ಸಾರಾಂಶ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಗೌರವ ಧನದ ಆಧಾರದಲ್ಲಿ ದುಡಿಯುತ್ತಿರುವ ನೌಕರರಿಗೆ ಕೂಡಲೇ 7ನೇ ವೇತನ ಆಯೋಗದ ಶಿಫಾರಸ್ಸಿನ ಶೇ.50 ರಷ್ಟು ವೇತನ ನೀಡಬೇಕೆಂದು ಜಿಲ್ಲಾ ಬಿಸಿಯೂಟ ಕಾರ್ಯಕರ್ತರು ಹಾಗೂ ಗ್ರಾಪಂ ನೌಕರರು ಮತ್ತು ಇತರೆ ಅರೆ ಸರ್ಕಾರಿ ನೌಕರರ ಕ್ರಿಯಾ ಸಮಿತಿ (ಎಐಟಿಯುಸಿ) ಆಗ್ರಹಿಸಿದೆ.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಜಿಲ್ಲಾ ಕಾರ್ಯದರ್ಶಿ ಎಸ್.ವಿಜಯಕುಮಾರ್, ಕೆಳಹಂತದ ನೌಕರರಿಗೆ ಕೆಲಸಕ್ಕೆ ತಕ್ಕ ಪಿಎಫ್, ಇಎಸ್‌ಐ, ವೈದ್ಯಕೀಯ ಸೌಲಭ್ಯ, ರಜೆ, ನಿವೃತ್ತಿ ಉಪಧನ, ನಿವೃತ್ತಿ ವೇತನಗಳನ್ನು ಕಡ್ಡಾಯಗೊಳಿಸುವ ಜೊತೆಗೆ ವೇತನ ಹೆಚ್ಚಳಕ್ಕೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ಎಲ್ಲಾ ಸಂಘಟನೆಗಳ ಸಂಯುಕ್ತಾಶ್ರ ಯದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ರಾಜ್ಯದಲ್ಲಿ 1,20,000 ಬಿಸಿಯೂಟ ಮಹಿಳೆಯರಿಗೆ ಸುಮಾರು 65 ಸಾವಿರ ಅಂಗನವಾಡಿ ಮಹಿಳೆಯರಿಗೆ, ಆಶಾ ಕಾರ್ಯ ಕರ್ತೆಯರಿಗೆ ಹಾಗೂ ರಾಜ್ಯದ ಸುಮಾರು 6,300 ಗ್ರಾಮ ಪಂಚಾಯಿತಿಗಳಲ್ಲಿ ದುಡಿಯುತ್ತಿರುವ ಮತ್ತು ರಾಜ್ಯಾದ್ಯಂತ ಕಂದಾಯ ಇಲಾಖೆ ಸೇವೆಯಲ್ಲಿ ತೊಡಗಿರುವ ಗ್ರಾಮ ಸಹಾಯಕರಿಗೆ ತಮ್ಮ ಕೆಲಸಕ್ಕೆ ತಕ್ಕ ಸಂಬಳ ನೀಡುವಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಸರ್ಕಾರ ಸಹ ವಿಫಲವಾಗಿವೆ ಎಂದು ಆರೋಪಿಸಿದರು.ರಾಜ್ಯ ಸರ್ಕಾರದ ಸುಮಾರು 12.20 ಲಕ್ಷ ಇರುವ ನೌಕರರಿಗೆ ಕೆಲವು ಆಯೋಗಗಳ ಶಿಫಾರಸ್ಸಿನ ಮೇಲೆ ಪರಿಷ್ಕೃತ ವೇತನ ಜಾರಿ ಮಾಡಿದ ಸರ್ಕಾರವೇ ಹೇಳುವಂತೆ ವರ್ಷಕ್ಕೆ ಸುಮಾರು 20,207 ಕೋಟಿಗಳಷ್ಟು ಹೆಚ್ಚುವರಿ ವೇತನ ನೀಡಲಿದೆ. ಆದರೆ ಸರ್ಕಾರದ ಅಧೀನದಲ್ಲಿ ಕೆಲಸ ನಿರ್ವಹಿಸುವ ಬಿಸಿಯೂಟ ಕಾರ್ಯಕರ್ತೆಯರಿಗೆ ತಿಂಗಳಿಗೆ ಕೇವಲ 3,700 ನೀಡುತ್ತಿದ್ದು, ಇವರಿಗೆ ಅಪಘಾತ, ಅನಾಹುತಗಳಾದಲ್ಲಿ ಯಾವುದೇ ಪರಿಹಾರ ಇಲ್ಲ ಎಂದರು.
ನಿವೃತ್ತಿರಾದ ಕಾರ್ಯಕರ್ತೆಯರು ಮತ್ತು ಮಕ್ಕಳ ಸಂಖ್ಯೆ ಕೊರತೆಯಿಂದ ಕೈಬಿಡಲಾಗಿರುವ ಹತ್ತಾರು ವರ್ಷಗಳ ಸೇವೆ ಸಲ್ಲಿಸಿದ ಕಾರ್ಯಕರ್ತೆರಿಗೆ ಈ ಸೌಲಭ್ಯದ ಬಗ್ಗೆ ಮಾಹಿತಿ ಇಲ್ಲ, ವೈದ್ಯಕೀಯ ಹಾಗೂ ನಿವೃತ್ತಿ ವೇತನ, ಪಿಎಫ್, ಇಎಸ್‌ಐ ಗಳಂತಹ ಯಾವುದೇ ಸೌಲಭ್ಯವಿರುವುದಿಲ್ಲ. ಅದೇ ರೀತಿಯಲ್ಲಿ ಗ್ರಾಮ ಪಂಚಾಯಿತಿ ನೌಕರರು ಗ್ರಾಮದ ಏಳಿಗೆಗಾಗಿ ಹಗಲು ಇರುಳು ದುಡಿಯುತ್ತಿದ್ದರೂ ಇವರಲ್ಲಿ ಬಹುತೇಕರಿಗೆ ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ಆಗದೆ ನಿವೃತ್ತಿ ಮತ್ತು ಸಾವು ನೋವುಗಳು ಆದಲ್ಲಿ ಯಾವುದೇ ಸೌಲಭ್ಯವಿರುವುದಿಲ್ಲ ಎಂದು ತಿಳಿಸಿದರು.ಮಕ್ಕಳ ಆರೈಕೆ, ಗರ್ಭಿಣಿಯರ ಆರೈಕೆ ಹಾಗೂ ಸರ್ಕಾರದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು ಹಾಗೂ ತಮ್ಮ ಜೀವವನ್ನು ಲೆಕ್ಕಿಸದೆ ಗ್ರಾಮದ ಗ್ರಾಮಸ್ಥರ ಬಳಿ ಹೋಗಿ ಮಾಹಿತಿ ಪಡೆದು ಆರೈಕೆ ಮಾಡುವ ಕೋವಿಡ್ ಇತರೆ ಸಂದರ್ಭದಲ್ಲಿ ಆರೋಗ್ಯ ಇಲಾಖೆಗಳೊಂದಿಗೆ ಹೆಚ್ಚಿನ ಶ್ರಮ ಹಾಕಿದ ಆಶಾ ಕಾರ್ಯಕರ್ತೆಯರು, ರಾಜ್ಯದ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ ಕಂದಾಯ ಇಲಾಖೆಗೆ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಸಹಾಯಕರಿಗೆ ಯಾವುದೇ ಸರ್ಕಾರಿ ಸೌಲಭ್ಯ ದೊರೆತಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷ ಜಿ.ರಘು, ಪುಷ್ಪಾವತಿ, ಇಂದುಮತಿ, ಸಬೀಮ್‌ಭಾನು, ರಾಜೇಗೌಡ ಇದ್ದರು.