್‌ಐಟಿಗೆ ವಹಿಸಲಿಲ್ಲ. ಅಲ್ಲದೆ ಬಿಜೆಪಿ ಪಕ್ಷದಲ್ಲಿ ನಾಯಕತ್ವ ವಿಚಾರದಲ್ಲಿ ಹಗ್ಗ ಜಗ್ಗಾಟ ನಡೆಯುತ್ತಿದ್ದು ಅದನ್ನು ಮರೆಮಾಚುವ ನಿಟ್ಟಿನಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದು, ಅನೇಕ ಬಿಜೆಪಿ ನಾಯಕರು ಪಾದಯಾತ್ರೆಯಲ್ಲಿ ಭಾಗವಹಿಸಿಲ್ಲ. ನಾಯಕತ್ವಕ್ಕಾಗಿ ಗುಂಪುಗಾರಿಕೆ ನಡೆಯುತ್ತಿರುವುದು ಜನರಿಗೆ ತಿಳಿಯಲಿದೆ ಎಂದರು.
ಅಲ್ಲದೇ ಆ.10 ರಂದು ಆಲೂರು ಗ್ರಾಮದಲ್ಲಿ ಮಾಜಿ ರಾಜ್ಯಪಾಲರಾದ ಬಿ. ರಾಚಯ್ಯ ಸ್ಮಾರಕವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದು ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ಸಚಿವರು, ಶಾಸಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಕರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಮುಖಂಡರಾದ ಕೆ.ಪಿ.ಸದಾಶಿವಮೂರ್ತಿ, ಉಮೇಶ್ ಇದ್ದರು.